ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ (Karnataka Budget 2023) ಮುಸ್ಲಿಮರೇ ಪ್ರಮುಖವಾಗಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಆದ್ಯತೆಯನ್ನು ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿನಿಯರನ್ನು ಹೆಚ್ಚಾಗಿ ಟಾರ್ಗೆಟ್ ಮಾಡಲಾಗಿದೆ. ಅದರಲ್ಲೂ ಮುಖ್ಯವಾಗಿ ವಿದೇಶದಲ್ಲಿ ಶಿಕ್ಷಣ ಪಡೆಯಲಿರುವ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಬಡ್ಡಿರಹಿತ ಸಾಲ ನೀಡಲಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ವಿದ್ಯಾವಂತ ಮುಸ್ಲಿಮರ ಸೆಳೆಯುವ ಪ್ರಯತ್ನವೂ ಇರಬಹುದು ಎಂದು ಭಾವಿಸಲಾಗಿದೆ.
ಮಹಿಳೆಯರಿಗೆ ಮೂರು ಯೋಜನೆಗಳು
೧. ವಿದ್ಯಾರ್ಥಿನಿಯರ ಆತ್ಮರಕ್ಷಣೆಗೆ ತರಬೇತಿ: ಅಲ್ಪಸಂಖ್ಯಾತರ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆ ತರಬೇತಿಯನ್ನು ನೀಡಲು 2 ಕೋಟಿ ರೂ. ಒದಗಿಸಲಾಗುವುದು.
೨. ವಿದೇಶಿ ವಿದ್ಯಾಭ್ಯಾಸಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ: ವಿಶ್ವದಲ್ಲಿ 250 ರೊಳಗೆ University Ranking ಹೊಂದಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗವನ್ನು ವಿದೇಶದಲ್ಲಿ ಮಾಡಲು ಇಚ್ಛಿಸುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ನಂತೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಲು ಬಡ್ಡಿ ಸಹಾಯಧನ ನೀಡಲಾಗುವುದು.
೩. ಪದವೀಧರ ಮಹಿಳೆಯರಿಗೆ ಉದ್ಯಮಶೀಲತಾ ತರಬೇತಿ: ಅಲ್ಪಸಂಖ್ಯಾತರ ಪದವೀಧರ ಮಹಿಳೆಯರು ಉತ್ತಮ ಉದ್ಯೋಗಾವಕಾಶ ಪಡೆಯಲು ಹಾಗೂ ಸ್ವಂತ ಉದ್ದಿಮೆ ಪ್ರಾರಂಭಿಸಲು ಪ್ರತಿಷ್ಠಿತ ಸಂಸ್ಥೆಯಾದ ಐ.ಐ.ಎಂ.ಬಿ. (IIMB) ಬೆಂಗಳೂರಿನಲ್ಲಿ 300 ಅಭ್ಯರ್ಥಿಗಳಿಗೆ ಉದ್ಯಮಶೀಲತಾ ತರಬೇತಿಯನ್ನು 3 ಕೋಟಿ ರೂ. ವೆಚ್ಚದಲ್ಲಿ ನೀಡಲಾಗುವುದು.
ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ
ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಶೇಕಡ 97ರಷ್ಟು ಉತ್ತೀರ್ಣರಾಗಿರುತ್ತಾರೆ. ಈ ಪೈಕಿ ಶೇಕಡ 90ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಗುಣಾತ್ಮಕ ಉನ್ನತ ಶಿಕ್ಷಣ ಒದಗಿಸಲು ಮೆಟ್ರಿಕ್ ನಂತರದ 100 ವಿದ್ಯಾರ್ಥಿನಿಲಯಗಳಲ್ಲಿ ಸಂಖ್ಯಾಬಲವನ್ನು 2,500ಕ್ಕೆ ಹೆಚ್ಚಿಸಲಾಗಿದೆ.
ರಾಜ್ಯದ ೨೯ ಕಡೆ ಅಬ್ದುಲ್ ಕಲಾಂ ವಸತಿ ಶಾಲೆ
ರಾಜ್ಯದ 29 ಸ್ಥಳಗಳಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗಾಗಿ 6ರಿಂದ 12ನೇ ತರಗತಿಯವರೆಗೆ ಸಿ.ಬಿ.ಎಸ್.ಇ. ಪಠ್ಯಕ್ರಮದೊಂದಿಗೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಸದರಿ ಶಾಲೆಗಳನ್ನು 25 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ವಹಣೆಯನ್ನು ಮಾಡಲಾಗುತ್ತಿದೆ.
ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣ
ಪ್ರಸಕ್ತ ಸಾಲಿನಲ್ಲಿ 96 ಕೋಟಿ ರೂ. ಅನುದಾನದಲ್ಲಿ ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ 31 ವಸತಿ ಶಾಲೆಗಳು, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಸುಮಾರು 7,800 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ಖಬರಸ್ತಾನ ಅಭಿವೃದ್ಧಿ
ರಾಜ್ಯದಲ್ಲಿ 40,000 ಕ್ಕಿಂತಲೂ ಹೆಚ್ಚು ವಕ್ಫ್ ಆಸ್ತಿಗಳಿದ್ದು, ಇವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 2023-24 ನೇ ಸಾಲಿನಲ್ಲಿ 10 ಕೋಟಿ ರೂ. ಮತ್ತು ಖಬರಸ್ತಾನ್‌ಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ
ಅಲ್ಪಸಂಖ್ಯಾತರಲ್ಲಿ ಅತೀ ಹಿಂದುಳಿದ ಪಿಂಜಾರ, ದರ್ವೇಸು ಮತ್ತು ನದಾಫ್ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಎಲ್ಲಾ ಯೋಜನೆಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು.
ನಿಗಮಕ್ಕೆ ೫೦ ಕೋಟಿ ರೂ. ಹೆಚ್ಚಳ
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಕಳೆದ ಆಯವ್ಯಯದಲ್ಲಿ 60 ಕೋಟಿ ರೂ. ಒದಗಿಸಲಾಗಿದ್ದು, ಪ್ರಸಕ್ತ ಆಯವ್ಯಯದಲ್ಲಿ ಈ ಮೊತ್ತವನ್ನು ಹೆಚ್ಚಿಸಿ 110 ಕೋಟಿ ರೂ. ಒದಗಿಸಲಾಗುವುದು. ನಿಗಮಕ್ಕೆ ನೀಡಿರುವ ಹೆಚ್ಚುವರಿ ಅನುದಾನ ಮತ್ತು ಈಗಾಗಲೇ ಲಭ್ಯವಿರುವ ಮೊತ್ತವೂ ಸೇರಿದಂತೆ 2023-24ರಲ್ಲಿ, 306 ಕೋಟಿ ರೂ. ಗಳ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.
ಇದನ್ನೂ ಓದಿ : Karnataka budget 2023 : ರಾಜ್ಯದ ತಲಾ ಆದಾಯ ಮೊದಲ ಬಾರಿಗೆ 3 ಲಕ್ಷ ರೂ.ಗೆ ಏರಿಕೆ