Site icon Vistara News

Karnakata BJP: ವಿಪಕ್ಷ ನಾಯಕನ ಆಯ್ಕೆಗೆ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ಏನೆಂದರು ಯಡಿಯೂರಪ್ಪ?

bjp leaders

bjp leaders

ಬೆಂಗಳೂರು: ವಿಪಕ್ಷ ನಾಯಕನ ಆಯ್ಕೆಗೆ ಸಂಬಂಧಿಸಿ ಶಾಸಕರ ಅಭಿಪ್ರಾಯ ಪಡೆಯಲು ಬಿಜೆಪಿ (Karnakata BJP) ಶಾಸಕಾಂಗ ಪಕ್ಷದ ಸಭೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಸಂಜೆ ಆರು ಗಂಟೆಗೆ ನಡೆಯಲಿದೆ.

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ನೇತೃತ್ವದ ಸಭೆಯಲ್ಲಿ ನೂತನ ಬಿಜೆಪಿ ಶಾಸಕರು ಭಾಗಿಯಾಗಲಿದ್ದಾರೆ. ವಿಪಕ್ಷ ನಾಯಕನ ಆಯ್ಕೆಗೆ ಸಂಬಂಧಿಸಿ ಶಾಸಕರಿಂದ ಅಭಿಪ್ರಾಯ ಸಂಗ್ರಹ ನಡೆಯಲಿದೆ. ದೆಹಲಿಯಿಂದ ವೀಕ್ಷಕರಾಗಿ ವಿನೋದ ತಾವಡೆ ಮತ್ತು ಮನ್ಸೂಕ್ ಮಾಂಡವೀರ ಬರಲಿದ್ದಾರೆ.

ಇದಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಬಿ.ಎಸ್.‌ ಯಡಿಯೂರಪ್ಪ ಹೇಳಿಕೆ ನೀಡಿದ್ದು, ಪಕ್ಷದ ವೀಕ್ಷಕರು ಆಗಮಿಸುವ ಕುರಿತು ಮಾಹಿತಿ ನೀಡಿದ್ದಾರೆ.

ಗೃಹ ಸಚಿವ ಅಮಿತ್ ಶಾ, ನಮ್ಮ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನ ಭೇಟಿ ಆಗಿ ಬಂದಿದ್ದೇನೆ. ಕರ್ನಾಟಕದ ರಾಜಕೀಯ ಪರಿಸ್ಥಿತಿ ಕೇಳಿ ವರದಿ ಪಡೆದುಕೊಂಡಿದ್ದಾರೆ. ಅಗತ್ಯ ಬಿದ್ದರೆ ಫೋನ್ ಮಾಡುತ್ತೇವೆ. ಆಗ ಬರಬೇಕು. ಇನ್ನೆರಡು ದಿನದಲ್ಲಿ ಹೇಳತ್ತೇವೆ ಎಂದು ಶಾ ಹೇಳಿದ್ದಾರೆ. ಎಲ್ಲಾ ವಾತಾವರಣ ತಿಳಿದುಕೊಂಡು ಮುಂದೆ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತಾರೆ ಎಂದು ಬಿಎಸ್‌ವೈ ಹೇಳಿದ್ದಾರೆ.

ವಿಪಕ್ಷ ನಾಯಕ ಆಯ್ಕೆ ವಿಚಾರವಾಗಿ ಇಂದು ಇಬ್ಬರು ವೀಕ್ಷಕರನ್ನು ಕಳುಹಿಸಿ ಕೊಡುತ್ತೇವೆ ಎಂದಿದ್ದಾರೆ. ವಿನೋದ್ ತಾವಡೆ ಮತ್ತು ಮನ್ಸೂಕ್ ಮಾಂಡವೀಯ ಅವರನ್ನು ವೀಕ್ಷಕರಾಗಿ ಕಳುಹಿಸಿಕೊಡುತ್ತಿದ್ದಾರೆ. ಅವರೆಲ್ಲ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್‌ಗೆ ತಿಳಿಸುತ್ತಾರೆ. ವಿಪಕ್ಷ ನಾಯಕ ಸೇರಿದಂತೆ ಇನ್ನುಳಿದ ತೀರ್ಮಾನವನ್ನು ನಮ್ಮ ನಾಯಕರು ತೆಗೆದುಕೊಳ್ಳಲಿದ್ದಾರೆ. ನಾಳೆ ಅಧಿವೇಶನಕ್ಕೆ ವಿಪಕ್ಷ ನಾಯಕ ಇರುವುದಿಲ್ಲ. ಆದರೆ ಇನ್ನೆರಡು ದಿನದ ಒಳಗಾಗಿ ವಿಪಕ್ಷ ನಾಯಕ ಯಾರು ಎಂಬ ತೀರ್ಮಾನವನ್ನು ಹೈಕಮಾಂಡ್ ನಾಯಕರು ಮಾಡುತ್ತಾರೆ ಎಂದು ಬಿಎಸ್‌ವೈ ತಿಳಿಸಿದ್ದಾರೆ.

ಇದನ್ನೂ ಓದಿ: Assembly Session Karnataka: ಇಂದಿನಿಂದ ಜಂಟಿ ಅಧಿವೇಶನ, ರಾಜ್ಯಪಾಲರ ಭಾಷಣ, ವಿಪಕ್ಷ ನಾಯಕನ ಕುರ್ಚಿ ಖಾಲಿ

Exit mobile version