Site icon Vistara News

Karnataka Bandh: ಚಿಕ್ಕಮಗಳೂರಿನಲ್ಲಿ ಬಿಜೆಪಿಗರಿಂದ ಸಿಎಂ ಪ್ರತಿಕೃತಿ ದಹನ, ಪೊಲೀಸರೊಂದಿಗೆ ಚಕಮಕಿ

chikkamagaluru protest

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ (Chikkamagaluru news) ಬಿಜೆಪಿ ಕಾರ್ಯಕರ್ತರು ಕಾವೇರಿ ನೀರಿಗಾಗಿ ತೀವ್ರ ಪ್ರತಿಭಟನೆ (Cauvery Protest) ಹಾಗೂ ಬಂದ್‌ (Karnataka Bandh) ನಡೆಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಪ್ರತಿಕೃತಿಗಳನ್ನು ದಹಿಸಲು ಯತ್ನಿಸಿದರು.

ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ಸುಡಲು ಪೊಲೀಸರು ವಿರೋಧ ವ್ಯಕ್ತಪಡಿಸಿ, ಪ್ರತಿಕೃತಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಈ ಸಂದರ್ಭದಲ್ಲಿ ಕಾರ್ಯರ್ತರಿಗೂ ಪೊಲೀಸರಿಗೂ ನಡುವೆ ಎಳೆದಾಟ ನಡೆಯಿತಲ್ಲದೆ, ಮಾತಿನ ಚಕಮಕಿ ನಡೆಯಿತು. ಸಿಎಂ ಪ್ರತಿಕೃತಿ ಹಿಡಿದು ಎಳೆದಾಡಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ವಿರೋಧದ ನಡುವೆಯೂ ಪ್ರತಿಕೃತಿ ದಹನ ಪೂರೈಸಿದರು. ಚಿಕ್ಕಮಗಳೂರು ನಗರದ ಬಿಜೆಪಿ ಕಚೇರಿ ಬಳಿ ಘಟನೆ ನಡೆಯಿತು.

ತಮಟೆ ಚಳುವಳಿ

ಚಿಕ್ಕಮಗಳೂರು ನಗರದಲ್ಲಿ ತಮಟೆ ಬಡಿಯುತ್ತಾ, ಖಾಲಿ ಮಡಕೆ ಹಿಡಿದು ಪ್ರದರ್ಶನ ನಡೆಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪ ಗೌಡರಿಂದ ತಮಟೆ ಚಳವಳಿ ಚಿಕ್ಕಮಗಳೂರು ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ನಡೆಯಿತು. ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆದಿದ್ದು, ಹೆಗಲ ಮೇಲೆ ಖಾಲಿ ಮಡಕೆ ಹೊತ್ತು ತಮಟೆ ಬಡಿಯುತ್ತಾ ರೈತ ಸಂಘ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ಚಿಕ್ಕಮಗಳೂರು ನಗರದಲ್ಲಿ ಮುಂಜಾನೆಯಿಂದಲೇ ಬಂದ್‌ ಕಾವು ಜೋರಾಗಿತ್ತು. ವಿವಿಧ ಸಂಘಟನೆಗಳು ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದು, ತಮಿಳುನಾಡು ಸಿಎಂ ಸ್ಟಾಲಿನ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಮಗಳೂರು ನಗರದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಪ್ರತಿಕೃತಿ ದಹನ ನಡೆಯಿತು. ರಾಜ್ಯ ಸರ್ಕಾರದ ವಿರುದ್ಧವೂ ಪ್ರತಿಭಟನಾಕಾರರು ಕಿಡಿ ಕಾರಿದರು.‌

ಗಡಿಭಾಗದಲ್ಲಿ ತೀವ್ರ ಪ್ರತಿಭಟನೆ

ಆನೇಕಲ್: ಅತ್ತಿಬೆಲೆ ಗಡಿಯಲ್ಲಿ ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ನೂರಾರು ಮಂದಿ ಜನರಿಂದ ಪ್ರತಿಭಟನಾ ಅತ್ತಿಬೆಲೆ ಟೋಲ್‌ನಿಂದ ಗಡಿ ಗೋಪುರದ ವರೆಗೆ ನಡೆಯಿತು. ಬಂದ್ ಯಶಸ್ವಿಗೊಳಿಸಬೇಕು ಎಂದು ಘೋಷಣೆ ಕೂಗಿ ಮೆರವಣಿಗೆ ನಡೆಸಿದರು.

ಕನ್ನಡ ಜಾಗೃತಿ ವೇದಿಕೆಯಿಂದಲೂ ಪ್ರತಿಭಟನೆ ನಡೆದಿದ್ದು, ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಅತ್ತಿಬೆಲೆ ಗಡಿಯಲ್ಲಿ ಹೈ ಆಲರ್ಟ್ ವಿಧಿಸಲಾಗಿದ್ದು, ಪೊಲೀಸರಿಂದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸುಮಾರು ನೂರಕ್ಕೂ ಅಧಿಕ ಮಂದಿ ಪೊಲೀಸರ ನಿಯೋಜನೆಯಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ: Karnataka Bandh: ಏರ್‌ಪೋರ್ಟ್‌ಗೆ ಮುತ್ತಿಗೆ ಯತ್ನ, ಕರವೇ ಕಾರ್ಯಕರ್ತರ ಬಂಧನ

Exit mobile version