ಬೆಂಗಳೂರು: ಕರ್ನಾಟಕ–ಭಾರತ್ ಗೌರವ್ ಕಾಶಿ ದರ್ಶನ(karnataka bharat gaurav kashi darshan) ಪ್ಯಾಕೇಜ್ 4ನೇ ಟ್ರಿಪ್ನ ಬುಕ್ಕಿಂಗ್ ಪ್ರಾರಂಭವಾಗಿದ್ದು ರೈಲು ಜಲೈ 29ಕ್ಕೆ ಬೆಂಗಳೂರಿನಿಂದ ಹೊರಡಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ(Ramalinga Reddy) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಚಾಲನೆ ನೀಡಿದ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಕರ್ನಾಟಕ–ಭಾರತ್ ಗೌರವ್ ಕಾಶಿ ದರ್ಶನ ಎನ್ನುವ ಈ ಪ್ಯಾಕೇಜ್ ಟೂರ್ ಈಗಾಗಲೇ ಮೂರು ಟ್ರಿಪ್ಗಳನ್ನು ಯಶಸ್ವಿಯಾಗಿ ಪೂರೈಸಿದ್ದು 1644 ಮಂದಿ ಯಾತ್ರಾರ್ಥಿಗಳು ಯಾತ್ರೆ ಪೂರೈಸಿದ್ದಾರೆ. ಇದೀಗ ನಾಲ್ಕನೇ ಟ್ರಿಪ್ ತರೆಳಲಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ರಾಮಲಿಂಗ ರೆಡ್ಡಿ ಅವರು, ಕೇಂದ್ರ ರೈಲ್ವೇ ಸಚಿವರ ಸಂಪೂರ್ಣ ಸಹಕಾರದೊಂದಿಗೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಯಾತ್ರೆಯ ರೈಲು ಜುಲೈ 29 ರಂದು ಬೆಂಗಳೂರಿನಿಂದ ಹೊರಡಲಿದೆ ಎಂದು ಹೇಳಿದ್ದಾರೆ. ಕರ್ನಾಟಕ–ಭಾರತ್ ಗೌರವ್ ಕಾಶಿ ದರ್ಶನ ರೈಲು ಯೋಜನೆಯ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು ಐಆರ್‌ಸಿಟಿಸಿ ಹಾಗೂ (https://www.irctctourism.com/) ಭಾರತೀಯ ರೈಲ್ವೇ ಮೂಲಕ ಬುಕ್ಕಿಂಗ್ಗೆ ಅವಕಾಶ ನೀಡಲಾಗಿದೆ.
ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯ ರಾಮಲಲ್ಲಾ ದೈವ ಭೂಮಿಯ ವೈಭವ ಸವಿಯುವ ಅವಕಾಶ ಇದಾಗಿದೆ. 7 ದಿನಗಳ ಕಾಲದ ಈ ಟೂರ್ ಪ್ಯಾಕೇಜ್‌ನಲ್ಲಿ ಎಲ್ಲ ಸವಲತ್ತುಗಳನ್ನು ಒಳಗೊಂಡಿರಲಿದೆ. ಟ್ರೈನ್ ದರ ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್ ವ್ಯವಸ್ಥೆ ಉಳಿದುಕೊಳ್ಳಲು ಹೋಟೆಲ್ ಮತ್ತು 7 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆಯನ್ನು ಸಹ ಈ ಪ್ಯಾಕೇಜ್ ಒಳಗೊಂಡಿರಲಿದೆ.
ಇದನ್ನೂ ಓದಿ Private Transport : ಸಚಿವ ರಾಮಲಿಂಗಾ ರೆಡ್ಡಿ ಸಭೆ ಸಕ್ಸಸ್; ಜುಲೈ 27ರ ಖಾಸಗಿ ಸಾರಿಗೆ ಬಂದ್ ಮುಂದೂಡಿಕೆ
5 ಸಾವಿರ ರೂ. ಸಹಾಯಧನ ಐಆರ್‌ಸಿಟಿಸಿ ಸಹಭಾಗಿತ್ವದ ಈ ಟೂರ್ ಪ್ಯಾಕೇಜ್ ತಗೆದುಕೊಳ್ಳುವ ಪ್ರತಿ ವ್ಯಕ್ತಿಗೂ 5 ಸಾವಿರ ರೂಪಾಯಿಗಳ ಸಹಾಯಧನವನ್ನು ಕರ್ನಾಟಕ ಸರ್ಕಾರ ನೀಡಲಿದೆ. ಈ ಪ್ಯಾಕೇಜ್ನ ದರ ಮೂಲತಃ 20 ಸಾವಿರ ರೂಪಾಯಿಗಳಾಗಿದ್ದು ಪ್ರಯಾಣಿಕರು ಕೇವಲ 15000 ರೂಪಾಯಿಗಳನ್ನು ನೀಡಿದರೆ ಸಾಕು ಉಳಿದ 5000 ರೂಗಳನ್ನು ಕರ್ನಾಟಕ ಸರ್ಕಾರ ಸಹಾಯಧನದ ರೂಪದಲ್ಲಿ ನೀಡಲಿದೆ. ಈ ಬಾರಿ ಹೊಸದಾಗಿ ಸುಸಜ್ಜಿತ LHB ಕೋಚ್ಗಳನ್ನು ಅಳವಡಿಸಲಾಗಿದೆ. ಇದು ಸುಸಜ್ಜಿತವಾದ ಸ್ಥಳದಲ್ಲೇ ಅಡುಗೆ ತಯಾರು ಮಾಡುವ ಅಡುಗೆ ಮನೆಯನ್ನು ಒಳಗೊಂಡಿರುತ್ತದೆ. ಹಾಗೂ ಯಾತ್ರಾರ್ಥಿಗಳ ಆರೋಗ್ಯ ಹಿತ ದೃಷ್ಟಿಯಿಂದ ಇಬ್ಬರು ವೈದರನ್ನು ನೇಮಕ ಮಾಡಲಾಗಿದೆ.