Site icon Vistara News

Administrative Reforms: ಸಿಎಂ ಸಿದ್ದರಾಮಯ್ಯಗೆ 7ನೇ ವರದಿ ಸಲ್ಲಿಸಿದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2

Administrative Reforms Commission

ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ 7ನೇ ವರದಿಯನ್ನು ಆಯೋಗದ ಅಧ್ಯಕ್ಷರಾದ ನಿವೃತ್ತ ಮುಖ್ಯಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಸಲ್ಲಿಸಿದರು.

ರಾಜ್ಯದಲ್ಲಿ ಈಗಿರುವ ಆಡಳಿತ ವ್ಯವಸ್ಥೆಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಲು ಮತ್ತು 21 ನೇ ಶತಮಾನದ ಮುಂಬರುವ ದಶಕಗಳಲ್ಲಿ ಉತ್ತಮ ಆಡಳಿತ ಮತ್ತು ಆಡಳಿತ ವ್ಯವಸ್ಥೆಯನ್ನು ರಚಿಸಲು ಆಡಳಿತದಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡುವ ಸಲುವಾಗಿ ಕರ್ನಾಟಕ ಸರ್ಕಾರವು 2021ರ ಜ.7ರಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ -2 ಅನ್ನು ರಚಿಸಿತ್ತು.

ಆಯೋಗವು 30 ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 4512 ಶಿಫಾರಸುಗಳನ್ನು ಒಳಗೊಂಡ ಆರು ವರದಿಗಳನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಶನಿವಾರ 7 ನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಐಟಿ, ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಆಯೋಗದ ಸದಸ್ಯ ಕಾರ್ಯದರ್ಶಿಗಳಾದ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

ಅಳವಡಿಸಿಕೊಂಡ ವಿಧಾನ

2021ರ ಜ.11 ರಿಂದ 2023ರ ಅ.31 ರವರೆಗೆ ಆಯೋಗವು 30 ಜಿಲ್ಲೆಗಳು, 74 ತಾಲೂಕುಗಳು, 171 ನಗರ/ಪಟ್ಟಣಗಳಿಗೆ ಮತ್ತು 53 ಗ್ರಾಮ ಪಂಚಾಯಿತಿಗಳಿಗೆ ಹಾಗೂ 298 ಕಚೇರಿಗಳು/ಸಂಸ್ಥೆಗಳಿಗೆ ಭೇಟಿ ನೀಡಿ 4,564 ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿ, 511 ಸಭೆಗಳನ್ನು ನಡೆಸಿದೆ. ಇದರಲ್ಲಿ ಭಾಗವಹಿಸಿದವರ ಸಂಖ್ಯೆ ಸುಮಾರು 7,647. ರಾಜ್ಯ ಸರ್ಕಾರದ ನಾಗರಿಕ ಸೇವೆಗಳನ್ನು ಪಡೆದ 25,522 ಬಳಕೆದಾರರಿಂದ ದೂರವಾಣಿ ಮೂಲಕ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ.

ಇದನ್ನೂ ಓದಿ | Water Crisis: ಬೆಂಗಳೂರಿನ ಕೊಳವೆಬಾವಿ ನೀರು ಪೂರೈಕೆ ಟ್ಯಾಂಕರ್‌ಗಳಿನ್ನು ಸರ್ಕಾರದ ಸುಪರ್ದಿಗೆ: ಡಿ.ಕೆ. ಶಿವಕುಮಾರ್

7ನೇ ವರದಿಯಲ್ಲಿ 527 ಶಿಫಾರಸು

ಆಯೋಗದ 7ನೇ ವರದಿಯಲ್ಲಿ 9 ಇಲಾಖೆಗಳನ್ನು ತೆಗೆದುಕೊಳ್ಳಲಾಗಿದ್ದು, ವರದಿಯು 527 ಶಿಫಾರಸುಗಳನ್ನು ಒಳಗೊಂಡಿದೆ. ಇದಲ್ಲದೆ, ಕಂದಾಯ ಇಲಾಖೆಗೆ ಸಂಬಂಧಿಸಿದ ಸಾಮಾನ್ಯ ಶಿಫಾರಸುಗಳನ್ನು ಸಹ ವರದಿಯಲ್ಲಿ ಸೇರಿಸಲಾಗಿದೆ.

Exit mobile version