ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುನಿರೀಕ್ಷೆಯ ಬಜೆಟ್ ಮಂಡನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು 14ನೇ ಬಾರಿ ಬಜೆಟ್ ಮಂಡನೆ ಮಾಡಿದ್ದು, ಮೂಲಕ ವಿಧಾನಸಭೆಯಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ಮಂಡಿಸಿದ ಬಜೆಟ್‌ನ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Karnataka Budget 2023: ಇಂದು ರಾಜ್ಯ ಬಜೆಟ್; ಸಿದ್ದರಾಮಯ್ಯ ದಾಖಲೆ, ಗ್ಯಾರಂಟಿ ಹೊರೆ; ಏನೇನು ಹೈಲೈಟ್?
ವೆಚ್ಚದ ಮಾಹಿತಿ ಕೊಟ್ಟ ಸಿದ್ದರಾಮಯ್ಯ
ಪ್ರಸಕ್ತ ಬಜೆಟ್‌ನ ಒಟ್ಟು ಮೊತ್ತದಲ್ಲಿ 2.59 ಲಕ್ಷ ಕೋಟಿ ರೂಪಾಯಿ ಭಾಗಶಃ ವೆಚ್ಚಕ್ಕೆ ಹೋಗಲಿದೆ. ಇನ್ನು 54 ಸಾವಿರ ಕೋಟಿ ರೂ. ಬಂಡವಾಳ ವೆಚ್ಚ ಆಗಲಿದೆ. 2022-23ಕ್ಕೆ ಹೋಲಿಸಿದರೆ ರಾಜಸ್ವ ವೆಚ್ಚ ಶೇ.23ರಷ್ಟು ಹೆಚ್ಚಾಗಲಿದೆ” ಎಂದು ಸಿದ್ದರಾಮಯ್ಯ ವಿವರಿಸಿದರು.
3.70 ಲಕ್ಷ ಜನರಿಗೆ ಯುವನಿಧಿ ಹಣ
ಯುವನಿಧಿ ಗ್ಯಾರಂಟಿ ಯೋಜನೆ ಕುರಿತು ಸಿದ್ದರಾಮಯ್ಯ ಮಾತನಾಡಿದರು. “2022-23ರಲ್ಲಿ ತೇರ್ಗಡೆಯಾದ ಪದವೀಧರರು, ಡಿಪ್ಲೋಮಾ ಪಡೆದವರಿಗೆ 6 ತಿಂಗಳಲ್ಲಿ ಕೆಲಸ ಸಿಗದಿದ್ದರೆ, ಅವರಿಗೆ ಎರಡು ವರ್ಷ ಮಾಸಿಕವಾಗಿ ಸಹಾಯಧನ ನೀಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ತಿಳಿಸಿದ್ದೆವು. ಈ ಭರವಸೆಯನ್ನು ನಾವು ಈಡೇರಿಸುತ್ತೇವೆ. ಪ್ರಸಕ್ತ ವರ್ಷದಲ್ಲಿ 3.70 ಲಕ್ಷ ಜನರಿಗೆ 250 ಕೋಟಿ ರೂ. ಇದಕ್ಕಾಗಿ ಖರ್ಚು ಮಾಡುತ್ತೇವೆ. ಪದವೀಧರರಿಗೆ ಮಾಸಿಕ 3 ಸಾವಿರ ರೂ., ಡಿಪ್ಲೋಮಾ ಪಡೆದವರಿಗೆ ಮಾಸಿಕ 1,500 ರೂ. ನೀಡುತ್ತೇವೆ” ಎಂದು ಹೇಳಿದರು.
4.42 ಲಕ್ಷ ಜನಕ್ಕೆ ಅನ್ನಭಾಗ್ಯ ಯೋಜನೆ ಅನುಕೂಲ
“ರಾಜ್ಯದಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದವರಿಗೆ 10 ಕೆ.ಜಿ ಅಕ್ಕಿ ಕೊಡಲು ತೀರ್ಮಾನಿಸಿ ಅನ್ನ ಭಾಗ್ಯ ಯೋಜನೆ ಜಾರಿಗೊಳಿಸುತ್ತೇವೆ. ರಾಜ್ಯದ 4.42 ಲಕ್ಷ ಬಡವರಿಗೆ ಇದರಿಂದ ಅನುಕೂಲವಾಗಲಿದೆ. ಪ್ರಸಕ್ತ ವರ್ಷಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೆ ತರಲು 10 ಸಾವಿರ ಕೋಟಿ ರೂ.ಗಿಂತ ಹೆಚ್ಚು ಹಣ ಖರ್ಚಾಗಲಿದೆ. 10 ಕೆ.ಜಿ ಅಕ್ಕಿ ನೀಡುವ ದಿಸೆಯಲ್ಲಿ ನಾವು ಎಫ್‌ಸಿಐಗೆ ಪತ್ರ ಬರೆದೆವು. 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೇಳಿದೆವು. ನಮ್ಮ ಹತ್ತಿರ ದಾಸ್ತಾನು ಇದೆ, ನಿಮಗೆ ಅಕ್ಕಿ ಕೊಡುತ್ತೇವೆ ಎಂದು ಎಫ್‌ಸಿಐನವರು ಪತ್ರ ಬರೆದರು. ಎಫ್‌ಸಿಐ ಡೆಪ್ಯುಟಿ ಮ್ಯಾನೇಜರ್ ಅವರ ಜತೆ ಮಾತನಾಡಿದಾಗ ಅವರು ಕೂಡ ಒಪ್ಪಿದ್ದರು. ಆದರೆ, ಕೇಂದ್ರದ ರಾಜಕೀಯದಿಂದ ಅಕ್ಕಿ ಕೊಡಲಿಲ್ಲ. ಕೇಂದ್ರ ಸರ್ಕಾರವು ಬಡವರ ವಿರೋಧಿ ನಿಲ್ಲುವನ್ನು ತಾಳಿದೆ. ಕೇಂದ್ರದ ಷಡ್ಯಂತ್ರ ಗೊತ್ತಾದ ಮೇಲೆ ನಾನು ಪಂಜಾಬ್, ತೆಲಂಗಾಣ ಸಿಎಂಗಳ ಜತೆ ಮಾತನಾಡಿದೆ. ಆದರೆ, ನಮಗೆ ಬೇಕಾದಷ್ಟು ಅಕ್ಕಿ ಕೊಡಲು ಆಗಲ್ಲ ಎಂದರು. ಹಾಗಾಗಿ, ನಾವು ಹಣ ಕೊಡಲು ತೀರ್ಮಾನಿಸಿದೆವು” ಎಂದು ಸಿದ್ದರಾಮಯ್ಯ ವಿವರಿಸಿದರು.
ಜುಲೈ 16ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಆರಂಭ
“ಜುಲೈ 16ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಆರಂಭವಾಗುತ್ತದೆ. ಆಗಸ್ಟ್‌ನಿಂದ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ 2 ಸಾವಿರ ರೂ. ಹಾಕುತ್ತೇವೆ. 1.30 ಕೋಟಿ ಮಹಿಳೆಯರಿಗೆ ಹಣ ಹಾಕುತ್ತೇವೆ. ಇದಕ್ಕಾಗಿ 17 ಸಾವಿರ ಕೋಟಿ ರೂ. ವಿನಿಯೋಗಿಸುತ್ತೇವೆ. ಗೃಹ ಜ್ಯೋತಿ ಯೋಜನೆಗೆ ಈಗಾಗಲೇ ಒಂದು ಕೋಟಿಗೂ ಅಧಿಕ ಜನ ನೋಂದಣಿ ಮಾಡಿಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಗೆ 9 ಸಾವಿರ ಕೋಟಿ ರೂ. ಬೇಕು. ಅದಕ್ಕೂ ಹಣ ಮೀಸಲಿಡುತ್ತೇವೆ” ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ತಿಳಿಸಿದರು.
ಗ್ಯಾರಂಟಿ ವಿಚಾರದಲ್ಲಿ ಪ್ರತಿಪಕ್ಷಗಳಿಗೆ ಸಿದ್ದರಾಮಯ್ಯ ಟಾಂಗ್
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಪ್ರತಿಪಕ್ಷಗಳು ಟೀಕಿಸುತ್ತಿರುವುದಕ್ಕೆ ಸಿದ್ದರಾಮಯ್ಯ ಟಾಂಗ್ ನೀಡಿದರು. “ನಾವು ಗ್ಯಾರಂಟಿ ಯೋಜನೆ ಘೋಷಿಸಿದಾಗ ಪ್ರತಿಪಕ್ಷಗಳು ವ್ಯಂಗ್ಯ ಮಾಡಿದವು. ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮ ಸ್ಥಾನದ ಘನತೆ ಮರೆತು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು. ಆದರೆ, ನಾನು ಮೊದಲೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಎಲ್ಲ ಗ್ಯಾರಂಟಿಗಳನ್ನು ನೂರಕ್ಕೆ ನೂರರಷ್ಟು ಜಾರಿಗೊಳಿಸುತ್ತೇವೆ. ಈಗ ಕೊಟ್ಟ ಮಾತಿನಂತೆ ಗ್ಯಾರಂಟಿಗಳಿಗೆ ಹಣ ವಿನಿಯೋಗಿಸಿದ್ದೇವೆ” ಎಂದು ಸಿದ್ದರಾಮಯ್ಯ ಹೇಳಿದರು.