ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ (Karnataka Budget 2023) ಘೋಷಿಸಿದ ಪ್ರಮುಖಾಂಶಗಳು (Budget Highlights) ಇವು.
- ಸಿದ್ದರಾಮಯ್ಯ ಅವರು ಮಂಡಿಸಿದ 2023-24ನೇ ಸಾಲಿನ ಬಜೆಟ್‌ನ ಒಟ್ಟು ಗಾತ್ರ 3,27,747 ಕೋಟಿ ರೂ. ಇದು 12,522 ಕೋಟಿ ರೂ. ಕೊರತೆಯ ಬಜೆಟ್.
- ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ವರ್ಷಕ್ಕೆ 4000 ಕೋಟಿ ರೂ. ವೆಚ್ಚ ನಿಗದಿ (ದಿನಕ್ಕೆ 50ರಿಂದ 60 ಲಕ್ಷ ಮಹಿಳಾ ಪ್ರಯಾಣಿಕರ ಅಂದಾಜು)
- ಗೃಹ ಜ್ಯೋತಿ ಯೋಜನೆಯಡಿ 2 ಕೋಟಿಗೂ ಅಧಿಕ ಗ್ರಾಹಕರಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲು ವರ್ಷಕ್ಕೆ 13,910 ಕೋಟಿ ರೂ. ನಿಗದಿ
- ಗೃಹ ಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ನೆರವು ನೇರ ವರ್ಗಾವಣೆಗೆ 30,000 ಕೋಟಿ ರೂ. ವೆಚ್ಚ. ನಿಗದಿ
- ಅನ್ನ ಭಾಗ್ಯ: ಎಲ್ಲ ಅರ್ಹ ಫಲಾನುಭವಿಗಳಿಗೆ 5 ಕೆ.ಜಿ. ಹೆಚ್ಚುವರಿ ಆಹಾರಧಾನ್ಯ ವಿತರಣೆಗೆ (ಆಹಾರ ಧಾನ್ಯ ಲಭ್ಯವಾಗುವವರೆಗೆ ಪ್ರತಿ ಫಲಾನುಭವಿಗೆ 170 ರೂ.ನಂತೆ ಡಿಬಿಟಿ ಮೂಲಕ ನಗದು ವರ್ಗಾವಣೆಗೆ) ವಾರ್ಷಿಕ 10,000 ಕೋಟಿ ರೂ. ವೆಚ್ಚ.
- ಯುವ ನಿಧಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ. ಹಾಗೂ ಡಿಪ್ಲೊಮಾ ಪಡೆದವರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ. ನೀಡಲು ನಿರ್ಧಾರ (ಹಣ ನಿಗದಿ ಮಾಡಿಲ್ಲ)
- ಕೃಷಿ ಭಾಗ್ಯ ಯೋಜನೆ 100 ಕೋಟಿ ರೂ. ವೆಚ್ಚದಲ್ಲಿ ಮರುಜಾರಿ. `ನವೋದ್ಯಮ’ ಹೊಸ ಯೋಜನೆಯಡಿ ಕೃಷಿ ಉದ್ಯಮಗಳಿಗೆ ನಾವೀನ್ಯತೆಯನ್ನು ಪ್ರೋತ್ಸಾಹಿಸಲು 10 ಕೋಟಿ ರೂ. ನೆರವು.
- ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ತಲಾ 20 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ಸಹಾಯಧನ ಸೌಲಭ್ಯ.
- GI Tag ಹೊಂದಿರುವ ಕಾಫಿ, ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಮಾಡಲು ಕ್ರಮ.
- ಶೇ. 3ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿ 10 ಲಕ್ಷ ರೂ. ಗಳಿಂದ 15 ಲಕ್ಷ ರೂ. ಗಳಿಗೆ ಹೆಚ್ಚಳ. 30 ಲಕ್ಷಕ್ಕೂ ಹೆಚ್ಚು ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಗುರಿ.
ಕೃಷಿ ವಲಯಕ್ಕೆ ಸಿದ್ದರಾಮಯ್ಯ ನೀಡಿದ್ದೇನು?
- ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ರೈತರಿಗೆ ಸರಕು ಸಾಗಾಣಿಕೆಗೆ ಪಿಕ್‌ಅಪ್ ವ್ಯಾನ್ ಖರೀದಿಗೆ ಶೇ.4 ರ ಬಡ್ಡಿ ದರದಲ್ಲಿ ಏಳು ಲಕ್ಷ ರೂ. ವರೆಗಿನ ಸಾಲ ಸೌಲಭ್ಯ.
- ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಕ್ರಮ
- ಪ್ರಗತಿಯಲ್ಲಿರುವ 940 ಕೋಟಿ ರೂ. ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ.
- ಎತ್ತಿನಹೊಳೆ ಯೋಜನೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು, ಮೇಕೆದಾಟು ಯೋಜನೆಗೆ ಅರಣ್ಯ ಭೂಮಿ ಸ್ವಾಧೀನ, ಭೂಸ್ವಾಧೀನಕ್ಕೆ ಕ್ರಮ.
- ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಬಿಡುಗಡೆಗೆ ಹಾಗೂ ಕಳಸಾ ಮತ್ತು ಬಂಡೂರಾ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ ಅಗತ್ಯ ತೀರುವಳಿ ಪಡೆಯಲು ಕ್ರಮ.
- ಶಿಕ್ಷಣ ಕೆ.ಸಿ. ವ್ಯಾಲಿ ಮತ್ತು ಹೆಚ್.ಎನ್. ವ್ಯಾಲಿ ಯೋಜನೆಗಳ ಎರಡನೇ ಹಂತದಲ್ಲಿ 529 ಕೋಟಿ ರೂ. ವೆಚ್ಚದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 296 ಕೆರೆ ತುಂಬಿಸುವ ಯೋಜನೆ ಅನುಷ್ಠಾನ.
- 1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ನೀಡುವ ಪೂರಕ ಪೌಷ್ಟಿಕ ಆಹಾರ; 60 ಲಕ್ಷ ಮಕ್ಕಳಿಗೆ ಅನುಕೂಲ; 280 ಕೋಟಿ ರೂ. ಅನುದಾನ.
- ಕಲಿಕೆಯಲ್ಲಿ ಹಿಂದುಳಿದ 33 ಲಕ್ಷ ಶಾಲಾ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೆ 80 ಕೋಟಿ ರೂ. ವೆಚ್ಚ ಒಂದೂವರೆ ಲಕ್ಷ ವಿದ್ಯಾರ್ಥಿಗಳನ್ನು ಪ್ರೌಢಹಂತದ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ‘ಮರುಸಿಂಚನ’ ತರಬೇತಿ.
- ಸ್ಥಳೀಯವಾದ ಸಾಂಸ್ಕೃತಿಕ ಮತ್ತು ವಾಸ್ತವಿಕತೆಯನ್ನು ಆಧರಿಸಿದ ಹೊಸ ಶಿಕ್ಷಣ ನೀತಿ ರೂಪಿಸಲು ಕ್ರಮ. ಉನ್ನತ ಶಿಕ್ಷಣ ಇಲಾಖೆಯಡಿ ನಿರ್ಮಿಸಿರುವ 13,169 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿರುವ 224 ವಸತಿ ನಿಲಯಗಳನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವರ್ಗಾವಣೆ.
- ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಶೇ. 40 ಸೀಟುಗಳಿಗೆ ಪಿಎಚ್.ಡಿ. ಅಧ್ಯಯನಕ್ಕೆ ಕೌನ್ಸೆಲಿಂಗ್ ಮೂಲಕ ಪ್ರವೇಶ.
- ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ, ಮನೆಬಾಗಿಲಿಗೆ ಔಷಧ ವಿತರಣೆ-ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಜಾರಿ.
- ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿ.ಟಿ.ಸ್ಕ್ಯಾನಿಂಗ್ ಮತ್ತು ಎಂ.ಆರ್.ಐ. ಸ್ಕ್ಯಾನಿಂಗ್ ಸೌಲಭ್ಯ ವಿಸ್ತರಣೆಗೆ ಕ್ರಮ.
- ಪುನೀತ್ ರಾಜ್‌ಕುಮಾರ್ ರವರ ಸ್ಮರಣಾರ್ಥ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲು ಕ್ರಮ.
- ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ. ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
- ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಮಹಿಳಾ ಉದ್ಯಮಿಗಳಿಗೆ ಶೇ.4 ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿ ಐದು ಕೋಟಿ ರೂ.ಗಳಿಗೆ ಹೆಚ್ಚಳ.
- SCSP/TSP ಅಧಿನಿಯಮ, 2013ರಡಿ ಹಂಚಿಕೆಯಾಗುವ ಅನುದಾನ ಆ ಸಮುದಾಯಗಳಿಗೆ ಬಳಕೆಯಾಗುವುದನ್ನು ಖಾತರಿ ಪಡಿಸಲು ಕಾಯ್ದೆಯ ಸೆಕ್ಷನ್ 7(ಡಿ) ಅನ್ನು ಕೈಬಿಡಲು ಕ್ರಮ.
- ಹಿಂದುಳಿದ ವರ್ಗದ ವಿದ್ಯಾರ್ಥಿಗಳ ‘ಅರಿವು’ ಸಾಲ ಯೋಜನೆ, ವಿದ್ಯಾಸಿರಿ, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಯೋಜನೆ, ವಿದೇಶಿ ವ್ಯಾಸಂಗಕ್ಕೆ ಶೂನ್ಯ ಬಡ್ಡಿದರದಲ್ಲಿ 20 ಲಕ್ಷ ರೂ. ವರೆಗೆ ಸಾಲ ಯೋಜನೆ ಹಾಗೂ ಶುಚಿ ಸಂಭ್ರಮ ಕಿಟ್ ವಿತರಣೆ ಯೋಜನೆಗಳ ಪುನರಾರಂಭಕ್ಕೆ ಕ್ರಮ.
- ಅಸಂಘಟಿತ ವಲಯಗಳಲ್ಲಿ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ/ಅರೆಕಾಲಿಕ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 4 ಲಕ್ಷ ರೂ. ಗಳ ಜೀವವಿಮೆ ಹಾಗೂ ಅಪಘಾತ ವಿಮಾ ಸೌಲಭ್ಯ.
- ರಾಜ್ಯದ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ವಿವಿಧ ವೈದ್ಯಕೀಯ ಸೌಲಭ್ಯಗಳ ಉನ್ನತೀಕರಣ. ಎಲ್ಲಾ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ ಆಯುಷ್ ವಿಭಾಗ ಪ್ರಾರಂಭ.
- 4000 ಗ್ರಾಮ ಪಂಚಾಯಿತಿಗಳಲ್ಲಿ ‘ಕೂಸಿನ ಮನೆ’ ಎಂಬ ಹೆಸರಿನಲ್ಲಿ ಶಿಶುಪಾಲನಾ ಕೇಂದ್ರಗಳ ಪ್ರಾರಂಭ.
- ರಾಜ್ಯದ 62 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು 30 ಕೋಟಿ ರೂ. ವೆಚ್ಚದಲ್ಲಿ 6 ರಿಂದ 12ನೇ ತರಗತಿಯವರೆಗೆ ಶಾಲೆಗಳನ್ನಾಗಿ ಉನ್ನತೀಕರಣ; 13,000 Integrated ವಿದ್ಯಾರ್ಥಿಗಳಿಗೆ ಅನುಕೂಲ.
- ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದಿಂದಲೇ NEET, JEE, CET ಹಾಗೂ ಇತರೆ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ ಎರಡು ವರ್ಷಗಳ ತರಬೇತಿ ನೀಡಲು ಎಂಟು ಕೋಟಿ ರೂ.ಗಳ ಅನುದಾನ.
- ಬೆಂಗಳೂರಿನ ಹಜ್ ಭವನದಲ್ಲಿ ಅಲ್ಪಸಂಖ್ಯಾತರ ಯುವ ಜನರಿಗೆ 10 ತಿಂಗಳ ವಸತಿಸಹಿತ IAS/KAS ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಪ್ರಾರಂಭಿಸಲು ಕ್ರಮ.
- ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶ್ವದಲ್ಲಿ 250 ರೊಳಗೆ University Ranking ಹೊಂದಿರುವ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಶೂನ್ಯ ಬಡ್ಡಿ ದರದಲ್ಲಿ ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ. ಸಾಲ ಸೌಲಭ್ಯ.
- ನೆನೆಗುದಿಗೆ ಬಿದ್ದಿರುವ 126 ಶಾದಿ ಮಹಲ್ ಮತ್ತು ಸಮುದಾಯ ಭವನಗಳ ನಿರ್ಮಾಣ ಕಾರ್ಯಗಳನ್ನು 54 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲು ಕ್ರಮ.
- 868 ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ನೀಡಲಾಗುತ್ತಿರುವ ತಸ್ತಿಕ್ ಮೊತ್ತ 60,000 ರೂ. ಗಳಿಗೆ ಹೆಚ್ಚಳ.
- ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಹಾಗೂ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಕಾರ್ಯಕ್ರಮಗಳಡಿ ವಿವಿಧ ಅಭಿವೃದ್ಧಿ ಅಲ್ಪಸಂಖ್ಯಾತರ ಸಮುದಾಯಗಳಿಗೆ ಕಾರ್ಯಕ್ರಮಗಳಿಗೆ ಒಟ್ಟು 360 ಕೋಟಿ ರೂ. ಅನುದಾನ.
- ಜೈನರ ಪ್ರಮುಖ ಪುಣ್ಯಕ್ಷೇತ್ರಗಳ ಅಭಿವೃದ್ಧಿಗಾಗಿ 25 ಕೋಟಿ ರೂ. ಅನುದಾನ.
- ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ. 100 ಕೋಟಿ ರೂ. ಅನುದಾನ.
- ರಾಜ್ಯದಲ್ಲಿರುವ ವಕ್ಸ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ 50 ಕೋಟಿ ರೂ. ನೆರವು.
- ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆ ಜಾರಿ.
- ಬೆಂಗಳೂರು ಮತ್ತು ಇತರ ನಗರಗಳಲ್ಲಿ ಇಂದಿರಾ ಕ್ಯಾಂಟೀನ್ ಗಳ ಪುನರಾರಂಭಕ್ಕೆ 100 ಕೋಟಿ ರೂ. ಅನುದಾನ.
- ನಮ್ಮ ಮೆಟ್ರೋ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ಈಗಿರುವ 70 ಕಿ.ಮೀ.ನ ಸಂಪರ್ಕಜಾಲವನ್ನು 176 ಕಿ.ಮೀ.ಗೆ ವಿಸ್ತರಿಸಲು ಕ್ರಮ. ವಿಮಾನ ನಿಲ್ದಾಣ ಮಾರ್ಗ 2026 ರಲ್ಲಿ ಪೂರ್ಣ.
- ಮೆಟ್ರೋ 3ನೇ ಹಂತದಡಿ 15,000 ಕೋಟಿ ರೂ. ಅಂದಾಜು ವೆಚ್ಚದ, ಹೆಬ್ಬಾಳದಿಂದ ಸರ್ಜಾಪುರದವರೆಗಿನ 37 ಕಿ.ಮೀ. ಉದ್ದದ ಯೋಜನೆ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆ.
- ಬೆಂಗಳೂರು ಉಪನಗರ ರೈಲು ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ಕಾರಿಡಾರ್-2 ಮತ್ತು ಕಾರಿಡಾರ್-4ರ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರದಿಂದ 1,000 ಕೋಟಿ ರೂ.
- ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಏರ್ ಸ್ಟ್ರಿಪ್‌ಗಳನ್ನು (Airstrip) ಅಭಿವೃದ್ಧಿಪಡಿಸಲು ಕ್ರಮ. ಪ್ರಸಕ್ತ ಸಾಲಿನಲ್ಲಿಯೇ ವಿಜಯಪುರ ವಿಮಾನ ನಿಲ್ದಾಣದ ಕಾರ್ಯಾಚರಣೆ ಪ್ರಾರಂಭಿಸಲು ಕ್ರಮ.
- ಮೀನುಗಾರಿಕಾ ದೋಣಿಗಳು ತಂಗುವ ಜೆಟ್ಟಿಗಳು ಹಾಗೂ ಬಂದರುಗಳಲ್ಲಿ ಹೂಳು ತೆಗೆಯುವುದು ಮತ್ತು ಮಲ್ಪೆ, ಹೊನ್ನಾವರ, ಭಟ್ಕಳ, ಕುಂದಾಪುರ ಮತ್ತು ಬೆಲೆಕೇರಿ ಬಂದರುಗಳಲ್ಲಿ ಎರಡು ವರ್ಷಗಳಿಗೊಮ್ಮೆ ಹೂಳೆತ್ತಲು ಕ್ರಮ.
- ಕೈಗಾರಿಕೆಗಳ ಸ್ಥಾಪನೆಗೆ ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಪರಿವರ್ತಿಸದೆ ಬಳಸಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ.
- ಬೆಂಗಳೂರಿನ ದೇವನಹಳ್ಳಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್‌ನಲ್ಲಿ ಅತ್ಯಾಧುನಿಕ ಕರ್ನಾಟಕ ಏರೋಸ್ಪೇಸ್ ತಂತ್ರಜ್ಞಾನ ಕೇಂದ್ರ ಸ್ಥಾಪನೆ.
- ರಾಜ್ಯದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (KSSIDC) ವತಿಯಿಂದ ಹೊಸದಾಗಿ ಏಳು ಕೈಗಾರಿಕಾ ವಸಾಹತುಗಳ ಸ್ಥಾಪನೆ.
- 10 ಹೆಚ್.ಪಿ. ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ 250 ಯುನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ
- ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರತಿಷ್ಠಾನದ ಚಟುವಟಿಕೆಗೆ ನೆರವು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಎಂ. ಎಂ. ಕಲಬುರಗಿ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆಗೆ ಕ್ರಮ.
- ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಶೇ.3 ರಷ್ಟು ಹುದ್ದೆಗಳನ್ನು ಮೀಸಲಾತಿ ನಿಗದಿಗೆ ಕ್ರಮ.
- ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆ ರಚನೆ. ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಸಸಿಹಿತ್ತು ಕಡಲ ತೀರದ ಅಭಿವೃದ್ಧಿ.
- ನೋಂದಣಿಯೇತರ ವಹಿವಾಟುಗಳಿಗೆ ಇ-ಮುದ್ರಾಂಕ ಮತ್ತು ಡಿಜಿಟಲ್ ಸ್ಟಾಂಪಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಕ್ರಮ.
- ವಿವಾಹ ನೋಂದಣಿ ಪ್ರಕ್ರಿಯೆ ಸುಗಮಗೊಳಿಸಲು ಆನ್‌ಲೈನ್ ನಲ್ಲಿ ಮುಂಗಡ ಸಮಯ ನಿಗದಿ ಹಾಗೂ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ.
- ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ ಹಾಗೂ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕ್ರಮ.
- ಸಿ ವರ್ಗದ ಒಟ್ಟು 121 ಮುಜರಾಯಿ ದೇವಸ್ಥಾನಗಳಿಗೆ ಸಮಾನವಾಗಿ 15,000 ರೂ.ಗಳ ಸಹಾಯಾನುದಾನವನ್ನು ನೀಡಲು ಕ್ರಮ.
- ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಮೊತ್ತ 12 ಸಾವಿರ ರೂ. ಗಳಿಗೆ ಹಾಗೂ ಕುಟುಂಬ ಮಾಸಾಶನ 6 ಸಾವಿರ ರೂ. ಗಳಿಗೆ ಹೆಚ್ಚಳ.
- ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್ ಗಳ ಮೇಲೆ ಶೇ.20ರಷ್ಟು ಹಾಗೂ ಬಿಯರ್ ಮೇಲೆ ಶೇ.10ರಷ್ಟು ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳ.
ಇದನ್ನೂ ಓದಿ: ಕರ್ನಾಟಕ ಬಜೆಟ್-2023 ಸಮಗ್ರ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ