ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್‌ಎಸ್) ನಿರ್ವಹಿಸಲು ಪ್ರತ್ಯೇಕ ಕೋಶವೊಂದನ್ನು (ಸೆಲ್) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2020- 21 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು. ಆದರೆ ಯೋಜನೆ ಲಾಭ ಪಡೆಯಲು ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಕುಟುಂಬದ ಸದಸ್ಯರಿಗೆ ಇನ್ನೂ ಸಾಧ್ಯವಾಗಿರಲಿಲ್ಲ. ಇದೀಗ ಯೋಜನಾ ವರದಿಯು ಸಿದ್ಧಗೊಂಡಿದ್ದು,ಅದರ ಪ್ರಕಾರ ಈ ಸೆಲ್ ರಚಿಸಲಾಗಿದೆ.
ಈ ಯೋಜನೆಯನ್ನು ನಿರ್ವಹಿಸಲು ಮತ್ತು ಅನುಷ್ಠಾನಕ್ಕೆ ತರಲು ʼಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ʼನಲ್ಲಿ (ಎಸ್‌ಎಎಸ್‌ಟಿ) ಒಂದು ಪ್ರತ್ಯೇಕ ಸೆಲ್ ರೂಪಿಸಲಾಗುತ್ತದೆ. ಇದರಲ್ಲಿ 23 ಮಂದಿ ಸಿಬ್ಬಂದಿ ಇರಲಿದ್ದು, ಇದರ ರಚನೆಯ ಕುರಿತು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕಳೆದ ಜನವರಿಯಲ್ಲಿ ಟ್ರಸ್ಟ್ ಸಲ್ಲಿಸಿದ ಯೋಜನಾ ವರದಿ ಪ್ರಕಾರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಸರ್ಕಾರದ ಆದೇಶ ಹೀಗಿದೆ;
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಒಳಪಟ್ಟಿದ್ದು, ಈ ಟ್ರಸ್ಟ್ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆಯನ್ನು ನಿರ್ವಹಿಸುತ್ತಿದೆ. ಸರ್ಕಾರಿ ನೌಕರರಿಗೆ ರೂಪಿಸಲಾಗಿರುವ ಈ ಯೋಜನೆ ಕೂಡ ಇದರ ಅಡಿಯಲ್ಲಿಯೇ ಬರಲಿದೆ.
ಈ ಯೋಜನೆಯ ಕಾರ್ಯನೀತಿಗೆ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ವಿವರವಾದ ಪ್ರತ್ಯೇಕ ಸೂಚನೆಗಳನ್ನು ಮುಂದೆ ನೀಡಲಾಗುವುದು ಎಂದು ಬುಧವಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.\
ಇದನ್ನೂ ಓದಿ| KSAT ಸದಸ್ಯರಾಗಿ ನಿವೃತ್ತ ಐಪಿಎಸ್ ಅಧಿಕಾರಿ ನೇಮಕ