ಬೆಂಗಳೂರು: ಹೊಸದಾಗಿ ಮದುವೆಯಾಗುವ ನವಜೋಡಿಗಳಿಗೆ ಸಿದ್ದರಾಮಯ್ಯ (CM Siddaramaiah) ಶುಭ ಸುದ್ದಿ ನೀಡಿದ್ದಾರೆ. ಇನ್ನು ಮುಂದೆ ಮದುವೆ ನೋಂದಣಿಗೆ ನೀವು ಸಬ್ ರಿಜಿಸ್ಟ್ರಾರ್ ಕಚೇರಿಗೆ (Sub Registrar office) ಹೋಗಬೇಕಾಗಿಲ್ಲ. ಆನ್‌ಲೈನ್ ಮೂಲಕವೇ ನೋಂದಣಿ (ಆನ್‌ಲೈನ್ ಮದುವೆ ನೋಂದಣಿ) ಮಾಡಿಸಿಕೊಳ್ಳಬಹುದು. ಅಥವಾ ಆಯಾ ಗ್ರಾಮ ಪಂಚಾಯಿತಿಗಳಿಗೇ ಹೋಗಿ ನೋಂದಣಿ ಮಾಡುವ ಅವಕಾಶವೂ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2023-24ನೇ ಸಾಲಿನ ಬಜೆಟ್‌ನಲ್ಲಿ (Karnataka Budget 2023) ಈ ಘೋಷಣೆ ಮಾಡಲಾಗಿದೆ. ಇಲ್ಲಿವರೆಗೆ ಉಪ ನೋಂದಣಿ ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿಗೇ ಅವಕಾಶ ಇತ್ತು. ಈಗ ಅದು ಗ್ರಾಮ ಪಂಚಾಯಿತಿಯಲ್ಲೇ ನೋಂದಣಿ ಆಗುವಂತಾಗಿದೆ.
ಕಾವೇರಿ ತಂತ್ರಾಂಶದಲ್ಲಿ ನೋಂದಣಿಗೆ ಅವಕಾಶ
ವಧು-ವರರು ಕಾವೇರಿ 2.0 ತಂತ್ರಾಶದಲ್ಲಿ ಆನ್‌ಲೈನ್ ಮೂಲಕ ಮದುವೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಜೊತೆಗೆ ಗ್ರಾಮ ಪಂಚಾಯತಿ ಬಾಪೂ ಸೇವಾ ಕೇಂದ್ರ ಹಾಗೂ ಗ್ರಾಮ ಒನ್ನಲ್ಲಿಯೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?
ಈವರೆಗೆ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮಾತ್ರ ವಿವಾಹ ನೋಂದಣಿಯನ್ನು ಕೈಗೊಳ್ಳಲಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿ ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.
ಇದನ್ನು ಓದಿ: Karnataka Budget 2023 : ಬಜೆಟ್‌ನಲ್ಲಿ 7ನೇ ವೇತನ ಆಯೋಗಕ್ಕೆ ದುಡ್ಡಿಲ್ಲ, ಓಪಿಎಸ್ ಜಾರಿಯ ಸುದ್ದಿ ಇಲ್ಲ; ನೌಕರರಿಗೆ ನಿರಾಸೆ
ಬೆಂಗಳೂರಿನಲ್ಲಿರುವ ಉಪ-ನೋಂದಣಾಧಿಕಾರಿ ಕಛೇರಿಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ಕಡಿಮೆ ಮಾಡಲು ಬೆಂಗಳೂರಿನ ಎಂಟು ಕಚೇರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನಸ್ನೇಹಿ ಕಛೇರಿಗಳನ್ನಾಗಿ ಉನ್ನತೀಕರಿಸಲಾಗುವುದು.