Site icon Vistara News

Karnataka Budget 2023 : ನಿಮ್ಮಲ್ಲಿ ಕಿಸಾನ್‌ ಕಾರ್ಡ್‌ ಇದ್ಯಾ?; ಸಿಗುತ್ತೆ 10,000 ರೂ. ಹೆಚ್ಚುವರಿ ಸಬ್ಸಿಡಿ, ಬಡ್ಡಿರಹಿತ ಸಾಲ ಪ್ರಮಾಣ ಹೆಚ್ಚಳ

Agriculture

#image_title

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ (Karnataka Budget 2023) ಕೃಷಿ ಕ್ಷೇತ್ರಕ್ಕೆ ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಭೂಸಿರಿ ಯೋಜನೆಯಡಿ ಕಿಸಾನ್‌ ಕಾರ್ಡ್‌ ಇರುವ ರೈತರಿಗೆ ಹೆಚ್ಚುವರಿ ಸಬ್ಸಿಡಿ ದೊರೆಯಲಿದೆ.

ಬಡ್ಡಿ ರಹಿತ ಸಾಲ ಪ್ರಮಾಣ ಹೆಚ್ಚಳ

ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ರೈತರಿಗೆ ಸುಲಭವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ ದೊರಕಿಸಿದಂತಾಗುತ್ತದೆ. ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂ.ಗಳಷ್ಟು ಸಾಲ ವಿತರಿಸಲಾಗುವುದು.

ಭೂಸಿರಿ ಯೋಜನೆಯಡಿ ಸಹಾಯ ಧನ ಹೆಚ್ಚಳ

ಇದರೊಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ‘ಭೂ ಸಿರಿ’ ಎಂಬ ನೂತನ ಯೋಜನೆಯಡಿ 2023-24ನೇ ಸಾಲಿನಿಂದ 10 ಸಾವಿರ ರೂ. ಗಳ ಹೆಚ್ಚುವರಿ ಸಹಾಯಧನ ನೀಡಲು ನಿರ್ಧರಿಸಿದ್ದೇವೆ. ತುರ್ತು ಸಂದರ್ಭಗಳಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳನ್ನು ಖರೀದಿಸಲು ಇದರಿಂದ ಅನುಕೂಲವಾಗಲಿದೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರದ 2,500 ರೂ. ಹಾಗೂ ನಬಾರ್ಡ್‌ನ 7,500 ರೂ. ಸೇರಿದ್ದು, ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ.

ಜೀವನ್‌ ಜ್ಯೋತಿ ವಿಮೆಗೆ ೧೮೦ ಕೋಟಿ ರೂ.
ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ ವೆಚ್ಚದಲ್ಲಿ ಜೀವನ್‌ ಜ್ಯೋತಿ ವಿಮಾ 180 ಕೋಟಿ ಯೋಜನೆಯ ನೆರವಿನೊಂದಿಗೆ ಅವರ ಬದುಕಿಗೆ ಭದ್ರತೆ ಒದಗಿಸಲು ಕ್ರಮ ವಹಿಸಲಾಗುವುದು.

೩೦೦ ಹೈಟೆಕ್‌ ಹಾರ್ವೆಸ್ಟರ್‌ ಯಂತ್ರ
ರೈತರಿಗೆ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು ಸುಲಭವಾಗಿ ದೊರೆಯುವಂತೆ ಮಾಡಲು ಕೃಷಿ ಇಲಾಖೆಯು ಈಗಾಗಲೇ ನಿರ್ವಹಿಸುತ್ತಿರುವ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ಗಳನ್ನು ಹಂತ ಹಂತವಾಗಿ ಒದಗಿಸಲು ಉದ್ದೇಶಿಸಲಾಗಿದೆ. 2023-24ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಗಳಿಗೆ ತಲಾ 50 ಲಕ್ಷ ರೂ. ನಂತೆ, ಈ ವರ್ಷ 50 ಕೋಟಿ ರೂ. ಒದಗಿಸಲಾಗುವುದು.

ಕೃಷಿಗೆ ಡಿಜಿಟಲ್‌ ಸ್ಪರ್ಶದ ಸಂಭ್ರಮ

ಇಸ್ರೋ ಸಂಸ್ಥೆ ಸಹಯೋಗದೊಂದಿಗೆ ಡಿಜಿಟಲ್ ಕೃಷಿಯಲ್ಲಿ ಜಿಯೋ-ಸ್ಪೇಷಿಯಲ್ ತಾಂತ್ರಿಕತೆಗಳನ್ನು ಅಳವಡಿಸಲು 50 ಕೋಟಿ ರೂ. ವೆಚ್ಚದಲ್ಲಿ ಒಂದು ಹೊಸ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಯೋಜನೆಯಿಂದ ದೊರಕುವ ಮಾಹಿತಿಗಳನ್ನು ಉಪಯೋಗಿಸಿ, Precision Farming ಸೇರಿದಂತೆ ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ತಿಳಿವಳಿಕೆಯುಳ್ಳ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ರೈತರಿಗೆ ಅನುಕೂಲವಾಗಲಿದೆ.

ರೈತ ಉತ್ಪಾದಕ ಸಂಸ್ಥೆಗಳಿಗೆ ರೈತ ಉನ್ನತಿ ಸಹಾಯಧನ

ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳನ್ನು (FPO) ಪ್ರೋತ್ಸಾಹಿಸಲು ತಲಾ 10 ಲಕ್ಷ ರೂ. ವರೆಗಿನ ಬಂಡವಾಳಕ್ಕೆ 5 ವರ್ಷಗಳ ಅವಧಿಗೆ ಬ್ಯಾಂಕುಗಳ ಮೂಲಕ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ಬಡ್ಡಿ ಸಹಾಯಧನ ಒದಗಿಸಲಾಗುವುದು.

ರೈತ ಸಿರಿ: ಕಿರುಧಾನ್ಯ ಬೆಳೆಯಲು ಹೆಕ್ಟೇರ್‌ಗೆ ೧೦,೦೦೦ ರೂ. ಪ್ರೋತ್ಸಾಹಧನ

ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023ರ ಅಂಗವಾಗಿ ಕಿರುಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತಸಿರಿ’ ಯೋಜನೆಯಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10,000 ಗಳ ಪ್ರೋತ್ಸಾಹಧನವನ್ನು ನೀಡಲಾಗುವುದು. ಅಲ್ಲದೆ ಸಿರಿಧಾನ್ಯಗಳನ್ನು ಕ್ಷೇತ್ರಮಟ್ಟದಲ್ಲಿ ಸಂಸ್ಕರಣೆ, ಗ್ರೇಡಿಂಗ್, ಪ್ಯಾಕಿಂಗ್ ಮಾಡುವ ರೈತ ಉತ್ಪಾದಕ ಸಂಸ್ಥೆಗಳಿಗೆ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ಸಹಾಯಧನಕ್ಕೆ ಪ್ರಾಶಸ್ಯ ನೀಡಲಾಗುವುದು.

ಕೋಟಿ ರೈತರಿಗೆ ನೈಸರ್ಗಿಕ ಮತ್ತು ಸಮಗ್ರ ಕೃಷಿ

ಕೇಂದ್ರ ಸರ್ಕಾರವು ತನ್ನ ಆಯವ್ಯಯದಲ್ಲಿ ಒಂದು ಕೋಟಿ ರೈತರನ್ನು ನೈಸರ್ಗಿಕ ಕೃಷಿಗೆ ಆಕರ್ಷಿಸಲಾಗುವುದೆಂದು ಘೋಷಿಸಿದೆ. ಇದಕ್ಕೆ ಪೂರಕವಾಗಿ ಪ್ರತಿ ತಾಲ್ಲೂಕಿಗೆ ಒಂದರಂತೆ ತಲಾ 50 ಹೆಕ್ಟೇರ್‌ ಪ್ರದೇಶದಲ್ಲಿ ಗುಚ್ಛ ಮಾದರಿಯಲ್ಲಿ ಮುಂದಿನ 4 ವರ್ಷಗಳಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶವನ್ನು ನೈಸರ್ಗಿಕ ಮತ್ತು ಸಮಗ್ರ ಕೃಷಿಗೆ ಒಳಪಡಿಸಲಾಗುವುದು.

ಸಾವಿರ ಸರೋವರ ಅಭಿವೃದ್ಧಿಗೆ ಸಹಸ್ರ ಸರೋವರ ಯೋಜನೆ

ʻಸಹಸ್ರ ಸರೋವರ’ ಕಾರ್ಯಕ್ರಮದಡಿ ರಾಜ್ಯದಲ್ಲಿ 1,000 ಸಣ್ಣ ಸರೋವರಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ‘ಸಹ್ಯಾದ್ರಿ ಸಿರಿ’ ಯೋಜನೆಯಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ. ಕಿಂಡಿ ಅಣೆ, ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಎರಡೂ ಯೋಜನೆಗಳಿಗೆ 75 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.

ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸಿ ನೀರು ಸಂರಕ್ಷಣಾ ಕಾಮಗಾರಿಗಳಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲನಿಧಿ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಇದರಡಿಯಲ್ಲಿ ನರೇಗಾ ಯೋಜನೆಯ ಸಮನ್ವಯದೊಂದಿಗೆ ಎಲ್ಲಾ ರೈತರಿಗೆ ತಮ್ಮ ಜಮೀನಿನಲ್ಲಿ ಜಲಹೊಂಡವನ್ನು ನಿರ್ಮಿಸಲು ಪ್ರೋತ್ಸಾಹಿಸಲಾಗುವುದು.

ಇದನ್ನೂ ಓದಿ : Karnataka Budget 2023: 777 ಚಾರ್ಲಿ ಎಫೆಕ್ಟ್‌: ಬೀದಿ ನಾಯಿ ದತ್ತುಗೆ ಆನ್‌ಲೈನ್‌ ಪೋರ್ಟಲ್‌ ಘೋಷಿಸಿದ ಶ್ವಾನ ಪ್ರಿಯ ಸಿಎಂ

Exit mobile version