Site icon Vistara News

Karnataka Budget 2023: ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಜೆಟ್ ಪೂರಕ, ಆಶಾದಾಯಕ: ಎನ್. ರವಿಕುಮಾರ್

MLC Ravikumar

ಬೆಂಗಳೂರು: ರಾಜ್ಯದ ಸಮಗ್ರ ಅಭಿವೃದ್ಧಿ, ರಾಜ್ಯದ ಎಲ್ಲ ವರ್ಗದ ಜನರ ಸಬಲೀಕರಣಕ್ಕಾಗಿ ಈ ಬಜೆಟ್ ಪೂರಕ, ಆಶಾದಾಯಕವಾಗಿದ್ದು, ಜನಪರ, ಜನಸ್ನೇಹಿ ಬಜೆಟ್ (Karnataka Budget 2023) ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಆಯವ್ಯಯದಲ್ಲಿ ರಾಜ್ಯದ ರೈತರು, ಮಹಿಳೆಯರು, ಯುವಕರ ಸಬಲೀಕರಣಕ್ಕೆ ಈ ಬಜೆಟ್‍ನಲ್ಲಿ ವಿಶೇಷವಾಗಿ ಹೊಸ ಯೋಜನೆಗಳನ್ನು ಜಾರಿ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದ ಜನರ ಅಭ್ಯುದಯಕ್ಕಾಗಿ ವಿಶೇಷ ಅನುದಾನ ಮೀಸಲಿಡಲಾಗಿದೆ. ಒಟ್ಟಾರೆಯಾಗಿ ಕೃಷಿ, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ನೀರಾವರಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ಮೊತ್ತದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವಿತರಣೆ, ಗೃಹಿಣಿಯರಿಗೆ ತಿಂಗಳಿಗೆ 500 ರೂ. ಗಳ ಸಹಾಯಧನ, ಗ್ರಾಮ ಸಹಾಯಕರ ಮಾಸಿಕ ಗೌರವಧನ 13,000 ರೂ. ಗಳಿಂದ. 14,000 ರೂ. ಗೆ ಹೆಚ್ಚಳ ಮಾಡಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಾಯಧನ 1000 ರೂಪಾಯಿಯಿಂದ 1500 ರೂಪಾಯಿಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | karnataka budget 2023 : ಉಪನಗರ ರೈಲಿಗೆ ವೇಗ, ನಗರದ ಸಾರಿಗೆ ಸಮಸ್ಯೆಗೆ ವೈಜ್ಞಾನಿಕ ಪರಿಹಾರ

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ವಿದ್ಯಾ ನಿಧಿ” ಯೋಜನೆಯನ್ನು ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರು ಹಾಗೂ ಆಟೋರಿಕ್ಷಾ ಚಾಲಕರ ಮಕ್ಕಳಿಗೂ ಕೂಡ ವಿಸ್ತರಣೆ ಮಾಡಲಾಗಿದೆ. ಅಲ್ಲದೆ, ರಾಜ್ಯದ ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 9,698 ಕೋಟಿ ರೂ. ಮೀಸಲಿರಿಸಲಾಗಿದೆ. ಮಠಗಳ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 425 ಕೋಟಿ ರೂ. ಅನುದಾನ ನೀಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಜಮೀನುಗಳ ವರ್ಷಾಶನ 6000 ರೂ. ಹೆಚ್ಚಳ ಮಾಡಲಾಗಿದೆ. ರಾಮನಗರದಲ್ಲಿ ಬೃಹತ್‌ ರಾಮಮಂದಿರ ನಿರ್ಮಾಣ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಅಂತ್ಯೋದಯಕ್ಕೆ ಬದ್ಧವಾಗಿದೆ. ರಾಜ್ಯದ ಬಿಪಿಎಲ್‌ ಹೊಂದಿರುವ ಎಸ್‌ಸಿ ಎಸ್‌ಟಿ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ ಉಚಿತ ವಿದ್ಯುತ್ ಘೋಷಿಸುವ ಮೂಲಕ ಸಮಾಜದ ಸರ್ವರ ಕಲ್ಯಾಣವನ್ನು ಖಚಿತಪಡಿಸಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬದ್ಧವಾಗಿರುವ ನಮ್ಮ ಸರ್ಕಾರವು ಹಿಂದುಳಿದ ವರ್ಗಗಳ 11 ಅಭಿವೃದ್ಧಿ ನಿಗಮಗಳಿಗೆ 569 ಕೋಟಿ ರೂ. ಘೋಷಿಸಿದೆ. ಗಂಗಾಕಲ್ಯಾಣ ಯೋಜನೆಯಡಿ ವಿವಿಧ ನಿಗಮಗಳ ಮೂಲಕ 17,000 ಫಲಾನುಭವಿಗಳಿಗೆ 675 ಕೋಟಿ ರೂ. ಸಹಾಯಧನ ನೀಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Budget 2023: ಮಹಿಳಾ ಸಬಲೀಕರಣ ಯೋಜನೆಗಳಿಗಾಗಿ 46,278 ಕೋಟಿ ರೂ.ಮೀಸಲು; ಏನೆಲ್ಲ ಸೌಲಭ್ಯಗಳು?

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ IIT, IIM, IISc, NIT ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 2 ಲಕ್ಷ ರೂ.ಗಳಿಂದ 4 ಲಕ್ಷಕ್ಕೆ ಹೆಚ್ಚಳ ಮಾಡಿದ್ದು, ನೀರಾವರಿ ಕ್ಷೇತ್ರಕ್ಕೆ ಒಟ್ಟಾರೆ ರೂ. 25,000 ಕೋಟಿ ಅನುದಾನ ಮೀಸಲು ಇರಿಸಲಾಗಿದೆ. ಬೆಂಗಳೂರಿನ ಸುತ್ತಮುತ್ತ ವಿಶ್ವದರ್ಜೆಯ ಪ್ಲಗ್ ಆ್ಯಂಡ್ ಪ್ಲೇ ಕೈಗಾರಿಕಾ ಪಾರ್ಕ್ ಸ್ಥಾಪನೆ, ಕರ್ನಾಟಕದ 9 ಸ್ಥಳಗಳಲ್ಲಿ ಹೊಸದಾಗಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್ ಪಕ್ಷಗಳು ಸುಖಾ-ಸುಮ್ಮನೆ ಬಜೆಟ್ ಕುರಿತು ಟೀಕೆ-ಟಿಪ್ಪಣಿ ಮಾಡುತ್ತಿರುವುದು ಸರಿಯಲ್ಲ. ರಾಜ್ಯದ ಜನರು ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದಿರುವ ಅವರು, ರಾಜ್ಯದ ಸಮಗ್ರ ಅಭಿವೃದ್ಧಿ, ರಾಜ್ಯದ ಎಲ್ಲ ಜನರ ಅಭ್ಯುದಯಕ್ಕೆ ಪೂರಕವಾಗಿರುವ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿಗಳಿಗೆ, ರಾಜ್ಯ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Exit mobile version