ದಾವಣಗೆರೆ: ಜುಲೈ 3 ರಿಂದ ವಿಧಾನಸಭಾ ಅಧಿವೇಶನ ಆರಂಭ ಆಗಲಿದ್ದು, ರಾಜ್ಯಪಾಲರ ದಿಕ್ಸೂಚಿ ಭಾಷಣದ ಬಳಿಕ ಅಧಿವೇಶನದ ಚರ್ಚೆ ನಡೆಯಲಿದೆ. ಜುಲೈ 7 ರಂದು ನೂತನ ಬಜೆಟ್ (Karnataka Budget 2023) ಅನ್ನು ಮಂಡನೆ ಮಾಡಲಾಗುವುದು. ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನೂ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಜೆಟ್ ಗಾತ್ರ ಎಷ್ಟು ಇದೆ? ಎಷ್ಟು ಇರಬೇಕು ಎನ್ನುವುದನ್ನು ಚರ್ಚೆ ಮಾಡುತ್ತೇವೆ. ಈಗಿರುವ ಬಜೆಟ್ ಬಿಜೆಪಿಯವರ ಚುನಾವಣೆ ಬಜೆಟ್ ಆಗಿದೆ. ಅದು 3,90,788 ಗಾತ್ರದ ಬಜೆಟ್ ಆಗಿದ್ದು, ನಾವು ಹೊಸ ಬಜೆಟ್ ಅನ್ನು ಮಂಡನೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: NIRF Ranking 2023 : ರಾಜ್ಯದ ಬೆಸ್ಟ್ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಪ್ರಕಟ; ಇವು ಟಾಪ್ 10 ಕಾಲೇಜುಗಳು!
ಐದೂ ಗ್ಯಾರಂಟಿಗಳಿಗೆ ಅನುದಾನ ಹೊಂದಾಣಿಕೆ
ಈಗ ಸಿದ್ದರಾಮಯ್ಯ ಅವರು ಮಂಡಿಸಲು ಹೊರಟಿರುವ ಬಜೆಟ್‌ನಲ್ಲಿ ಅವರಿಗೆ ಹಲವಾರು ಸವಾಲುಗಳು ಇವೆ. ಇದು ಅವರ 14ನೇ ಬಜೆಟ್ ಆಗಿದ್ದು, ಹಣ ಹೊಂದಾಣಿಕೆಯಲ್ಲಿ ಭಾರಿ ಅನುಭವವನ್ನು ಹೊಂದಿದ್ದಾರೆ. ಆದರೆ, ಈ ಬಾರಿ ಐದೂ ಗ್ಯಾರಂಟಿಗಳ ಜಾರಿಗೇ ಅಂದಾಜು 5೦ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಹೊಂದಾಣಿಕೆ ಮಾಡಬೇಕು. ಇದಲ್ಲದೆ, ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಲಾದ ಇನ್ನಷ್ಟು ಮಹತ್ವದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಹೊಣೆ ಹಾಗೂ ಸವಾಲು ಇವೆ.
ಬೊಮ್ಮಾಯಿ ಸರ್ಕಾರದ ಯೋಜನೆಗಳು ಕಥೆ ಏನು?
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ಕೊನೇ ಬಜೆಟ್‌ನಲ್ಲಿ ಹಲವಾರು ಯೋಜನೆಗಳ ಬಗ್ಗೆ ಉಲ್ಲೇಖಗಳಿವೆ.
ರೈತರಿಗೆ 5 ಲಕ್ಷ ರೂ. ಬಡ್ಡಿ ರಹಿತ ಸಾಲ, 30 ಲಕ್ಷಕ್ಕೂ ಹೆಚ್ಚು ರೈತರಿಗೆ 25 ಸಾವಿರ ಕೋಟಿ ರೂ. ಸಾಲ, ಬೆಂಗಳೂರಿನ ಅಭಿವೃದ್ಧಿಗೆ 10 ಸಾವಿರ ಕೋಟಿ. ರೂ., ಚರ್ಮಗಂಟು ರೋಗ ತಡೆಗಟ್ಟಲು ರಾಜ್ಯಾದ್ಯಂತ 1 ಕೋಟಿಗೂ ಅಧಿಕ ಜಾನುವಾರುಗಳಿಗೆ ಲಸಿಕೆ, ಚರ್ಮಗಂಟು ರೋಗದಿಂದ ಬಾಧಿತವಾದ ರಾಸುಗಳ ಮಾಲೀಕರಿಗೆ 55 ಕೋಟಿ ರೂ. ಪರಿಹಾರ, ರಾಜ್ಯದ 9 ಲಕ್ಷ ಹಾಲು ಉತ್ಪಾದಕರಿಗೆ 1,067 ಕೋಟಿ ರೂ. ಪ್ರೋತ್ಸಾಹಧನ, ರಾಜ್ಯದಲ್ಲಿ ‘ಯಶಸ್ವಿನಿ ಯೋಜನೆ’ ಮರು ಜಾರಿ. 32 ಲಕ್ಷ ರೈತರ ನೋಂದಣಿ, ರಾಜ್ಯಾದ್ಯಂತ ವಿವಿಧ ನೀರಾವರಿ ಯೋಜನೆಗಳ ಜಾರಿಗೆ ಒಟ್ಟು 25 ಸಾವಿರ ಕೋಟಿ ರೂ. ಅನುದಾನ, ಮಹಿಳಾ ಉದ್ದಿಮೆದಾರರಿಗೆ 5 ಕೋಟಿ ವರೆಗೆ ಶೇ. 4ರ ಬಡ್ಡಿ ದರದಲ್ಲಿ ಸಾಲ, ರಾಜ್ಯದ 9 ಸ್ಥಳಗಳಲ್ಲಿ ನೂತನವಾಗಿ ಕೈಗಾರಿಕಾ ವಸಾಹತುಗಳ ಸ್ಥಾಪನೆ ಸೇರಿದಂತೆ ಇನ್ನಿತರ ಯೋಜನೆಗಳನ್ನು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಈಗ ಇವುಗಳನ್ನು ಯಾವ ಯೋಜನೆಗಳನ್ನು ಉಳಿಸಿಕೊಳ್ಳುತ್ತಾರೆ ಎಂಬುದು ಸಹ ಸದ್ಯದ ಕುತೂಹಲವಾಗಿದೆ.
ಘೋಷಣೆ ಆಗಲಿದೆಯೇ ಹೊಸ ಯೋಜನೆ?
ಈಗ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡುವ ಸವಾಲನ್ನು ಹೊಂದಿದ್ದಾರೆ. ಇದಕ್ಕೇ ಸುಮಾರು 50 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿಗೆ ಅನುದಾನದ ಹೊಂದಾಣಿಕೆ ಮಾಡಬೇಕಿದೆ. ಇನ್ನು ಉಳಿದ ಹಣದಲ್ಲಿ ಇತರೆ ಖರ್ಚುಗಳನ್ನು ನಿಭಾಯಿಸುವುದಲ್ಲದೆ, ಆಯಾ ಇಲಾಖೆಗಳಿಗೆ ಕೊಡುಗೆಗಳನ್ನು ಕೊಡಬೇಕು. ಬಳಿಕ ಹೊಸ ಯೋಜನೆಯನ್ನು ಘೋಷಣೆ ಮಾಡಬೇಕು. ಇದಕ್ಕೆ ಹಣ ಹೊಂದಾಣಿಕೆಗೆ ಎಷ್ಟು ಸಾಲ ಮಾಡಲಿದ್ದಾರೆ ಎಂಬುದೂ ಪ್ರಶ್ನೆಯಾಗಿದೆ.
ಇದನ್ನೂ ಓದಿ: Laxmi Hebbalkar: ಈಗೇನಿದ್ರೂ ಲಕ್ಷ್ಮಿ ಹವಾ! ನೋ ಸಿಗ್ನಲ್, ಓನ್ಲಿ ಸೈರನ್!
ಮತ್ತೆ ಶುರುವಾಗಲಿದೆಯೇ ಇಂದಿರಾ ಕ್ಯಾಂಟೀನ್?
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಅನ್ನು ಜಾರಿಗೆ ತಂದಿದ್ದರು. ಇದರ ಮೂಲಕ ಬಡವರು ಹಸಿವು ನೀಗಿಸಿಕೊಳ್ಳುತ್ತಿದ್ದರು. ಆದರೆ, ಬಿಜೆಪಿ ಸರ್ಕಾರ ಬಂದಾಗ ಇದಕ್ಕೆ ಸೂಕ್ತ ಅನುದಾನ ಸಿಗದೆ, ಕೆಲವು ಕಡೆ ಮುಚ್ಚಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ವೇಳೆ ಇಂದಿರಾ ಕ್ಯಾಂಟೀನ್ ಅನ್ನು ಪುನಃ ಮರುಸ್ಥಾಪಿಸಲು ಅನುದಾನವನ್ನು ನಿಗದಿ ಮಾಡುವ ಸಂಭವ ಹೆಚ್ಚಿದೆ.