ಬೆಂಗಳೂರು: ಚಿನ್ನಾಭರಣ ಮನೆಯಲ್ಲಿದ್ದರೆ ಮನೆಗಳ್ಳರ ಕಾಟ, ಧರಿಸಿಕೊಂಡು ಹೊರಗೆ ಹೋದರೆ ಸರಗಳ್ಳರ ಹಾವಳಿ. ಇವರಿಬ್ಬರ ಹಾವಳಿ ತಪ್ಪಿಸಲು ಆ ದಂಪತಿ ಬ್ಯಾಂಕ್ ಲಾಕರ್‌ನಲ್ಲಿ (Karnataka Bank Locker) ಬೆಲೆಬಾಳುವ ಚಿನ್ನಾಭರಣ ಇಟ್ಟಿದ್ದರು. ಆದರೆ, ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಬಂಗಾರವೇ ನಾಪತ್ತೆ ಆಗಿದ್ದು, ದಂಪತಿ ಆಘಾತಕ್ಕೆ ಒಳಗಾಗಿದ್ದಾರೆ.
ಯಲಹಂಕ ನಿವಾಸಿ ಕೃಷ್ಣಕುಮಾರ್ ಎಂಬುವವರು ಮಗನನ್ನು ನೋಡಲು ಜರ್ಮನಿಗೆ ತೆರಳಬೇಕಾಯಿತು. ಸುರಕ್ಷತೆ ದೃಷ್ಟಿಯಿಂದ ಮನೆಯಲ್ಲಿದ್ದ 30 ಲಕ್ಷ ಮೌಲ್ಯದ ಬಂಗಾರವನ್ನು ಯಲಹಂಕ ನ್ಯೂಟೌನ್‌ನಲ್ಲಿರುವ ಕರ್ನಾಟಕ ಬ್ಯಾಂಕ್ ಲಾಕರ್‌ನಲ್ಲಿ ಕಳೆದ ಜುಲೈ ತಿಂಗಳಲ್ಲಿ ಇಟ್ಟಿದ್ದರು. ವಾಪಸ್ ಆದವರಿಗೆ ಶಾಕ್‌ವೊಂದು ಕಾದಿತ್ತು.
ನವೆಂಬರ್ 10ರಂದು ಬ್ಯಾಂಕ್‌ಗೆ ತೆರಳಿ ಲಾಕರ್ ಓಪನ್ ಮಾಡಿದಾಗ, ಆಭರಣದ ಬಾಕ್ಸ್ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಈ ವಿಚಾರವನ್ನು ಬ್ಯಾಂಕ್ ಮ್ಯಾನೇಜರ್ ಪ್ರದೀಪ್ ಗಮನಕ್ಕೆ ತಂದಿದ್ದಾರೆ. ಆ ವೇಳೆ ಲಾಕರ್ ಪರಿಶೀಲಿಸಿದ ಬ್ಯಾಂಕ್ ಮ್ಯಾನೇಜರ್, ಮೂರು ದಿನಗಳ ಕಾಲಾವಕಾಶ ಕೇಳಿ, ಚಿನ್ನಾಭರಣ ವಾಪಸ್ ಕೊಡುವುದಾಗಿ ಭರವಸೆ ನೀಡಿದ್ದರಂತೆ.
ಕೃಷ್ಣಕುಮಾರ್ ಮೂರು ದಿನಗಳ ಬಳಿಕ ಬ್ಯಾಂಕ್ ಮ್ಯಾನೇಜರ್ ತೆರಳಿ ಚಿನ್ನಾಭರಣದ ಬಗ್ಗೆ ವಿಚಾರಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡದೆ ಪೊಲೀಸ್ ಠಾಣೆಗೆ ದೂರು ಕೊಡುವುದಾದರೆ ಕೊಡಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಲಾಕರ್‌ನಲ್ಲಿದ್ದ ಆಭರಣ ಕಳವು ಆಗಿದೆ ಎಂದು ಕೃಷ್ಣಕುಮಾರ್ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಪ್ರದೀಪ್, ಕಸ್ಟೋಡಿಯನ್‌ಗಳಾದ ಸೌಮ್ಯ, ನಳಿನ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆ ವೇಳೆ ಬ್ಯಾಂಕ್ ಅಧಿಕಾರಿಗಳ ಕರ್ತವ್ಯ ಲೋಪ ಎದ್ದು ಕಂಡಿದೆ. ಲಾಕರ್ ಓಪನ್ ಮಾಡಬೇಕಾದರೆ ಎರಡು ಕೀ ಇರಬೇಕು, ಜತೆಗೆ ರಿಜಿಸ್ಟರ್ ಎಂಟ್ರಿ ಮಾಡಬೇಕು. ಎಲ್ಲಕ್ಕೂ ಮಿಗಿಲಾಗಿ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್‌ಗೆ ಮಾತ್ರ ಲಾಕರ್ ಓಪನ್ ಮಾಡಲು ಅವಕಾಶ ಇದ್ದು, ಬ್ಯಾಂಕಿನ ಗುಮಾಸ್ತರು ಲಾಕರ್ ಒಳ ಹೋಗಿ ಬರುತ್ತಿರುವುದು ಬೆಳಕಿಗೆ ಬಂದಿದೆ ಎಂದು ಡಿಸಿಪಿ ಈಶಾನ್ಯ ವಿಭಾಗ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಬ್ಯಾಂಕ್‌ನಲ್ಲಿರುವವರೇ ಯಾರೋ ಲಾಕರ್‌ನಲ್ಲಿದ್ದ ಚಿನ್ನಾಭರಣ ಎಗರಿಸಿರಬಹುದೆಂಬ ಶಂಕೆ ಪೊಲೀಸರಿಗೆ ಶುರುವಾಗಿದೆ. ಆರೋಪಿಗಳ ಪತ್ತೆಗೆ ಯಲಹಂಕ ನ್ಯೂಟೌನ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಒಟ್ಟಾರೆ, ಚಿನ್ನ ಎಲ್ಲಿದ್ದರೆ ಸೇಫ್ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿದೆ.
ಇದನ್ನೂ ಓದಿ | Sexual Harrassment | ಲೈಂಗಿಕ ಕಿರುಕುಳ ನೀಡಲು ಬಂದ ಶಿಕ್ಷಕನ ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿನಿಯರು!