ಬೆಂಗಳೂರು: ಕೊನೆಗೂ ಇಂದಿರಾ ಕ್ಯಾಂಟೀನ್‌ಗೆ ಅಧಿಕೃತ ಕಾಯಕಲ್ಪ ಸಿಕ್ಕಿದೆ. ಇಂದಿರಾ ಕ್ಯಾಂಟೀನ್ ಪುನಾರಂಭ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್‌ನಲ್ಲಿ (Karnataka budget 2023) 100 ಕೋಟಿ ರೂಪಾಯಿ ಮೀಸಲು ಇಡುವುದಾಗಿ ಘೋಷಿಸಿದ್ದಾರೆ.
ಬಜೆಟ್ ಮೇಲಿನ ಭಾಷಣ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಈ ಘೋಷಣೆ ನೀಡಿದ್ದು, ತಮ್ಮ ಕನಸಿನ ಯೋಜನೆಗೆ ಮರು ಚಾಲನೆ ನೀಡುವುದಾಗಿ ಹೇಳಿದ್ದಾರೆ. ಮೊದಲನೇ ಹಂತದಲ್ಲಿ ಬಿಬಿಎಂಪಿ ಹಾಗೂ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಪುನರಾರಂಭ ಮಾಡಲು ನಿರ್ಧಾರ ಮಾಡಲಾಗಿದೆ.
ಎರಡನೇ ಹಂತದಲ್ಲಿ ಎಲ್ಲ ಹೊಸ ಪಟ್ಟಣ ಹಾಗೂ ಬಿಬಿಎಂಪಿ ಹೊಸ ವಾರ್ಡ್‌ಗಳಲ್ಲಿ ಕ್ಯಾಂಟೀನ್ ಆರಂಭ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ದುರಸ್ತಿ ನವೀಕರಣ ಹಾಗೂ ನಿರ್ವಹಣೆಗೆ 100 ಕೋಟಿ ರೂಪಾಯಿಯನ್ನು ಮೀಸಲಿಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕರ್ನಾಟಕ ಬಜೆಟ್ ಗಾತ್ರ 3.24 ಲಕ್ಷ ಕೋಟಿ ರೂ.ಗೆ ಏರಿಕೆ
ಕರ್ನಾಟಕದ 2023-24 ಸಾಲಿನ ಬಜೆಟ್ ಗಾತ್ರ 3.4 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. (3,24,478 ಕೋಟಿ ರೂ.) 85,818 ಕೋಟಿ ರೂ. ಒಟ್ಟು ಸಾಲವಿದೆ. 228 ಕೋಟಿ ರೂ. ಸಾಲ ವಸೂಲು ಮೊತ್ತವನ್ನು ಅಂದಾಜಿಸಲಾಗಿದೆ. 2023-24ರಲ್ಲಿ ಒಟ್ಟು ಜಮೆಗಳು 3,24,478 ಕೋಟಿ ರೂ.ಗಳಾಗಿದೆ.
ಕಳೆದ ಫೆಬ್ರವರಿಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು 3,09,182 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಬೊಮ್ಮಾಯಿ ಬಜೆಟ್‌ಗೆ ಹೋಲಿಸಿದರೆ ಸಿದ್ದರಾಮಯ್ಯ ಅವರು 15,296 ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಿದ್ದಾರೆ.
ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕವು ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ 21% ಏರಿಕೆ ದಾಖಲಿಸಿದೆ. ಮೊದಲ ತ್ರೈಮಾಸಿಕದಲ್ಲಿ ಕೆಜಿಎಸ್‌ಟಿ ರಾಜಸ್ವ ಸಂಗ್ರಹ 18,962 ಕೋಟಿ ರೂ.ಗಳಾಗಿದೆ. ಪರಿಣಾಮಕಾರಿ ತೆರಿಗೆ ಆಡಳಿತಕ್ಕಾಗಿ ಹಾಗೂ ವಾಣಿಜ್ಯೋದ್ಯಮಗಳಿಗೆ ಉತ್ತಮ ಸಂಪರ್ಕ ನೀಡಲು ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಾಲ್ಕು ಹೊಸ ವಿಭಾಗಗಳನ್ನು ತೆರೆಯಲಾಗುವುದು. ಅತ್ಯಧಿಕ ತೆರಿಗೆ ಪಾವತಿಸುವವರಿಗೆ ಪ್ರತ್ಯೇಕ ವಿಭಾಗವನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸಲಾಗುವುದು.
ದತ್ತಾಂಶ ವಿಶ್ಲೇಷಣೆಗೆ ಮತ್ತು ರಾಜಸ್ವ ಸಂಗ್ರಹಣೆಯನ್ನು ವೃದ್ಧಿಗೊಳಿಸಲು ಕೃತಕ ಬುದ್ದಿಮತ್ತೆ ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗುವುದು. 2023-24ನೇ ಸಾಲಿಗೆ ವಾಣಿಜ್ಯ ಇಲಾಖೆಯ ತೆರಿಗೆ ಸಂಗ್ರಹದ ಗುರಿಯನ್ನು 1,01,000 ಕೋಟಿ ರೂ.ಗೆ ಏರಿಸಲಾಗಿದೆ.
ಮಾರ್ಗಸೂಚಿ ದರಗಳ ಪರಿಷ್ಕರಣೆ
2018-19ನೇ ಸಾಲಿನಲ್ಲಿ ರಾಜ್ಯದ ಎಲ್ಲ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಜಾರಿಗೆ ತರಲಾಗಿತ್ತು. ಕೋವಿಡ್ ಕಾರಣದಿಂದ ಬಳಿಕ ಪರಿಷ್ಕರಿಸಿರಲಿಲ್ಲ. ಪ್ರಸ್ತುತ ಮಾರುಕಟ್ಟೆ ದರಗಳಲ್ಲಿ ವ್ಯತ್ಯಾಸವಾಗಿರುವುದರಿಂದ ಸರಿಪಡಿಸಲು ರಾಜ್ಯದ ಎಲ್ಲ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಜಾರಿಗೆ ತರಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ: Karnataka budget 2023 : ಬಜೆಟ್ ಮುನ್ನವೇ ಸಿಎಂ ಸಿದ್ದರಾಮಯ್ಯಗೆ ಕುರ್ಚಿ ಚಿಂತೆ!
2023-24ರ ಸಾಲಿನಲ್ಲಿ ಒಟ್ಟು 2,50,933 ಕೋಟಿ ರೂ.ಗಳ ರಾಜಸ್ವ ವೆಚ್ಚ, 54,374 ಕೋಟಿ ರೂ.ಗಳ ಬಂಡವಾಳ ವೆಚ್ಚ, ಸಾಲದ ಮರು ಪಾವತಿಯಾಗಿ 22,441 ಕೋಟಿ ರೂ.ಗಳೆಂದು ನಿಗದಿಪಡಿಸಲಾಗಿದೆ. ಒಟ್ಟು ವೆಚ್ಚವು 3,27,747 ಕೋಟಿ ರೂ.ಗಳಾಗಿದೆ.
ಇನ್ನಷ್ಟು ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ