ಬೆಂಗಳೂರು: ರೈತರು ಬೆಳೆದ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ʼನಂದಿನಿʼ ಮಾದರಿಯಲ್ಲಿ ರೈತ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ ರೂಪಿಸಲು 10 ಕೋಟಿ ರೂ. ಒದಗಿಸಲು ಸರ್ಕಾರ ಮುಂದಾಗಿದೆ. ರಾಜ್ಯ ಬಜೆಟ್‌ನಲ್ಲಿ (karnataka budget 2023) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇದನ್ನು ಪ್ರಸ್ತಾಪಿಸಿದ್ದಾರೆ.
ತಮ್ಮ ಹಿಂದಿನ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ʼಕೃಷಿ ಭಾಗ್ಯʼ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮರು ಜಾರಿಗೆ ತರುತ್ತಿದ್ದಾರೆ. ಇದನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಜತೆಗೆ ಸಂಯೋಜಿಸಿ 100 ಕೋಟಿ ರೂ. ವೆಚ್ಚದಲ್ಲಿ ಮರು ಜಾರಿಗೊಳಿಸಲಾಗುತ್ತಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸಲು ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ʼನವೋದ್ಯಮʼ ಎಂಬ ಹೊಸ ಯೋಜನೆಯಡಿ 10 ಕೋಟಿ ರೂ. ಒದಗಿಸಲಾಗುತ್ತಿದೆ.
ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲೂಕುಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಕುಗಳು ನೀಡುವ ತಲಾ 20 ಲಕ್ಷ ರೂ.ವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ಸಹಾಯಧನ ನೀಡಲಾಗುತ್ತದೆ. ರೈತ ಉತ್ಪಾದಕ ಸಂಸ್ಥೆಗಳ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ಗೋದಾಮು, ಶೀತಲಗೃಹ ನಿರ್ಮಾಣ ಮತ್ತು ಇತರ ಮೂಲಸೌಕರ್ಯ ಸೃಜನೆಗೆ ಯೋಜನಾ ವೆಚ್ಚದ ಗರಿಷ್ಠ ಶೇ.20ರಷ್ಟು, ಒಂದಿ ಕೋಟಿ ರೂ. ಮೀರದಂತೆ seed capital ಒದಗಿಸಲು ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ಬೆಳೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು ಕೆಪೆಕ್ ಸಂಸ್ಥೆಯ ಮೂಲಕ ರೈತ ಉತ್ಪಾದಕ ಸಂಸ್ಥೆಗಳು, ನವೋದ್ಯಮಿಗಳು ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಬೆಂಬಲ ನೀಡಲು 5 ಕೋಟಿ ರೂ. ಒದಗಿಸಲಾಗುತ್ತದೆ. ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ಯಂತ್ರಧಾರೆ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಿ ಇವುಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಹಂತಹಂತವಾಗಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು 2023- 24ನೇ ಸಾಲಿನಲ್ಲಿ 100 ಹಬ್‌ಗಳನ್ನು ಸ್ಥಾಪಿಸಲು 50 ಕೋಟಿ ರೂ. ಒದಗಿಸಲಾಗುತ್ತಿದೆ.