Site icon Vistara News

ವಾಹನಗಳ ಮೇಲೆ ಅನಧಿಕೃತ ಸರ್ಕಾರಿ ಲಾ೦ಛನ, ಚಿಹ್ನೆ ಬಳಕೆಗೆ ತಡೆ

ಸರ್ಕಾರ

ಫೈಲ್‌ ಫೋಟೊ

ಬೆಂಗಳೂರು: ತಮ್ಮ ವಾಹನಗಳ ಮೇಲೆ ಅನಧಿಕೃತವಾಗಿ  ಸರ್ಕಾರಿ ಲಾ೦ಛನ/ಚಿಹ್ನೆಗಳನ್ನು ಅಳವಡಿಸಿಕೊಂಡು ತಾವು ವಿಐಪಿಗಳೆಂಬಂತೆ ಮೆರೆಯುತ್ತಿದ್ದವರ ಮೇಲೆ ಸರ್ಕಾರ ಚಾಟಿ ಬೀಸಿದೆ.

ಇನ್ನು ಮುಂದೆ ಈ ರೀತಿ ವರ್ತಿಸಿದರೆ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳುವುದರ ಜತೆಗೆ ನ್ಯಾಯಾಂಗ ನಿಂಧನೆಯ ಪ್ರಕರಣವನ್ನು ದಾಖಲಿಸಿ, ಸುಪ್ರೀಂ ಕೋರ್ಟ್‌ಗೆ  ಮಾಹಿತಿ ನೀಡಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಎಚ್ಚರಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಕಳೆದ ಜನವರಿಯಲ್ಲಿ ನೀಡಿದ ತೀರ್ಪಿನನ್ವಯ ಈ ಸಂಬಂಧ ಸೂಕ್ತ ಕ್ರಮ  ತೆಗೆದುಕೊಳ್ಳುವಂತೆ ಸುತ್ತೋಲೆ ಹೊರಡಿಸಿರುವ ಅವರು, ಅಕ್ರಮವಾಗಿ ಸರ್ಕಾರಿ ಲಾಂಛನ ಮತ್ತು ಚಿಹ್ನೆಗಳ ಬಳಕೆ ತಡೆಗೆ ಸಾಧ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.

ಸರ್ಕಾರದ ನಿಗಮ, ಮಂಡಳಿ, ಸ೦ಸ್ಥೆಗಳ ವಾಹನಗಳ ಮೇಲೆ ಅನಧಿಕೃತವಾಗಿ ಅಳವಡಿಸಿರುವ ಎಲ್ಲ ಸರ್ಕಾರಿ ಲಾ೦ಛನ/ಚಿಹ್ನೆಗಳನ್ನು ತೆರವುಗೊಳಿಸಬೇಕು ಮತ್ತು ಈ ಮಾಹಿತಿಯನ್ನು ಸಾರಿಗೆ ಆಯುಕರಿಗೆ ನೀಡಬೇಕು. ಒ೦ದು ವೇಳೆ ನಿಗಮ, ಮ೦ಡಳಿ ಹಾಗೂ ಇತರೆ ಸ೦ಸ್ಥೆಗಳ ವಾಹನಗಳ ಮೇಲೆ ಅಳವಡಿಸಲಾಗಿರುವ ಅನಧಿಕೃತ ಲಾಂಛನ ತೆರವುಗೊಳಿಸಲು ವಿಫಲರಾದಲ್ಲಿ ಅ೦ತಹ ಮಂಡಳಿ, ನಿಗಮಗಳ ಹಾಗೂ ಸ೦ಸ್ಥೆಗಳ ಮುಖ್ಯಸ್ಥರು ಹಾಗೂ ಆಯಾ ಕಚೇರಿಗಳ ಮುಖ್ಯಸ್ಥರನ್ನು ನೇರ ಜವಾಬ್ದಾರರನ್ನಾಗಿಸಿ ನ್ಯಾಯಾಂಗ ನಿ೦ದನಾಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ಶಿಫಾರಸು ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ವಾಹನಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ ಸರ್ಕಾರದ ನಿಗಮ, ಮಂಡಳಿ ಹಾಗೂ ಸಂಸ್ಥೆಗಳಲ್ಲಿ ಬಳಕೆಯಾಗುತ್ತಿದ್ದ ಇತರ ವಾಹನಗಳಿಗೂ ಇದು ಅನ್ವಯವಾಗಲಿದೆ.

ಖಾಸಗಿಯವರ ವಿರುದ್ಧ ಕ್ರಮ

ಖಾಸಗಿ ಸ೦ಸ್ಥೆಗಳು, ವ್ಯಕ್ತಿಗಳು ತಮ್ಮ ವಾಹನಗಳ ಮೇಲೆ ಅನಧಿಕೃತವಾಗಿ ಸರ್ಕಾರದ ಲಾ೦ಛನ, ಚಿಹ್ನೆಗಳನ್ನು ಅಳವಡಿಸಿರುವುದು ಕಂಡುಬಂದಲ್ಲಿ (ನಾಮಫಲಕಗಳಲ್ಲಿ ಅಧ್ಯಕ್ಷರು/ಕಾರ್ಯದರ್ಶಿ ಇತ್ಯಾದಿ ಹೆಸರು) ಅ೦ತಹ ನೋಂದಣಿ ಫಲಕಗಳನ್ನು ತೆರವುಗೊಳಿಸಲು ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಸುತ್ತೋಲೆ ತಿಳಿಸಿದೆ.

ಅನಧಿಕೃತವಾದ ಲಾಂಛನ ಅಥವಾ ಚಿಹ್ನೆ ಹೊಂದಿರುವ ವಾಹನಗಳ ವಿರದ್ಧ ಮೋಟಾರು ವಾಹನಗಳ ಕಾಯ್ದೆಯಡಿ ಕ್ರಮ ಜರುಗಿಸಬೇಕು. ಪೊಲೀಸರೂ ತನಿಖೆ ವೇಳೆ ಸ್ಥಳದಲ್ಲಿಯೇ ಇವುಗಳನ್ನು ತೆರವುಗೊಳಿಸಬೇಕು. ಇಂತಹ ನಾಮಫಲಗಳನ್ನು ತಯಾರಿಸುವವರ ವಿರುದ್ಧ ಕೂಡ ಪೊಲೀಸ್‌ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಈ ಕುರಿತು ಪತ್ರಿಕೆ, ಡಿಜಿಟಲ್‌, ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದೂ ತಿಳಿಸಿದೆ.

ಸರ್ಕಾರಿ ಸುತ್ತೋಲೆ ಹೀಗಿದೆ

ವಾಹನಗಳ ನೋ೦ದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಷ್ಟ್ರೀಯ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರುಗಳನ್ನು ಹೋಲುವ೦ತಹ ರಾಷ್ಟ್ರೀಯ ರಾಜ್ಯ ಮಾನವ ಹಕ್ಕುಗಳ ಒಕ್ಕೂಟ/ ಸಂಸ್ಥೆ ಇತ್ಯಾದಿ ಹೆಸರುಗಳನ್ನು ಚಿಹ್ನೆ/ ಲಾ೦ಛನಗಳನ್ನು ಹಾಗೂ ಸಂಘ-ಸ೦ಸ್ಥೆಗಳ ಹೆಸರು ಅಳವಡಿಸಿಕೊ೦ಡಿರುವುದರ ವಿರದ್ಧ 2017ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ  ನಡೆಸಿದ ಸುಪ್ರೀಂ ಕೋರ್ಟ್‌ ಈ ಸಂಬಂಧ ಸ್ಪಷ್ಟ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಅಲ್ಲದೆ ಮೇ 24ರ ಒಳಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆಯೂ ಸೂಚಿಸಿದೆ.

Exit mobile version