Site icon Vistara News

Karnataka budget 2023 : ಉತ್ತರ ಕನ್ನಡ ಜಿಲ್ಲೆಗಿಲ್ಲ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ! ಕೈಕೊಟ್ಟ ಸಿದ್ದರಾಮಯ್ಯ

CM siddaramaiah in karnataka budget 2023 and super speciality hospital

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ದಶಕಗಳ ಬೇಡಿಕೆಯಾಗಿದ್ದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ (super speciality hospital) ಕನಸು ಕೊನೆಗೂ ಈಡೇರಿಲ್ಲ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೊನೇ ಬಜೆಟ್‌ನಲ್ಲಿ ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿರುವ ಬಜೆಟ್‌ನಲ್ಲಿ (Karnataka budget 2023) ಅದರ ಪ್ರಸ್ತಾಪವೇ ಇಲ್ಲ. ಈ ಮೂಲಕ ದಶಕದ ಯೋಜನೆ ಇಲ್ಲಿ ಮರೀಚಿಕೆಯಾಗಿಯೇ ಉಳಿದಿದೆ. ಈ ಬಾರಿಯ ಬಜೆಟ್‌ನಲ್ಲಿ ಕಾರವಾರ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡದ ಬಗ್ಗೆ ಮಾತ್ರವೇ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ ಈಗಾಗಲೇ ಆರಂಭಿಸಲಾಗಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 450 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗದಗ, ಕೊಪ್ಪಳ, ಕಾರವಾರ ಮತ್ತು ಕೊಡಗು ಜಿಲ್ಲೆಗಳಲ್ಲಿ 450 ಬೆಡ್‌ ಆಸ್ಪತ್ರೆಗಳ ನಿರ್ಮಾಣ ಕಾರ್ಯವನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ, ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಬಹಳ ದೊಡ್ಡದಿರುವ ಕಾರಣ, ಅಪಘಾತವಾದರೆ ಇಲ್ಲವೇ ತುರ್ತು ಚಿಕಿತ್ಸೆ ಬೇಕಿದ್ದರೆ ಪಕ್ಕದ ಮಂಗಳೂರು, ಗೋವಾ ಇಲ್ಲವೇ ಹುಬ್ಬಳ್ಳಿಯಂತಹ ಕಡೆಗಳಿಗೆ ಹೋಗಬೇಕು. ಇದರಿಂದ ಸಾಕಷ್ಟು ಜೀವ ಹಾನಿಯಾಗುತ್ತಲಿದೆ. ರಾಜ್ಯಕ್ಕೆ ವಿದ್ಯುತ್‌ ಕೊಟ್ಟ ಜಿಲ್ಲೆಯ ಜನರಿಗೆ ಕನಿಷ್ಠ ಮೂಲ ಸೌಕರ್ಯವೂ ಇಲ್ಲದಂತೆ ಆಗಿದ್ದು, ಕೊನೇ ಪಕ್ಷ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನಾದರೂ ನೀಡಬೇಕು ಎಂದು ಭಾರಿ ಹೋರಾಟ ನಡೆದಿತ್ತು.

ಇದನ್ನೂ ಓದಿ: Karnataka Budget 2023 : ಪಂಚ ಗ್ಯಾರಂಟಿಗಳಿಗೆ ಸಿದ್ದರಾಮಯ್ಯ ಇಟ್ಟಿರುವ ದುಡ್ಡೆಷ್ಟು?

ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಮೇಲೆ ಸಾಕಷ್ಟು ಒತ್ತಡವನ್ನು ಹೇರಲಾಗಿತ್ತು. ಹೀಗಾಗಿ ಆಗಿನ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು ಉತ್ತರ ಕನ್ನಡ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಭೆ ನಡೆಸಿದ್ದಲ್ಲದೆ, ಜಿಲ್ಲೆಗೆ ಭೇಟಿ ನೀಡಿ ಸ್ಥಳಪರಿಶೀಲನೆಯನ್ನೂ ನಡೆಸಿದ್ದರು. ಕೊನೆಗೆ ಸರ್ಕಾರ ಸಹ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು.

ಬಗೆಹರಿದಿದ್ದ ಜಾಗದ ಗೊಂದಲ

ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ವೆ ನಂಬರ್ 440ರಲ್ಲಿ 15.35 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಹಿಂದೆ ಈ ಜಾಗವನ್ನು ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣಕ್ಕಾಗಿ ಮೀಸಲಿಡಲಾಗಿತ್ತು. ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗವಾಗಿರುವ ಹಿನ್ನೆಲೆಯಲ್ಲಿ ಸದ್ಯ ಈ ಜಾಗವನ್ನು ಆಸ್ಪತ್ರೆಗಾಗಿ ನೀಡುವಂತೆ ಸೂಚನೆ ನೀಡಲಾಗಿತ್ತು. ವಸತಿ ಶಾಲೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಪರ್ಯಾಯ ಜಾಗವನ್ನು ಒದಗಿಸುವ ಭರವಸೆಯನ್ನು ನೀಡಲಾಗಿತ್ತು.

ವಸತಿ ಶಾಲೆಯ ಜಾಗ ಆಸ್ಪತ್ರೆಗೆ

ಉತ್ತರ ಕನ್ನಡ ಜಿಲ್ಲಾಡಳಿತವು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಏಕಲವ್ಯ ವಸತಿ ಶಾಲೆಗೆ ಮೀಸಲಿರಿಸಲಾಗಿದ್ದ ಜಾಗವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ನೀಡುವಂತೆ ಇಲಾಖೆಗೆ ಕಳೆದ ವರ್ಷ ಪತ್ರ ಬರೆಯಲಾಗಿತ್ತು. ಆಗಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಅವರು ಆ ಜಾಗವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಅನುಮತಿ ನೀಡಿದ್ದರು. ಅದರಂತೆ ಏಕಲವ್ಯ ವಸತಿ ಶಾಲೆಗಾಗಿ ನಿಗದಿಪಡಿಸಿ ಇರಿಸಲಾಗಿದ್ದ 17 ಎಕರೆ 14 ಗುಂಟೆ ಜಮೀನಿನಲ್ಲಿ, 15 ಎಕರೆ 35 ಗುಂಟೆಯಷ್ಟು ಪ್ರದೇಶವನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಜತೆಗೆ ಏಕಲವ್ಯ ವಸತಿ ಶಾಲೆಗೆ ಪರ್ಯಾಯ ಜಾಗ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಷರತ್ತು ವಿಧಿಸಿ, ಆ ಪ್ರದೇಶವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಕಾಯ್ದಿರಿಸಲು ಸರ್ಕಾರದ ಆಪ್ತ ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದರು. ಈಗ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡದೇ ಇರುವುದರಿಂದ ಈ ಹಿಂದೆ ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥವೇ ಎಂಬ ಅನುಮಾನ ಮೂಡಿದೆ.

ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ದಶಕಗಳ ಕನಸಿಗೆ ಸಿಎಂ ಸಿದ್ದರಾಮಯ್ಯ ಅವರು ತಣ್ಣೀರು ಎರಚಿದರೇ ಎಂಬ ಅನುಮಾನ ಮೂಡಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಜನತೆಯ ಆಕ್ರೋಶಕ್ಕೂ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿ ಸ್ಪಷ್ಟನೆ ನೀಡಲಿದೆ ಎಂಬುದನ್ನು ಉತ್ತರ ಕನ್ನಡ ಜಿಲ್ಲೆಯ ಜನತೆ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: Karnataka budget 2023 : ಬಜೆಟ್‌ ಮುನ್ನವೇ ಸಿಎಂ ಸಿದ್ದರಾಮಯ್ಯಗೆ ಕುರ್ಚಿ ಚಿಂತೆ!

ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳ ಕೊಡುಗೆ!

ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಕಾರ್ಯಾರಂಭ ಮತ್ತು ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ 155 ಕೋಟಿ ರೂ.ಗಳನ್ನು ಒದಗಿಸಲಾಗುವುದು.

ಇಲ್ಲ ಎಂದು ಹೇಳಿದ್ದ ವೈದ್ಯಕೀಯ ಶಿಕ್ಷಣ ಸಚಿವ

ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸದ್ಯಕ್ಕೆ ಇಲ್ಲ ಎಂದು ವಿಧಾನಸಭೆ ಅಧಿವೇಶನದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅವರು ಗುರುವಾರ (ಜೂನ್‌ 6) ಹೇಳಿದ್ದರು. ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಸದನದಲ್ಲಿ ಎತ್ತಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದರು. ಹಿಂದೆ ನಮ್ಮದೇ ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಿಸುವ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಕಾರವಾರದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಲಾಗಿದೆ. ಇನ್ನು ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಇದ್ದರೂ ಅದಕ್ಕೆ ಯಾವುದೇ ಬಜೆಟ್ ಮಂಜೂರಾತಿ ಇಲ್ಲ. ಇನ್ನು ಜಾಗವೂ ಸಂಪೂರ್ಣವಾಗಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರವಾಗಿಲ್ಲ. ಮುಂದೆ ಜಾಗ ಹಸ್ತಾಂತರವಾದ ನಂತರ ಅನುದಾನ ಲಭ್ಯತೆಯನ್ನು ನೋಡಿಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.

ಬಜೆಟ್‌ನ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version