ಮೈಸೂರು: ಜೀವ ಜಲಕ್ಕಾಗಿ ದಿನೇದಿನೆ ಹೋರಾಟಗಾರರ ಕಿಚ್ಚು ಹೆಚ್ಚಾಗುತ್ತಿದ್ದು, ಕರ್ನಾಟಕ ಬಂದ್ಗೆ (Karnataka Bandh) ಕರೆ ನೀಡಲಾಗಿದೆ. ಬಂದ್ ನಡುವೆ ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ ಎಂದು ಹೋರಾಟಗಾರರು (Cauvery Water dispute) ಆಕ್ರೋಶ ಹೊರಹಾಕಿದ್ದಾರೆ.
ಮೈಸೂರು ಕನ್ನಡ ವೇದಿಕೆ ಸದಸ್ಯರು ಸಿನಿಮಾ ಶೂಟಿಂಗ್ ಸೆಟ್ಗೆ ನುಗ್ಗಿ ಚಿತ್ರೀಕರಣ ತಡೆದು ಪ್ರತಿಭಟನೆಯನ್ನು ನಡೆಸಿದರು. ಡಾ. ರಾಜಕುಮಾರ್ ಕುಟುಂಬದ ಯುವ ರಾಜ್ಕುಮಾರ್ ಅಭಿನಯದ ಯುವ ಚಿತ್ರದ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗಿತ್ತು. ಹೀಗಾಗಿ ಸೆಟ್ ಮುಂದೆ ನಿಂತು ಡಾ.ರಾಜ್ಕುಮಾರ್ ಹಾಗೂ ಡಾ.ಶಿವರಾಜ್ಕುಮಾರ್ಗೆ ಜೈಕಾರ ಕೂಗಿ, ಸರ್ಕಾರಕ್ಕೆ ಧಿಕ್ಕಾರ ಎಂದರು.
ನಟ ಯುವರಾಜ್ಕುಮಾರ್ ಇದ್ದ ಕ್ಯಾರವನ್ ಮುಂದೆ ನಿಂತು ಘೋಷಣೆಗಳನ್ನು ಕೂಗಿದರು. ಬಳಿಕ ಕ್ಯಾರವನ್ನಿಂದ ಹೊರ ಬಂದ ಯುವರಾಜ್ಕುಮಾರ್, ಇಲ್ಲಿ ಯಾವುದೇ ಚಿತ್ರೀಕರಣ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ನಿನ್ನೆ (ಗುರುವಾರ) ಚಿತ್ರೀಕರಣ ನಡೆದಿತ್ತು, ಇಂದು ಯಾವುದೇ ಚಿತ್ರೀಕರಣ ನಡೆಯುತ್ತಿರಲಿಲ್ಲ. ನಾಳೆಯಿಂದ ಮತ್ತೆ ಚಿತ್ರೀಕರಣ ಆರಂಭವಾಗಬೇಕು. ಆದರೆ ಸೆಟ್ ಲೈಟಿಂಗ್ ಸಮಸ್ಯೆಯಾಗಿ, ಬಲ್ಬ್ ಬರ್ನ್ ಆಗಿತ್ತು, ಅದನ್ನು ಪರಿಶೀಲನೆ ಮಾಡಲು ಬಂದಿದ್ದೆ. ನಮ್ಮ ಕುಟುಂಬ ಯಾವಾಗಲು ಕಾವೇರಿ ಹೋರಾಟದಲ್ಲಿ ಇದ್ದೆ ಇರುತ್ತೆ. ಚಿತ್ರರಂಗ ಕಾವೇರಿ ಹೋರಾಟದ ಪರವಾಗಿದ್ದೇವೆ ಎಂದು ಯುವ ಚಿತ್ರದ ನಾಯಕ ನಟ ಯುವರಾಜ್ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ