ಬೆಂಗಳೂರು: ಹಿಂದೆಲ್ಲ ಮುಸ್ಲಿಂ ಸಮುದಾಯಕ್ಕೆ ಶಾದಿ ಭಾಗ್ಯದಂಥ ವಿವಾದಿತ ಯೋಜನೆ ನೀಡಿ ಚರ್ಚೆಗೆ ಗ್ರಾಸವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಈ ಬಾರಿ ಹೊಸ ಯೋಚನೆಗಳ ಮೂಲಕ ಗಮನ ಸೆಳೆದಿದ್ದಾರೆ. ಮುಸ್ಲಿಂ ಸಮುದಾಯದ ಮಕ್ಕಳು ಮತ್ತು ಯುವಜನರ ಶಿಕ್ಷಣ ಹಾಗೂ ಉದ್ಯೋಗಕ್ಕೆ (Education and Employment) ಪೂರಕವಾಗಿ 11 ಯೋಜನೆಗಳನ್ನು ತಾವು ಮಂಡಿಸಿದ 2023-24ನೇ ಸಾಲಿನ ಬಜೆಟ್‌ನಲ್ಲಿ (Karnataka Budget 2023) ಪ್ರಕಟಿಸಿದ್ದಾರೆ. ಇದರಲ್ಲಿ ಮುಸ್ಲಿಂ ಯುವಕರಿಗೆ ಕೌಶಲಗಳನ್ನು ಕಲಿಸುವುದು, ಅವರನ್ನು ನೀಟ್, ಸಿಇಟಿ ಮಾತ್ರವಲ್ಲ ಕೆಎಎಸ್/ಐಎಎಸ್ ಪರೀಕ್ಷೆಗಳಿಗೆ ಸಿದ್ಧಗೊಳಿಸುವ, ವಿದೇಶದಲ್ಲಿ ಅಧ್ಯಯನ ನಡೆಸಲು ಸಹಾಯ ಮಾಡುವ ಕಾರ್ಯಕ್ರಮಗಳೂ ಇವೆ.
ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಈ ಸಮುದಾಯಗಳ ಜನರಿಗೆ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
1.ಕೇಂದ್ರ ಸ್ಥಗಿತಗೊಳಿಸಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮರು ಆರಂಭ
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು (1 ರಿಂದ 8ನೇ ತರಗತಿಯವರೆಗೆ) ಕೇಂದ್ರ ಸರ್ಕಾರವು ಸ್ಥಗಿತಗೊಳಿಸಿರುತ್ತದೆ. ಇದರಿಂದ ಅಲ್ಪಸಂಖ್ಯಾತ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದನ್ನು ಮನಗಂಡು ನಮ್ಮ ಸರ್ಕಾರವು ಈ ಯೋಜನೆಯನ್ನು ಮುಂದುವರಿಸಲು 60 ಕೋಟಿ ರೂ. ಅನುದಾನವನ್ನು ಒದಗಿಸಲಿದೆ.
2. ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಗಳ ಉನ್ನತೀಕರಣ
ರಾಜ್ಯದ 62 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು 6ನೇ ತರಗತಿಯಿಂದ 12ನೇ ತರಗತಿಯವರೆಗೆ Integrated ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಇದರಿಂದ 13,000 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 30 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಇದಲ್ಲದೇ, 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿಯನ್ನು ದ್ವಿಗುಣಗೊಳಿಸುವ ಮೂಲಕ ಹೆಚ್ಚುವರಿಯಾಗಿ 12,500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು 23 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 10 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.
3. ಮೌಲಾನಾ ಆಜಾದ್ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮ
ರಾಜ್ಯದಲ್ಲಿ 200 ಮೌಲಾನಾ ಆಜಾದ್ ಶಾಲೆಗಳಿದ್ದು, ಈ ಶಾಲೆಗಳಲ್ಲಿ ಶೇ.75 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 22 ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿರುತ್ತದೆ. ಮೌಲಾನಾ ಆಜಾದ್ ಶಾಲೆಗಳ ಉತ್ತಮ ಕಾರ್ಯನಿರ್ವಹಣೆಯನ್ನು ಗುರುತಿಸಿ, ಇವುಗಳ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ಸ್ವಂತ ಕಟ್ಟಡ ಇಲ್ಲದೇ ಇರುವ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು.
4.ಎಂಜಿನಿಯರಿಂಗ್, ವೈದ್ಯ ಸಹಿತ 28 ಕೋರ್ಸ್ ಅಧ್ಯಯನಕ್ಕೆ 2% ಬಡ್ಡಿ ಸಾಲ
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಅರಿವು ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ ಸಿ.ಇ.ಟಿ ಮೂಲಕ ಪ್ರವೇಶ ಪಡೆದ ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ 28 ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಲು ಶೇ.2 ರ ಬಡ್ಡಿ ದರದಲ್ಲಿ ವಾರ್ಷಿಕ ಒಂದು ಲಕ್ಷ ರೂ.ಗಳವರೆಗೆ ಸಾಲ ಮಂಜೂರು ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ 75 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು.
5. ಕನ್ನಡ, ಇಂಗ್ಲಿಷ್ ಭಾಷಾ ಜ್ಞಾನ ಹೆಚ್ಚಿಸಲು ಭಾಷಾ ಪ್ರಯೋಗಾಲಯ
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಕನ್ನಡ ಮತ್ತು ಆಂಗ್ಲ ಭಾಷಾ ಜ್ಞಾನವನ್ನು ಉತ್ತಮಪಡಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಭಾಷಾ ಪ್ರಯೋಗಾಲಯಗಳನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
6. ಐದು ಜಿಲ್ಲೆಗಳಲ್ಲಿ ಕೌಶಲ ತರಬೇತಿ ಕೇಂದ್ರ ಸ್ಥಾಪನೆ
ರಾಮನಗರ, ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಯುವಜನರಿಗೆ ಕೌಶಲ್ಯ ತರಬೇತಿಯನ್ನು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
7. ಪ್ರಥಮ ಪಿಯುಸಿಯಿಂದಲೇ NEET, JEE, CET ಪರೀಕ್ಷೆಗೆ ತಯಾರಿ
ಅಲ್ಪಸಂಖ್ಯಾತರ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದಿಂದಲೇ NEET, JEE, CET ಹಾಗೂ ಇತರೆ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ ಎರಡು ವರ್ಷಗಳ ತರಬೇತಿಯನ್ನು ನೀಡಲು ಎಂಟು ಕೋಟಿ ರೂ.ಗಳ ಅನುದಾನ ನೀಡಲಾಗುವುದು.
8. ಐಎಎಸ್/ಕೆಎಎಸ್ ಪರೀಕ್ಷೆಗೆ 10 ತಿಂಗಳ ಉಚಿತ ತರಬೇತಿ
ಬೆಂಗಳೂರು ನಗರದಲ್ಲಿ ನಿರ್ಮಿಸಿರುವ ಹಜ಼್ ಭವನದಲ್ಲಿ ಅಲ್ಪಸಂಖ್ಯಾತರ ಯುವ ಜನರಿಗೆ 10 ತಿಂಗಳ ವಸತಿಸಹಿತ IAS/KAS ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಪ್ರಾರಂಭಿಸಲಾಗುವುದು.
9. ಜಗತ್ತಿನ ಪ್ರತಿಷ್ಠಿತ ವಿವಿಗಳಲ್ಲಿ ಉನ್ನತ ವ್ಯಾಸಂಗಕ್ಕೆ 20 ಲಕ್ಷ ರೂ. ಸಾಲ
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶ್ವದಲ್ಲಿ 250 ರೊಳಗೆ University Ranking ಹೊಂದಿರುವ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಶೂನ್ಯ ಬಡ್ಡಿ ದರದಲ್ಲಿ ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ. ಸಾಲ ಸೌಲಭ್ಯ ಒದಗಿಸಲಾಗುವುದು.
10. ಸ್ವಯಂ ಉದ್ಯೋಗಕ್ಕಾಗಿ ಪಡೆಯುವ ಸಾಲಕ್ಕೆ ಶೇ. 20 ಸಬ್ಸಿಡಿ
ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 10,000 ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಅವಕಾಶವನ್ನು ಕಲ್ಪಿಸುವ ಸಲುವಾಗಿ ಇವರುಗಳಿಗೆ ಬ್ಯಾಂಕ್‌ಗಳಿಂದ ಪಡೆಯುವ ಸಾಲ ಮೊತ್ತದ ಶೇ. 20 ರಷ್ಟು ಅಥವಾ ಗರಿಷ್ಠ ಒಂದು ಲಕ್ಷ ರೂ.ವರೆಗೆ ಸಹಾಯಧನವನ್ನು ನೀಡಲಾಗುವುದು.
11. ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ಖರೀದಿಗೆ 50% ಸಬ್ಸಿಡಿ
ʻಸ್ವಾವಲಂಬಿ ಸಾರಥಿʼ ಯೋಜನೆಯಡಿ, ಅಲ್ಪಸಂಖ್ಯಾತ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ. 50ರಷ್ಟು, ಗರಿಷ್ಠ 3 ಲಕ್ಷ ರೂ.ಗಳ ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸಲಾಗುವುದು.
ಸಿದ್ದರಾಮಯ್ಯ ಬಜೆಟ್‌ನ ಸಮಗ್ರ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಸಿದ್ದರಾಮಯ್ಯ ಪ್ರಕಟಿಸಿದ ಇತರ ಯೋಜನೆಗಳು
- ಸರ್ಕಾರದ ಹಿಂದಿನ ಅವಧಿಯಲ್ಲಿ ರಾಜ್ಯಾದ್ಯಂತ ನೂರಾರು ಶಾದಿ ಮಹಲ್ ಮತ್ತು ಸಮುದಾಯ ಭವನಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಈ ಭವನಗಳನ್ನು ಪೂರ್ಣಗೊಳಿಸಿರುವುದಿಲ್ಲ. ಅಂತಹ 126 ಶಾದಿ ಮಹಲ್ ಮತ್ತು ಸಮುದಾಯ ಭವನಗಳ ನಿರ್ಮಾಣ ಕಾರ್ಯಗಳನ್ನು 54 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು.
- ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ಕರ್ನಾಟಕ ಇನಾಮ್ ರದ್ದಿಯಾತಿ ಅಧಿನಿಯಮದನ್ವಯ ನೀಡಲಾಗುತ್ತಿರುವ ತಸ್ತಿಕ್ ಮೊತ್ತವನ್ನು 48,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಿಸಲಾಗುವುದು. ಇದರಿಂದ ತಸ್ತಿಕ್ ಪಡೆಯುತ್ತಿರುವ 868 ಸಂಸ್ಥೆಗಳಿಗೆ ಅನುಕೂಲವಾಗಲಿದೆ.
- ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಮತ್ತು ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಗಳಡಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲು ಪ್ರಸಕ್ತ ಸಾಲಿನಲ್ಲಿ 36೦ ಕೋಟಿ ರೂ.ಗಳನ್ನು ಮೀಸಲಿಡಲಾಗುವುದು.
- ಜೈನರ ಪ್ರಮುಖ ಪುಣ್ಯಕ್ಷೇತ್ರಗಳ ಅಭಿವೃದ್ಧಿಗಾಗಿ 25 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
- ನಾಡಿನ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ. ಅನುದಾನ ನೀಡಲಾಗುವುದು.
- ರಾಜ್ಯದಲ್ಲಿ ೪೦,೦೦೦ ಕ್ಕಿಂತಲೂ ಅಧಿಕ ವಕ್ಛ್ ಆಸ್ತಿಗಳಿದ್ದು, ಇವುಗಳ ಸಂರಕ್ಷಣೆ ಮತ್ತು ಅಭಿವೃದ್ದಿಗಾಗಿ ೨೦೨೩-೨೪ನೇ ಸಾಲಿನಲ್ಲಿ ೫೦ ಕೋಟಿ ರೂ. ಒದಗಿಸಲಾಗುವುದು.
- ಹಲಸೂರಿನಲ್ಲಿರುವ ಗುರುದ್ವಾರದ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ನೀಡಲಾಗಿದೆ. ಅದೇ ಮಾದರಿಯಲ್ಲಿ ಮೈಸೂರು, ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿರುವ ಗುರುದ್ವಾರಗಳ ಅಭಿವೃದ್ಧಿಗೆ ಐದು ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಗುರುದ್ವಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಿಗಳಿಗೆ ಅವರ ದೈನಂದಿನ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಮಾಸಿಕ ಗೌರವ ಧನ ನೀಡಲಾಗುವುದು.
ಇದನ್ನೂ ಓದಿ: Karnataka Budget 2023 : ನೀವು Miss ಮಾಡಲೇಬಾರದ ಸಿದ್ದರಾಮಯ್ಯ ಬಜೆಟ್‌ನ TOP 60 ಮುಖ್ಯಾಂಶಗಳು