ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ರಾಜ್ಯದ ಸರ್ಕಾರಿ ನೌಕರರಿಗೆ ನಿರಾಸೆ ಮೂಡಿಸಿದೆ. ಬಜೆಟ್‌ನಲ್ಲಿ 7ನೇ ವೇತನ ಆಯೋಗದ ವರದಿಯನ್ನು (7th Pay Commission) ಜಾರಿಗೊಳಿಸಲು ಅಗತ್ಯವಾಗಿರುವ ಅನುದಾನ ಕಾಯ್ದಿರಿಸಿಲ್ಲ. ಅಂತೆಯೇ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (NPS) ರದ್ಡು ಪಡಿಸಿ ಹಳೇ ಪಿಂಚಣಿ ಯೋಜನೆಯನ್ನು (OPS) ಜಾರಿಗೆ ತರುವ ಕುರಿತು ಯಾವುದೇ ತೀರ್ಮಾನ (Govt Employees News) ಪ್ರಕಟಿಸಿಲ್ಲ.
ಏಳನೇ ವೇತನ ಆಯೋಗದ ವರದಿಯನ್ನು ತ್ವರಿತವಾಗಿ ಪಡೆದು, ಅದನ್ನು ಜಾರಿಗೆ ತರಬೇಕಾಗಿದೆ. ಹೀಗಾಗಿ ಈ ಬಜೆಟ್‌ನಲ್ಲಿಯೇ ಅಗತ್ಯ ಅನುದಾನವನ್ನು ಮೀಸಲಿಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಒತ್ತಾಯಿಸಿತ್ತು. ಅಂತೆಯೇ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಒತ್ತಾಯಿಸಿತ್ತು. ಆದರೆ ಈ ಎರಡೂ ಬೇಡಿಕೆಗಳ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿಲ್ಲ.
ಕಳೆದ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿದ್ದ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಅಗತ್ಯ ಅನುದಾನವನ್ನು ಮೀಸಲಿಟ್ಟಿರಲಿಲ್ಲ. ಇದು ನೌಕರರ ಅಸಮಧಾನಕ್ಕೆ ಕಾರಣವಾಗಿತ್ತು. ಆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಏಳನೇ ವೇತನ ಆಯೋಗ ಜಾರಿಯ ಕುರಿತು ಬದ್ಧತೆ ವ್ಯಕ್ತಪಡಿಸಿದ್ದರು. ಆದರೂ ನೌಕರರು ಅಸಮಧಾನಗೊಂಡಿದ್ದರು.
ಬಜೆಟ್‌ನ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಹೊಸ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಲಿದೆ ಎಂದು ನಿರೀಕ್ಷಿಸಲಾಗುತ್ತಿತ್ತು. ಆದರೆ ಈ ಬಾರಿಯ ಬಜೆಟ್‌ನಲ್ಲಿಯೂ ಈ ಬಗ್ಗೆ ಪ್ರಸ್ತಾಪವಾಗದಿರುವ ಬಗ್ಗೆ ಅಸಮಧಾನ ಹೊರಹಾಕುತ್ತಿದ್ದಾರೆ. ನೌಕರರ ಸಂಘದ ಪ್ರತಿನಿಧಿಗಳು ಎರಡು-ಮೂರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನಕ್ಕೆ ಬಾರದಾಗಿದೆ. ನೌಕರರ ಬೇಡಿಕೆ ಕುರಿತು ಸರ್ಕಾರ ಗಮನ ನೀಡಿಲ್ಲ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ “2006ರಿಂದ ನೇಮಕವಾದ, ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರ್ಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ ತರಲು ಸಹಾನುಭೂತಿಯ ನಿರ್ಧಾರ ತೆಗೆದುಕೊಳ್ಳಲಾಗುವುದುʼʼ ಎಂದು ಭರವಸೆ ನೀಡಿತ್ತು. ಆದರೂ ಈ ಬಜೆಟ್‌ನಲ್ಲಿ ಓಪಿಎಸ್ ಜಾರಿಯ ಬಗ್ಗೆ ಪ್ರಸ್ತಾಪಿಸಲಾಗಿಲ್ಲ.
ʻʻರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗೆ ಒತ್ತು ನೀಡುತ್ತಿರುವುದರಿಂದ ಈ ಬಾರಿ ಓಪಿಎಸ್ ಜಾರಿಗೆ ಮುಂದಾಗಿಲ್ಲ. ಅಲ್ಲದೆ ಇದು ಪೂರ್ಣಾವಧಿಯ ಬಜೆಟ್ ಕೂಡ ಅಲ್ಲ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಓಪಿಎಸ್ ಜಾರಿಯ ಕುರಿತು ಯಾವುದೇ ತೀರ್ಮಾನ ಪ್ರಕಟಿಸಲಾಗಿಲ್ಲ. ಈಗಾಗಲೇ ಓಪಿಎಸ್ ಜಾರಿಯ ಕುರಿತು ಸರ್ಕಾರ ಬದ್ಧತೆ ವ್ಯಕ್ತಪಡಿಸಿದ್ದು, ಈ ಕುರಿತು ಎನ್‌ಪಿಎಸ್ ನೌಕರರಿಗೂ ಮಾಹಿತಿ ನೀಡಲಾಗಿದೆʼʼ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು (ಓಪಿಎಸ್) ಎಂದಿನಿಂದ ಜಾರಿಗೆ ತರಲಾಗುತ್ತದೆ ಎಂದು ಕೇಳಲಾಗಿದ್ದ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಾಗಲೇ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸಲು ಸರ್ಕಾರ ಕಳೆದ ಮಾರ್ಚ್‌ನಲ್ಲಿ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಿದೆ ಎಂದು ನೆನಪಿಸಿದ್ದರು. ಅಂದರೆ ಸದ್ಯ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎಂಬ ಸೂಚನೆಯನ್ನು ನೀಡಿದ್ದರು.
ಇದನ್ನೂ ಓದಿ: Karnataka Budget 2023: ನೈತಿಕ ಪೊಲೀಸ್‌ಗಿರಿ ತಡೆಯಲು ಕಠಿಣ ಕ್ರಮ, ಪೊಲೀಸರಿಗೆ ಸುಸಜ್ಜಿತ ವಸತಿಗೆ ಆದ್ಯತೆ