ಬೆಂಗಳೂರು: ರಾಜ್ಯದಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷಗಳು ಈಚೆಗೆ ಹೆಚ್ಚಾಗುತ್ತಲೇ ಇವೆ. ನಾಡಿಗೆ ವನ್ಯಜೀವಿಗಳ ದಾಳಿ ಪ್ರಕರಣಗಳು ಆಗಾಗ ಕಂಡುಬರುವುದಲ್ಲದೆ, ಸಾಕಷ್ಟು ಸಾವು-ನೋವುಗಳೂ ವರದಿಯಾಗಿವೆ. ಈ ನಡುವೆ ಇವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಹಾಗೂ ಹಾವಳಿ ತಡೆ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಕೂಗುಗಳು ಕೇಳಿ ಬಂದಿದ್ದವು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯ ಬಜೆಟ್‌ನಲ್ಲಿ (Karnataka Budget 2023) ಇತ್ತಲೂ ದೃಷ್ಟಿ ನೆಟ್ಟಿದ್ದು, ಕಂದಕ ನಿರ್ಮಾಣ, ಸೌರ ಬೇಲಿ ಅಳವಡಿಕೆ, ಸೆರೆಸಿಕ್ಕ ವನ್ಯಜೀವಿಗಳನ್ನು ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುವ ವ್ಯವಸ್ಥೆ, ಕಾರ್ಯಪಡೆಗಳಿಗೆ ಸಿಬ್ಬಂದಿ ನೇಮಕ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇನ್ನು ವನ್ಯಪ್ರಾಣಿಗಳ ದಾಳಿಯಿಂದ ಮಾನವ ಪ್ರಾಣ ಹಾನಿಯಾದರೆ ೧೫ ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಣೆ ಮಾಡಲಾಗಿದೆ.
ಮಾನವ-ವನ್ಯಪ್ರಾಣಿ ಸಂಘರ್ಷದಿಂದ ಮಾನವ ಪ್ರಾಣಕ್ಕೆ ಹಾನಿಯಾದರೆ ಇದುವರೆಗೆ 7.50 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುತ್ತಿತ್ತು. ಈಗ ಸಿಎಂ ಬೊಮ್ಮಾಯಿ ಅವರು, ಈ ಬಾರಿಯ ಬಜೆಟ್‌ನಲ್ಲಿ 15 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಬೆಳೆಹಾನಿ ಪ್ರಕರಣಗಳಲ್ಲಿ ನೀಡುತ್ತಿರುವ ಪರಿಹಾರ ಧನವನ್ನೂ ದ್ವಿಗುಣಗೊಳಿಸಲಾಗಿದೆ ಎಂದು ಹೇಳಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಮಾನವ-ಪ್ರಾಣಿ ಸಂಘರ್ಷವನ್ನು ನಿಯಂತ್ರಿಸಲು, ಸಂಘರ್ಷ ಕ್ಷೇತ್ರದಿಂದ ಸೆರೆಹಿಡಿಯಲ್ಪಟ್ಟ ವನ್ಯ ಪ್ರಾಣಿಗಳನ್ನು, ಅವುಗಳ ನೈಸರ್ಗಿಕ ಆವಾಸ ಸ್ಥಾನ ಪ್ರದೇಶಗಳನ್ನು ಗುರುತಿಸಿ ಸ್ಥಳಾಂತರ ಮಾಡಲು ಭದ್ರಾ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಕಾಡಾನೆ ಹಾವಳಿ ತಡೆಗಟ್ಟಲು ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಕಾರ್ಯಪಡೆಯನ್ನು ರಚಿಸಲಾಗಿದೆ. ಇದೇ ಮಾದರಿಯಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಚಿರತೆ ದಾಳಿ ತಡೆಯಲು ಸಹ ಕಾರ್ಯಪಡೆಯನ್ನು ರಚಿಸಲಾಗಿದೆ. ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚುವರಿಯಾಗಿ 199 ಸಿಬ್ಬಂದಿಗಳನ್ನು ನೇಮಿಸಲು ಅನುಮೋದನೆ ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: Karnataka Budget 2023 : ಡಿ.ಕೆ ಶಿವಕುಮಾರ್ ಕಿವೀಲಿದ್ದ ಚೆಂಡು ಹೂವು ಕಿತ್ತಿದ್ದೇಕೆ ಯಡಿಯೂರಪ್ಪ? ಅಲ್ಲಿ ಏನಾಯಿತು?
387, ಮಾನವ-ಆನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ 72 ಕಿ.ಮೀ., ರೈಲ್ವೆ ಬ್ಯಾರಿಕೇಡ್, 36 ಕಿ.ಮೀ. ಆನೆ ನಿರೋಧಕ ಕಂದಕ, 186 ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. 2022-23ನೇ ಸಾಲಿನಲ್ಲಿ ಈ ಕಾಮಗಾರಿಗಳಿಗೆ 150 ಕೋಟಿ ರೂ. ಗಳ ಅನುದಾನ ಒದಗಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.