Site icon Vistara News

Karnataka Bandh LIVE Updates: ಸುಪ್ರೀಂ ಕೋರ್ಟ್, ಕಾವೇರಿ ಪ್ರಾಧಿಕಾರದ ಮುಂದೆ ರಿವಿಶನ್ ಪಿಟಿಷನ್ ಎಂದ ಸಿಎಂ

karnataka bandh

ಬೆಂಗಳೂರು: ಸೆಪ್ಟೆಂಬರ್ 29, ಶುಕ್ರವಾರ ಕರ್ನಾಟಕ ಬಂದ್ (Karnataka Bandh LIVE Updates) ಆಚರಿಸಲಾಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇದರ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ) (CWMA) ಶುಕ್ರವಾರ ಸಭೆಯಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಅ. 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶವನ್ನು ಪ್ರಾಧಿಕಾರ ಎತ್ತಿ ಹಿಡಿದಿದೆ. ಈಗ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಿಡಬ್ಲ್ಯುಎಂಎ ಆದೇಶಿಸಿರುವ ಕ್ರಮವನ್ನು ಪ್ರಶ್ನಿಸಿ ರಿವಿಶನ್ ಪಿಟಿಷನ್ ಸಲ್ಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಕರ್ನಾಟಕ ಬಂದ್ ಕ್ಷಣ ಕ್ಷಣ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಜಾಲತಾಣಕ್ಕೆ ಭೇಟಿ ನೀಡಿ(Karnataka Live News).

B Somashekhar

ಕಾವೇರಿಗಾಗಿ ಕೆಂಡವಾದ ಕರುನಾಡು

ಕಾವೇರಿ ನೀರಿಗಾಗಿ ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಹಲವೆಡೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಪ್ರತಿಕೃತಿ ದಹನ ಮಾಡಲಾಗಿದೆ. ಹಾಗೆಯೇ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಮತ್ತೊಂದೆಡೆ, ಯಾದಗಿರಿಯಲ್ಲಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಯತ್ನವೂ ನಡೆದಿದೆ.

B Somashekhar

ಎಂದಿನಂತೆ ಇರಲಿದೆ ಮೆಟ್ರೋ ಸಂಚಾರ

ಬೆಂಗಳೂರು: ಕಾವೇರಿ ನೀರಿಗಾಗಿ ಹೋರಾಟ ಇದ್ದರೂ ಬೆಂಗಳೂರಿನಲ್ಲಿ ಎಂದಿನಂತೆ ಮೆಟ್ರೋ ರೈಲುಗಳ ಓಡಾಟ ಆರಂಭವಾಗಿದೆ. ಬಂದ್‌ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆಯೂ ಕ್ರಮ ತೆಗೆದುಕೊಳ್ಳಲಾಗಿದೆ.

B Somashekhar

ಅಸ್ಸಾಂಗೆ ತೆರಳಿದ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಕರ್ನಾಟಕ ಬಂದ್‌ ಇದ್ದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಸ್ಸಾಂಗೆ ತೆರಳಿದ್ದಾರೆ. ಗುವಾಹಟಿಯಲ್ಲಿರುವ ವಿಶ್ವವಿಖ್ಯಾತ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಲು ಅವರು ಅಸ್ಸಾಂಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ಮಗಳು ಪದ್ಮಾವತಿ ಹಾಗೂ ಮೊಮ್ಮಗ ಶಶಿಧರ ಮರಡಿ ಜತೆ ಅವರು ಅಸ್ಸಾಂಗೆ ತೆರಳಿದರು. ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕರ್ನಾಟಕ ಬಂದ್‌ಗೆ ಎಲ್ಲರೂ ಸಹಕಾರ ನೀಡಬೇಕು. ಬಂದ್‌ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ಇದೆ” ಎಂದಷ್ಟೇ ಹೇಳಿದರು.

B Somashekhar

ಸ್ಟಾಲಿನ್‌ ಫೋಟೊಗೆ ತಿಥಿ ಕಾರ್ಯ!

ಚಿತ್ರದುರ್ಗ ನಗರದ ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ರೈತರು ಎಂ.ಕೆ.ಸ್ಟಾಲಿನ್‌ ಅವರ ಫೋಟೊ ಇಟ್ಟು, ತಿಥಿ ಕಾರ್ಯ ಮಾಡಿದ ರೈತರು, “ನಮಗೇ ನೀರು ಇಲ್ಲ. ಅವರಿಗೆ ಯಾಕೆ ನೀರು ಬಿಡುತ್ತೀರಿ” ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ, ಸ್ಟಾಲಿನ್‌ ಫೋಟೊ ಎದುರು ಮದ್ಯದ ಬಾಟಲಿ ಇಟ್ಟು, ಪ್ರತಿಕೃತಿ ದಹಿಸಿ ಘೋಷಣೆ ಕೂಗಿದರು.

B Somashekhar

ಕಾವೇರಿ ನದಿಗೆ ಇಳಿದು ಪ್ರತಿಭಟನೆ

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಆಗ್ರಹಿಸಿ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಗೆ ಇಳಿದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶ್ರೀರಂಗಪಟ್ಟಣ ಬಳಿ ಇರುವ ಕಾವೇರಿ ನದಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಸಂಸದರ ಭಾವಚಿತ್ರ ಹಿಡಿದು ಕಾರ್ಯಕರ್ತರು ಘೋಷಣೆ ಕೂಗಿದರು.

Exit mobile version