ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲ ತಿಂಗಳ ಹಿಂದೆ ಸದ್ದು ಮಾಡಿ ತಣ್ಣಗಾಗಿದ್ದ ಹಲಾಲ್ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಯಾವುದೇ ಹಿಂದು ಸಂಘಟನೆಗಳಿಂದಾಗಲಿ, ಸಾರ್ವಜನಿಕರಿಂದಾಗಲಿ ಅಲ್ಲದೇ, ಬಿಜೆಪಿ ವಿಧಾನ ಪರಿಷತ್ ಸದಸ್ಯರೇ ಈ ವಿಚಾರವನ್ನು ಮುಂದೆ ತಂದಿದ್ದಾರೆ.
ಸರ್ಕಾರದ ಅನೇಕ ಸಂಸ್ಥೆಗಳು ಆಹಾರ ಉತ್ಪನ್ನಗಳಿಗೆ ಪ್ರಮಾಣ ಪತ್ರ, ಪರವಾನಗಿ ನೀಡುತ್ತವೆ. ವಿವಿಧ ಸಂಸ್ಥೆಗಳು ಔಷಧಗಳಿಗೆ ಪ್ರಮಾಣ ಪತ್ರ ನೀಡುತ್ತವೆ. ಆದರೆ ಹಲಾಲ್ ಪ್ರಮಾಣ ಪತ್ರ ನೀಡುವುದಾಗಿ ಖಾಸಗಿ ಸಂಸ್ಥೆಗಳು ಹಣ ಮಾಡುತ್ತಿದ್ದು, ಇದು ಕಾನೂನುಬಾಹಿರವೂ ಆಗಿದೆ ಎಂಬ ವಾದ ಅನೇಕ ದಿನಗಳಿಂದ ಕೇಳಿಬರುತ್ತಿದೆ. ಈ ಕುರಿತು ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ಖಾಸಗಿ ವಿಧೇಯಕ ಮಂಡನೆ ಮಾಡಲು ಎನ್. ರವಿ ಕುಮಾರ್ ಮುಂದಾಗಿದ್ದಾರೆ.
ಈ ಕುರಿತು ಸಭಾಪತಿಯವರಿಗೆ ಮನವಿ ಮಾಡಿರುವ ರವಿ ಕುಮಾರ್, Food Safety And Standards Act, 2006 ಕಾನೂನಿಗೆ ತಿದ್ದುಪಡಿ ವಿಧೇಯಕ ಮಂಡಿಸಲು ಮನವಿ ಮಾಡುತ್ತಿರುವೆ. ಭಾರತ ಸರ್ಕಾರ ಮತ್ತು ಯಾವುದೇ ರಾಜ್ಯ ಸರ್ಕಾರಗಳು ನೀಡುವ ಪ್ರಮಾಣ ಪತ್ರಗಳು, ಅನುಮತಿ ಪತ್ರಗಳು ಹಾಗೂ ಯಾವುದೇ ಇತರ, ಸರ್ಕಾರಿ ಪ್ರಮಾಣೀಕೃತ ವಿಷಯಗಳ ಹೊರತಾಗಿ, ಭಾರತ ಸರ್ಕಾರದ ರಾಜ್ಯ ಸರ್ಕಾರಗಳ ಯಾವುದೇ ರೀತಿಯ ಅನುಮತಿ ಇಲ್ಲದೆ ಯಾವುದೇ ಖಾಸಗಿ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು, ಯಾವುದೇ ಧರ್ಮ ವಿಶೇಷ ಸಂಸ್ಥೆಗಳು, ನೀಡುವ ಯಾವುದೇ ರೀತಿಯ ಪ್ರಮಾಣ ಪತ್ರಗಳನ್ನು ಮುದ್ರಿಸುವ, ವಿತರಿಸುವ ಏಜೆನ್ಸಿಯಾಗಿ ಕಾರ್ಯನಿರ್ವಹಿಸುವ ಪ್ರಚಾರ ಮಾಡುವ, ಯಾವುದೇ ಸಂಸ್ಥೆಗಳು ವಿದೇಶದ ಯಾವುದೇ ಸಂಸ್ಥೆ, ವ್ಯಕ್ತಿ, ಧಾರ್ಮಿಕ ಸಂಸ್ಥೆಗಳು ಸದರಿ, ವಿಶೇಷ ಧಾರ್ಮಿಕ ಲೇಪನವುಳ್ಳ ಪ್ರಮಾಣ ಪತ್ರಗಳನ್ನು ನೀಡಲು ಅನುಮತಿಸಿವೆ ಎಂಬುದಾಗಿ ಜಾಹೀರಾತು ನೀಡಲಾಗುತ್ತಿದೆ. ಈ ರೀತಿ ಜಾಹೀರಾತು ನೀಡಿ ಪ್ರಮಾಣ ಪತ್ರಗಳನ್ನು ನಮ್ಮ ಸಂಸ್ಥೆಗಳು ಮಾತ್ರವೇ ನೀಡುವುದು ಎಂಬ ರೀತಿಯಲ್ಲಿ ಬಿಂಬಿಸುವ ಹಾಗೂ ಸದರಿ ಪ್ರಮಾಣ ಪತ್ರಗಳನ್ನು ನೀಡಲು ಸಂಗ್ರಹಿಸುವ ಯಾವುದೇ ರೀತಿಯ ಶುಲ್ಕವನ್ನು ನಿಷೇಧಿಸುವ ನಿರ್ಬಂಧಿಸುವ ಹಾಗೂ ನಿಯಂತ್ರಿಸುವ ಕುರಿತು ತಿದ್ದುಪಡಿ ವಿಧೇಯಕವನ್ನು ಪರಿಶೀಲನೆಗಾಗಿ ಹಾಗೂ ಸದನದಲ್ಲಿ ಮಂಡಿಸಿ ಅನುಮೋದಿಸಿ ಕಾನೂನು ರೂಪದಲ್ಲಿ ಜಾರಿಗೆ ತರುವಂತೆ ವಿನಂತಿಸುತ್ತೇನೆ.
ಈ ತಿದ್ದುಪಡಿ ವಿಧೇಯಕದಿಂದ ಸರ್ಕಾರಕ್ಕೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ, ಅದರ ಹೊರತಾಗಿ ಸರ್ಕಾರಕ್ಕೆ ಸುಮಾರು 5000 ಕೋಟಿ ರೂ.ಗೂ ಹೆಚ್ಚು ಆದಾಯ ಬರುತ್ತದೆ ಎಂದು ರವಿಕುಮಾರ್ ಹೇಳಿದ್ದಾರೆ.
ಸಭಾಪತಿಯವರಿಗೆ ಮಾಡಿದ ಮನವಿಯಲ್ಲಿ ಎಲ್ಲಿಯೂ ಹಲಾಲ್ ಪ್ರಮಾಣಪತ್ರ ಎಂದು ನಮೂದಿಸಿಲ್ಲ. ಆದರೆ ಈ ಕುರಿತು ಅನೇಕ ಮಾಹಿತಿಗಳನ್ನು ರವಿಕುಮಾರ್ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಮಾಂಸದ ಉತ್ಪನ್ನಗಳಿಗೆ ಮಾತ್ರವಲ್ಲದೆ
ಹಲಾಲ್ ಕೇವಲ ಮಾಂಸದ ಬ್ರಾಂಡ್ ಅಷ್ಟೇ ಅಲ್ಲ ಬಟ್ಟೆ, ಔಷಧಿ, ದಿನನಿತ್ಯ ಬಳಕೆಯ ಅನೇಕ ವಸ್ತುಗಳಿಗೂ ಹಲಾಲ್ ಪ್ರಮಾಣ ಪತ್ರ ನೀಡಲಾಗುತ್ತಿದೆ. ಅಕ್ಕಿ, ಸಕ್ಕರೆಯಂತಹ ಉತ್ಪನ್ನಗಳಿಗೂ ಹಣವನ್ನು ಪಡೆದು ಪ್ರಮಾಣ ಪತ್ರ ನೀಡುತ್ತಿರುವುದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗುತ್ತಿದೆ ಎಂಬ ಮಾಹಿತಿ ಕಲೆ ಹಾಕಲಾಗಿದೆ ಎನ್ನಲಾಗಿದೆ.
ಈ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಎನ್. ರವಿಕುಮಾರ್, ಹಲಾಲ್ ಸಂಸ್ಥೆ ಕೋ ಆಪರೇಟಿವ್ ನಿಯಮದಡಿ ನೋಂದಣಿಯಾಗಿದೆ. ಈ ಸಂಸ್ಥೆಗೆ ಹಲಾಲ್ ಪ್ರಮಾಣ ಪತ್ರ ಕೊಡುವ ಅಧಿಕಾರ ಕೊಟ್ಟವರು ಯಾರು? ಇದರ ವ್ಯಾಪ್ತಿ ಏನು? ಆಸ್ಪತ್ರೆ, ಕಿರಾಣಿ ವಸ್ತುಗಳು, ನೂರಾರು ಉತ್ಪನ್ನಗಳ ಮೇಲೆ ಹಲಾಲ್ ಮುದ್ರೆ ಇರುತ್ತದೆ. ಹಲಾಲ್ ಪ್ರಮಾಣ ಪತ್ರ ಕೊಡುವ ಸಂಸ್ಥೆ ಕಾನೂನು ಬಾಹಿರ ಸಂಸ್ಥೆ. ಮಾಂಸದ ಮೇಲಷ್ಟೇ ಹಲಾಲ್ ಹೇರಿಲ್ಲ. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟ ಆಗುತ್ತಿದೆ. ಹಲಾಲ್ ಪ್ರಮಾಣ ಪತ್ರಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ. ಇದಕ್ಕಾಗಿ ನಾನು ಖಾಸಗಿ ವಿಧೇಯಕ ಮಂಡನೆಗೆ ಸಭಾಪತಿ ಬಳಿ ಅನುಮತಿ ಕೇಳಿದ್ದೇನೆ. ಸಭಾಪತಿ ಖಾಸಗಿ ಬಿಲ್ ಮಂಡನೆಗೆ ಅವಕಾಶ ಕೊಟ್ಟರೆ ಸದನದಲ್ಲಿ ಈ ವಿಚಾರ ತರುತ್ತೇನೆ. ಇದರ ಬಗ್ಗೆ ಸದನದಲ್ಲಿ ಚರ್ಚೆ ಆಗಲಿ. ಹಲವು ಶಾಸಕರ ಜತೆ ಮಾತುಕತೆ ನಡೆಸಿದ್ದೇನೆ. ಕಾನೂನು ಪಂಡಿತರ ಜತೆ ಮಾತುಕತೆ ನಡೆಸಿದ್ದೇನೆ. ಆಹಾರ ಭದ್ರತಾ ಕಾಯ್ದೆ 2006 ಕ್ಕೆ ತಿದ್ದುಪಡಿ ತರಲು ಖಾಸಗಿ ವಿಧೇಯಕ ಮಂಡಿಸಲಿದ್ದೇನೆ ಎಂದರು.
ಎಸ್‌ಸಿ ಸಮುದಾಯದ ಒಳ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ರವಿಕುಮಾರ್, ಒಳ ಮಿಸಲಾತಿ ಬಗ್ಗೆ ನ್ಯಾ. ಸದಾಶಿವ ಆಯೋಗದ ಬಗ್ಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಂದು ಮಾತನ್ನೂ ಆಡಿರಲಿಲ್ಲ. ಇದಕ್ಕೆ ನಮ್ಮ ಬೆಂಬಲವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಹುಬ್ಬಳ್ಳಿಯಲ್ಲಿ ಸದಾಶಿವ ಆಯೊಗದ ವರದಿ ಜಾರಿಯಾಗಬೇಕೆಂದು ದೊಡ್ಡ ಸಮಾವೇಶ ನಡೆದಿತ್ತು. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಜಾರಿ ಮಾಡಲು ಆಗುವುದಿಲ್ಲ ಎಂದಿದ್ದರು. ಈಗ ನಮ್ಮ ಸರ್ಕಾರ ಸಚಿವ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ನೇಮಕ ಮಾಡಿದೆ. ಇಂತಹ ಸಮಿತಿಯನ್ನು ಸಿದ್ದರಾಮಯ್ಯ ಮಾಡಿರಲಿಲ್ಲ ಎಂದರು.
ಇದನ್ನೂ ಓದಿ | Halal Boycott | ಹಲಾಲ್ ಮಾರ್ಕ್ ಇರುವ ವಸ್ತುಗಳ ಖರೀದಿ ವಿರುದ್ಧ ಜಾಗೃತಿ, ಮೆಕ್‌ಡೊನಾಲ್ಡ್, ಕೆಎಫ್‌ಸಿ ಎದುರು ಪ್ರತಿಭಟನೆ