Site icon Vistara News

Karnataka Bandh LIVE Updates: ಸುಪ್ರೀಂ ಕೋರ್ಟ್, ಕಾವೇರಿ ಪ್ರಾಧಿಕಾರದ ಮುಂದೆ ರಿವಿಶನ್ ಪಿಟಿಷನ್ ಎಂದ ಸಿಎಂ

karnataka bandh

ಬೆಂಗಳೂರು: ಸೆಪ್ಟೆಂಬರ್ 29, ಶುಕ್ರವಾರ ಕರ್ನಾಟಕ ಬಂದ್ (Karnataka Bandh LIVE Updates) ಆಚರಿಸಲಾಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇದರ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ) (CWMA) ಶುಕ್ರವಾರ ಸಭೆಯಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಅ. 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿದಿದೆ. ಈಗ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಿಡಬ್ಲ್ಯುಎಂಎ ಆದೇಶಿಸಿರುವ ಕ್ರಮವನ್ನು ಪ್ರಶ್ನಿಸಿ ರಿವಿಶನ್ ಪಿಟಿಷನ್ ಸಲ್ಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಕರ್ನಾಟಕ ಬಂದ್ ಕ್ಷಣ ಕ್ಷಣ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಜಾಲತಾಣಕ್ಕೆ ಭೇಟಿ ನೀಡಿ(Karnataka Live News).

Deepa S

ದೊಡ್ಡಬಳ್ಳಾಪುರದಲ್ಲಿ ಬೈಕ್‌ ರ‍್ಯಾಲಿ

ಕರ್ನಾಟಕ ಬಂದ್‌ಗೆ ದೊಡ್ಡಬಳ್ಳಾಪುರದಲ್ಲಿ ಸಂಪೂರ್ಣ ಬೆಂಬಲ ಸಿಕ್ಕಿದೆ. ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದ್ದಾರೆ. ದೊಡ್ಡಬಳ್ಳಾಪುರದ ಡಾ. ರಾಜ್ ಕುಮಾರ್ ವೃತ್ತದಿಂದ ನಗರದ ರೈಲ್ವೆ ನಿಲ್ದಾಣ, ಬಾಶೆಟ್ಟಿಹಳ್ಳಿ, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಡಿಕ್ರಾಸ್ ವೃತ್ತಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.

Deepa S

ಕರಾವಳಿಯಲ್ಲಿ ಭಾರಿ ಮಳೆ; ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ (Rain News) ನಿರೀಕ್ಷೆ ಇದೆ. ಕರಾವಳಿಯಲ್ಲಿ ಮಳೆ ಅಬ್ಬರಿಸಿದ್ದರೆ, ಒಳನಾಡಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ (Weather report) ಇದೆ. ಐಎಂಡಿ ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಿದೆ.

Weather report : ಕರಾವಳಿಯಲ್ಲಿ ಭಾರಿ ಮಳೆ; ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ
B Somashekhar

ವಿಮಾನ ನಿಲ್ದಾಣದೊಳಗೆ ಪ್ರತಿಭಟನೆ, ಐವರ ಬಂಧನ

ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಸೇನೆಯ ಐವರು ಕಾರ್ಯಕರ್ತರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂಡಿಗೋ ವಿಮಾನದ ಟಿಕೆಟ್‌ ಬುಕ್‌ ಮಾಡಿದ್ದ ಇವರು ಒಳಗೆ ಹೋಗಿದ್ದರು. ಒಳಗೆ ಹೋಗಿ ಪ್ರತಿಭಟನೆ ನಡೆಸುತ್ತಲೇ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

B Somashekhar

ಎಲ್ಲ ವಿಮಾನಗಳ ಹಾರಾಟ ರದ್ದು

ದೇವನಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕರ್ನಾಟಕ ಬಂದ್‌ ಬಿಸಿ ತಟ್ಟಿದೆ. ಬೆಂಗಳೂರಿಗೆ ಆಗಮಿಸುವ ಹಾಗೂ ನಿರ್ಗಮಿಸುವ ಎಲ್ಲ 44 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ದೆಹಲಿ, ಮುಂಬೈ, ಕೋಲ್ಕೊತಾ, ಮಂಗಳೂರು ಸೇರಿ ಹಲವೆಡೆಯಿಂದ ಆಗಮಿಸಬೇಕಿದ್ದ ಹಾಗೂ ಹಲವು ನಗರಗಳಿಗೆ ತೆರಳಬೇಕಿದ್ದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

B Somashekhar

ಪ್ರಾಣ ಕೊಟ್ಟೇವು, ಕಾವೇರಿ ನೀರು ಬಿಡೆವು

ರಾಜ್ಯಾದ್ಯಂತ ಕಾವೇರಿ ಕಿಚ್ಚು ಹೆಚ್ಚಾಗಿದ್ದು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಬೀದಿಗೆ ಬಂದು ಪ್ರತಿಭಟನೆ ನಡೆಸತ್ತಿದ್ದಾರೆ. ಪ್ರಾಣ ಕೊಟ್ಟೇವು, ಕಾವೇರಿ ನದಿ ನೀರು ಬಿಡೆವು ಎಂಬ ಘೋಷಣೆಗಳೊಂದಿಗೆ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಪ್ರತಿಭಟನಾನಿರತರ ಮೇಲೆ ಖಾಕಿ ಪ್ರಹಾರ ಕೂಡ ಹೆಚ್ಚಾಗಿದ್ದು, ಧರಣಿನಿರತರನ್ನು ಬಂಧಿಸುತ್ತಿದ್ದಾರೆ.

Exit mobile version