ಬೆಂಗಳೂರು: ಬಿಜೆಪಿ ಸರ್ಕಾರದ ಪಾಲಿನ ಮಹತ್ವಾಕಾಂಕ್ಷೆಯ, ಜನರ ಪಾಲಿಗೆ ಭಾರಿ ನಿರೀಕ್ಷೆ ಹುಟ್ಟಿಸಿರುವ ೨೦೨೩-೨೪ನೇ ಸಾಲಿನ ಬಜೆಟ್ (Karnataka Budget 2023) ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗ್ಗೆ ೧೦.೧೫ಕ್ಕೆ ರಾಜ್ಯ ಆಯವ್ಯಯ ಮಂಡನೆ ಮಾಡಲಿದ್ದು, ಅದಕ್ಕಾಗಿ ಬೆಳಗ್ಗಿನಿಂದಲೇ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದಾರೆ.
ಬಜೆಟ್ ಮಂಡನೆಗಾಗಿ ವಿಧಾನಸೌಧಕ್ಕೆ ತೆರಳುವ ಮುನ್ನ ಸಿಎಂ ಬಸವರಾಜ್ ಬೊಮ್ಮಾಯಿ ನಗರದ ಹಲವು ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬೆಂಗಳೂರಿನ ಆರ್.ಟಿ.ನಗರದ ತಮ್ಮ ನಿವಾಸದ ಬಳಿಯಿರುವ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ತೆರಳಿದಅವರು ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಬಾಲಬ್ರೂಯಿ ಗೆಸ್ಟ್ ಹೌಸ್ ಬಳಿಯಿರುವ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಸಿಎಂ ಬೊಮ್ಮಾಯಿ ಅವರಿಗೆ ಸಚಿವ ಭೈರತಿ ಬಸವರಾಜ್, ಶ್ರೀನಿವಾಸ್ ಪೂಜಾರಿ ಸಾಥ್ ನೀಡಿದರು.
ಇಡೀ ರಾಜ್ಯಕ್ಕೆ ಒಳಿತಾಗಲೆಂದು ಬೊಮ್ಮಾಯಿ ಪ್ರಾರ್ಥನೆ
ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ʻʻರಾಜ್ಯದ ಜನತೆಯ ಹೆಸರಿನಲ್ಲಿ ಪೂಜೆ ಮಾಡಿಸಿದ್ದೇನೆ. ಇಡೀ ರಾಜ್ಯದ ಜನರಿಗೆ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆʼʼ ಎಂದರು. ಬಜೆಟ್ ಮೇಲಿನ ನಿರೀಕ್ಷೆಗಳ ಬಗ್ಗೆ ಕೇಳಿದಾಗ ಕಾದು ನೋಡಿ ಎಂದಷ್ಟೇ ಹೇಳಿದರು ಬೊಮ್ಮಾಯಿ.
ದೇವರ ಮಂಗಳಾರತಿ ತಟ್ಟೆಗೆ ೫೦೦ ರೂ.ಗಳ ಎರಡು ನೋಟುಗಳನ್ನು ಹಾಕಿದರು ಬೊಮ್ಮಾಯಿ.
ಬಸ್ ಎಂದಿತ್ತು, ಕ್ಯಾನ್ಸಲ್ ಆಗಿ ಕಾರಿನಲ್ಲೇ ವಿಧಾನಸೌಧಕ್ಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೇಸ್ ಕೋರ್ಸ್ ನಿವಾಸದಿಂದ ವಿಧಾನಸೌಧಕ್ಕೆ ಬಸ್‌ನಲ್ಲಿ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಅದನ್ನು ಬದಲಾಯಿಸಿ, ಕಾರಿನಲ್ಲೇ ಪ್ರಯಾಣ ಬೆಳೆಸಿದರು ಬೊಮ್ಮಾಯಿ.
ಸಂಪುಟ ಸಭೆಯಲ್ಲಿ ಅಂಗೀಕಾರ
ಬೊಮ್ಮಾಯಿ ಅವರು ಮಂಡಿಸಲಿರುವ ಬಜೆಟ್‌ನ್ನು ಸಂಪುಟ ಸಭೆಯ ಮುಂದಿಟ್ಟು ಅನುಮತಿ ಪಡೆಯುವ ಪ್ರಕ್ರಿಯೆಯೂ ನಡೆಯಿತು.
ಸಿಎಂ ಬೊಮ್ಮಾಯಿ ಅವರಿಗೆ ಸಚಿವ ಬೈರತಿ ಬಸವರಾಜ್, ಎಸ್‌ಟಿ ಸೋಮಶೇರ್, ಗೋಪಾಲಯ್ಯ, ಮುನಿರತ್ನ, ಸುನಿಲ್ ಕುಮಾರ್ ಮೊದಲಾದವರು ಸಾಥ್ ನೀಡಿದರು.
ಇದನ್ನೂ ಓದಿ : Karnataka Budget 2023 : ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಸಿಎಂ ಬೊಮ್ಮಾಯಿ ನೀಡುತ್ತಾರಾ ಜನಪ್ರಿಯ ಬಜೆಟ್?