Site icon Vistara News

Karnataka Budget 2023 : ಡಿ.ಕೆ ಶಿವಕುಮಾರ್‌ ಕಿವೀಲಿದ್ದ ಚೆಂಡು ಹೂವು ಕಿತ್ತಿದ್ದೇಕೆ ಯಡಿಯೂರಪ್ಪ? ಅಲ್ಲಿ ಏನಾಯಿತು?

DKS _BSY

#image_title

ಬೆಂಗಳೂರು: ಶುಕ್ರವಾರ ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ನಷ್ಟೇ (Karnataka Budget 2023) ಚರ್ಚೆಗೆ ಒಳಗಾದ ಮತ್ತೊಂದು ವಿಷಯವೆಂದರೆ ಕಾಂಗ್ರೆಸ್‌ ಶಾಸಕರು ಕಿವಿಯಲ್ಲಿ ಮುಡಿದುಕೊಂಡು ಬಂದ ಚೆಂಡು ಹೂವು. ಬೊಮ್ಮಾಯಿಯವರ ಬಜೆಟ್‌ ಜನರ ಕಿವಿಗೆ ಹೂವು ತೊಡಿಸುವ ಕಾರ್ಯಕ್ರಮ ಎಂದು ಬಿಂಬಿಸಲು ಅತ್ಯಂತ ಯೋಜಿತವಾಗಿಯೇ ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ ಹೂವು ಇಟ್ಟುಕೊಂಡು ಸದನಕ್ಕೆ ಬಂದಿದ್ದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ ಭಾಷಣ ಓದಲು ಆರಂಭಿಸಿದವರಿಗೂ ತಕ್ಷಣ ಕಂಡಿದ್ದು ಸಿದ್ದರಾಮಯ್ಯ ಅವರು ಇಟ್ಟುಕೊಂಡಿದ್ದ ಹೂವು. ಅವರು ಸಿದ್ದರಾಮಯ್ಯ ಅವರನ್ನು ಕೆಣಕಿದಾಗ ಕಾಂಗ್ರೆಸ್‌ ಸದಸ್ಯರು ಎದ್ದು ಸದ್ದು ಗದ್ದಲ ಮಾಡಿದರು. ಸ್ವಲ್ಪ ಹೊತ್ತು ಗದ್ದಲ ನಡೆದರೂ ಸಿದ್ದರಾಮಯ್ಯ ಅವರು ಸೂಚನೆ ನೀಡುತ್ತಿದ್ದಂತೆಯೇ ಎಲ್ಲರೂ ಸುಮ್ಮನಾದರು.

ನಿಜವೆಂದರೆ ಕಾಂಗ್ರೆಸ್‌ ಶಾಸಕರು ತಾವು ಇಟ್ಟುಕೊಂಡು ಬಂದಿದ್ದ ಹೂವನ್ನು ಬಜೆಟ್‌ ಮಂಡನೆ ಮುಗಿದರೂ ತೆಗೆದಿರಲಿಲ್ಲ. ಬಜೆಟ್‌ ಮಂಡನೆಯಾದ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಕೊಠಡಿಗೆ ಹೋಗಿ ಮಾಧ್ಯಮಗಳ ಜತೆ ಮಾತನಾಡಿದರೂ ಅಲ್ಲೂ ಅವರ ಕಿವಿಯಲ್ಲಿ ಹೂವು ಹಾಗೇ ಇತ್ತು. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಪತ್ರಕರ್ತರ ಜತೆ ಮಾತನಾಡಲು ಬಂದಾಗಲೂ ಎರಡೂ ಕಿವಿಯಲ್ಲಿ ಹೂವಿತ್ತು!

ಡಿ.ಕೆ. ಶಿವಕುಮಾರ್‌ ಸದನದಿಂದ ಹೊರಬಂದು ತಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದ ಮಾಧ್ಯಮಗಳತ್ತ ಹೋಗುತ್ತಿದ್ದಾಗ ಎದುರಾದವರು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರು. ಸದಾ ಗಂಭೀರ ವದನರಾಗಿರುವ ಬಿ.ಎಸ್‌. ಯಡಿಯೂರಪ್ಪ ಅವರು ಡಿ.ಕೆ. ಶಿವಕುಮಾರ್‌ ಅವರು ಎದುರಾಗುತ್ತಿದ್ದಂತೆಯೇ ಮನಸು ಬಿಚ್ಚಿ ನಕ್ಕರು. ಡಿ.ಕೆ. ಶಿವಕುಮಾರ್‌ ಅವರು ಕೂಡಾ ಬಿ.ಎಸ್‌ ವೈ ಅವರನ್ನು ನೋಡುತ್ತಲೇ ಮನಸಾರೆ ನಕ್ಕರು.

ಹತ್ತಿರ ಬರುತ್ತಿದ್ದಂತೆಯೇ ಬಿ.ಎಸ್‌. ಯಡಿಯೂರಪ್ಪ ಅವರು ಡಿಕೆಶಿ ಅವರ ಕಿವಿಯಲ್ಲಿದ್ದ ಹೂವನ್ನು ತೆಗೆದು ಪಕ್ಕದಲ್ಲಿದ್ದ ಇನ್ನೊಬ್ಬರ ಕೈಗೆ ಕೊಟ್ಟರು. ಆಗ ಅವರಿಬ್ಬರು ನಕ್ಕ ಸೀನ್‌ ತುಂಬಾ ಲವಲವಿಕೆಯಿಂದ ತುಂಬಿತ್ತು. ಬಿಎಸ್‌ವೈ ಅವರು ʻಡಿ.ಕೆ.ಶಿವಕುಮಾರ್‌, ಕಿವಿಯಿಂದ ಹೂವು ತೆಗೀರಿʼ ಎಂದ ಹಾಗಿತ್ತು ಅವರ ವೈಖರಿ. ಬಿಎಸ್‌ವೈ ಅವರು ಕಿವಿಯಿಂದ ತೆಗೆದು ಬೇರೆಯವರ ಕೈಗೆ ಕೊಟ್ಟ ಹೂವನ್ನು ವಾಪಸ್‌ ಪಡೆದು ಇಟ್ಟುಕೊಂಡರು ಡಿ.ಕೆ. ಶಿವಕುಮಾರ್‌.

ಅಷ್ಟು ಮಾಡಿದ ಬಳಿಕ ಬಿಎಸ್‌ವೈ ನಗುತ್ತಲೇ ಮುಂದೆ ಸಾಗಿದರು. ಡಿ.ಕೆ. ಶಿವಕುಮಾರ್‌ ಅವರು ʻನನ್ನ ಕಿವಿಯಿಂದ ಹೂ ತೆಗೆದರುʼ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್‌ ಮತ್ತು ಬಿ.ಎಸ್‌.ವೈ ಅವರ ನಡುವೆ ಹಿಂದಿನಿಂದಲೂ ಆತ್ಮೀಯವಾದ ಸಂಬಂಧವೊಂದು ಇದ್ದೇ ಇದೆ. ಈ ಹಿಂದೆ ಮೈತ್ರಿ ಸರಕಾರ ಪತನಗೊಂಡ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಅವರು ಏನೋ ಸ್ವಲ್ಪ ದೊಡ್ಡ ಧ್ವನಿಯಲ್ಲಿ ಮಾತನಾಡಿದಾಗ, ʻಡಿ.ಕೆ. ಶಿವಕುಮಾರ್‌ ನಿಮ್ಮಿಂದ ಇಂಥ ಮಾತು, ವರ್ತನೆ ನಿರೀಕ್ಷೆ ಮಾಡಿರಲಿಲ್ಲʼ ಎಂದು ಬಿಎಸ್‌ವೈ ಹೇಳಿದ್ದರು. ಆಗ ಡಿ.ಕೆ. ಶಿವಕುಮಾರ್‌ ಕೂಡಾ ತಪ್ಪಾಯಿತು ಅಂತ ಹೇಳಿ ಸರಿ ಮಾಡಿಕೊಂಡಿದ್ದರು.

ಅಂತೂ ಚೆಂಡು ಹೂ ಸಾಕಷ್ಟು ಚರ್ಚೆಗೆ ಕಾರಣವಾಯಿತು.

ಇದನ್ನೂ ಓದಿ : Karnataka Budget 2023: ಒಂದು ರೂಪಾಯಿಯಲ್ಲಿ ಯಾವುದಕ್ಕೆ ಎಷ್ಟು ಪೈಸೆ ಖರ್ಚು?

Exit mobile version