Site icon Vistara News

Karnataka Budget 2023: ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಏನೇನಿದೆ?; ಇಲ್ಲಿದೆ ಕೆಲವು ಮುಖ್ಯಾಂಶ

Karnataka Budget 2023 What is there in CM Basavaraj Bommai budget Here are some of the highlights

ಬೆಂಗಳೂರು: ೨೦೨೩-೨೪ನೇ ಸಾಲಿನ ಬಜೆಟ್‌ (Karnataka Budget 2023) ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡನೆ ಮಾಡಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್‌ ಗಾತ್ರವು ೩,೦೯,೧೮೧ ರೂಪಾಯಿಗೆ ತಲುಪಿದ್ದು, ಇಷ್ಟು ವರ್ಷದಲ್ಲಿ ಇದೇ ಹೆಚ್ಚಳವಾದಂತೆ ಆಗಿದೆ. ಕಳೆದ ವರ್ಷದ ಬಜೆಟ್‌ ಗಾತ್ರವು ಒಟ್ಟು ೨,೮೯,೬೫೩ ರೂಪಾಯಿಗಳಿತ್ತು. ಅಲ್ಲದೆ, ಕೃಷಿ, ಸಾರಿಗೆ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆಯನ್ನು ನೀಡಲಾಗಿದೆ. ಇದರ ಜತೆಗೆ ಮಹಿಳೆ ಮತ್ತು ಮಕ್ಕಳ ಅಭ್ಯುದಯಕ್ಕೂ ಕೊಡುಗೆಗಳನ್ನು ನೀಡಲಾಗಿದೆ.

ಈ ಬಜೆಟ್‌ನಲ್ಲಿ ಯಾವ ಯಾವ ಕ್ಷೇತ್ರಕ್ಕೆ ಏನೆಲ್ಲ ಕೊಡುಗೆಯನ್ನು ನೀಡಲಾಗಿದೆ? ಹೊಸ ಯೋಜನೆಗಳೇನು? ವಿಸ್ತರಣೆಯಾದ ಯೋಜನೆಗಳೇನು? ಎಂಬಿತ್ಯಾದಿ ಅಂಶಗಳನ್ನು ಮುಖ್ಯಾಂಶವನ್ನು ನೋಡೋಣ.

ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು ೩ ಲಕ್ಷ ರೂಪಾಯಿಯಿಂದ ೫ ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಘೋಷಿಸಲಾಗಿದೆ. ಈ ವರ್ಷ ೩೦ ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ೨೫,೦೦೦ ಕೋಟಿ ರೂಪಾಯಿಗೂ ಹೆಚ್ಚಿನ ಸಾಲವನ್ನು ವಿತರಣೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಹೊಂದಿರುವ ರೈತರಿಗೆ “ಭೂ ಸಿರಿ” ಎಂಬ ನೂತನ ಯೋಜನೆಯಡಿ ೨೦೨೩-೨೪ನೇ ಸಾಲಿನಿಂದ ೧೦ ಸಾವಿರ ರೂಪಾಯಿಗಳ ಹೆಚ್ಚುವರಿ ಸಹಾಯಧನ ಹೆಚ್ಚಳ ಮಾಡಲಾಗಿದೆ. ಇದರಿಂದ ೫೦ ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.

ರೈತರ ಜೀವನ ಭದ್ರತೆ ಕ್ಷೇತ್ರಕ್ಕೂ ಆದ್ಯತೆಯನ್ನು ನೀಡಲಾಗಿದ್ದು, ೫೬ ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ೧೮೦ ಕೋಟಿ ರೂಪಾಯಿ ವೆಚ್ಚದಲ್ಲಿ ಜೀವನಜ್ಯೋತಿ ವಿಮಾ ಯೋಜನೆಯನ್ನು ಜಾರಿಗೆ ತರುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. 2023-24 ಸಾಲಿನಲ್ಲಿ ರೈತರಿಗೆ ಹೈಟೆಕ್ ಹಾರ್ವೆಸ್ಟರ್ ಗಳಿಗೆ ತಲಾ 50 ಲಕ್ಷ ರೂಪಾಯಿಯಂತೆ 50 ಕೋಟಿ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Karnataka Budget 2023: ಮಠ ಮಾನ್ಯಗಳಿಗೆ ಭರ್ಜರಿ ಕೊಡುಗೆ, ಅರ್ಚಕರ: ಸಮಗ್ರ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಘೋಷಣೆ

ಇಸ್ರೋ ಸಂಸ್ಥೆಯ ಸಹಾಯೋಗದೊಂದಿಗೆ ಡಿಜಿಟಲ್ ಕೃಷಿಯಲ್ಲಿ ಜಿಯೋ-ಸ್ಪೇಷಿಯಲ್ ತಾಂತ್ರಿಕತೆಯನ್ನು ಅಳವಡಿಸಲು 50 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರೋತ್ಸಾಹಿಸಲು 10 ಲಕ್ಷ ರೂಪಾಯಿವರಿಗಿನ ಬಂಡವಾಳಕ್ಕೆ 5 ವರ್ಷಗಳ ಅವಧಿಗೆ ಬ್ಯ‍ಾಂಕ್ ಗಳ ಮೂಲಕ ಮುಖ್ಯಮಂತ್ರಿಗಳ ರೈತ ಉನ್ನತಿ ಯೋಜನೆಯಡಿಯಲ್ಲಿ ಬಡ್ಡಿ ಸಹಾಯಧನ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.

ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023ರ ಅಂಗವಾಗಿ ಕಿರುಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ‘ರೈತಸಿರಿ’ ಯೋಜನೆಯಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ 10,000 ಗಳ ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಲ್ಲದೆ, ಸಿರಿಧಾನ್ಯಗಳನ್ನು ಕ್ಷೇತ್ರಮಟ್ಟದಲ್ಲಿ ಸಂಸ್ಕರಣೆ, ಗ್ರೇಡಿಂಗ್, ಪ್ಯಾಕಿಂಗ್ ಮಾಡುವ ರೈತ ಉತ್ಪಾದಕ ಸಂಸ್ಥೆಗಳಿಗೆ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ಸಹಾಯಧನಕ್ಕೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.

ನೈಸರ್ಗಿಕ ಕೃಷಿಯತ್ತ ೧ ಕೋಟಿ ರೈತರನ್ನು ಸೆಳೆಯುವ ಸಂಬಂಧ ಪ್ರತಿ ತಾಲೂಕಿಗೆ ಒಂದರಂತೆ ೫೦ ಹೆಕ್ಟೇರ್‌ ಪ್ರದೇಶದಲ್ಲಿ ಗುಚ್ಛ ಮಾದರಿಯಲ್ಲಿ ನೈಸರ್ಗಿಕ ಮತ್ತು ಸಮಗ್ರ ಕೃಷಿಗೆ ಚಾಲನೆ ನೀಡಲಾಗುತ್ತಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಇದು ಚಾಲ್ತಿಯಲ್ಲಿರಲಿದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಸಹಸ್ರ ಸರೋವರ ಕಾರ್ಯಕ್ರಮದ ಅಡಿಯಲ್ಲಿ ೧ ಸಾವಿರ ಸಣ್ಣ ಸರೋವರಗಳ ಅಭಿವೃದ್ಧಿಪಡಿಸುವುದಲ್ಲದೆ, ಸಹಸ್ರ ಸಿರಿ ಯೋಜನೆಯ ಮೂಲಕ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡು ಭಾಗದಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ ಅಣೆ, ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ.

ಅಂತರ್ಜಲ ಮಟ್ಟ ಹೆಚ್ಚಳಕ್ಕೆ ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಾಣ ಮಾಡಲು “ಜಲನಿಧಿ” ಎಂಬ ಹೊಸ ಯೋಜನೆ ಘೋಷಣೆ. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ರಫ್ತು ಮತ್ತು ಸಂಸ್ಕರಣೆಯ ಉತ್ತೇಜನಕ್ಕೆ ರೈತ ಸಂಘದ ಯೋಜನೆಯಡಿ ಕೆಪೆಕ್‌ ಸಂಸ್ಥೆಯ ಮೂಲಕ ೧೦೦ ಕೋಟಿ ರೂಪಾಯಿಗಳಲ್ಲಿ ಯೋಜನೆಯನ್ನು ರೂಪಿಸಲಾಗಿದೆ.

ತೋಟಗಾರಿಕಾ ಇಲಾಖೆಯಲ್ಲಿನ ೧೨ ತೋಟಗಳಲ್ಲಿ ಒಂದು ತೋಟ – ಒಂದು ಬೆಳೆ ಯೋಜನೆಯಡಿ ಆಯಾ ಭಾಗದ ಕೃಷಿ-ಹವಾಮಾನ-ಮಣ್ಣಿನ ಗುಣಕ್ಕೆ ಅನುಗುಣವಾಗಿ ತೋಟಗಾರಿಕೆ ಉತ್ಪಾದಕತೆ ಹೆಚ್ಚಿಸಲು ೧೦ ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಘೋಷಿಸಲಾಗಿದೆ. ಆಲೂಗಡ್ಡೆ ಬಿತ್ತನೆಯಲ್ಲಿ ಸ್ವಾವಲಂಬನೆ ಸಾಧಿಸಲು ಎಪಿಕಲ್‌ ರೂಟ್‌ ಕಲ್ಚರ್‌ ತಂತ್ರಜ್ಞಾನವನ್ನು ಯೋಗ್ಯ ಬೆಲೆಯಲ್ಲಿ ಬೆಳೆಗಾರರಿಗೆ ಪರಿಚಯಿಸುವುದಾಗಿ ಪ್ರಕಟಿಸಲಾಗಿದೆ.

ಅಡಿಕೆ ರೋಗಗಳ ನಿರ್ವಹಣೆಗಾಗಿ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ ೧೦ ಕೋಟಿ ರೂಪಾಯಿ ನೆರವು ನೀಡುವ ಘೋಷಣೆ ಮಾಡಲಾಗಿದೆ. ಶ್ರೀಗಂಧ ಬೆಳೆ, ಕಟಾವು ಹಾಗೂ ಮಾರಾಟ ಪ್ರಕ್ರಿಯೆ ಸುಗಮಗೊಳಿಸುವುದಲ್ಲದೆ, ಸುಧಾರಿತ ಶ್ರೀಗಂಧ ಪ್ರಭೇದವನ್ನು ಉತ್ಪಾದನೆ ಮಾಡಿ ರೈತರಿಗೆ ವಿತರಣೆ ಮಾಡುವ ಘೋಷಣೆ ಮಾಡಲಾಗಿದೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆ ಮಾಡಲಾಗುತ್ತಿದೆ. ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ ಮುಖಾಂತರ ೧೦೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಲಾಗಿದೆ. ರೇಷ್ಮೆ ಬೆಳೆಯನ್ನು ೧೦ ಸಾವಿರ ಹೆಕ್ಟೇರ್‌ ಪ್ರದೇಶಗಳಿಗೆ ವಿಸ್ತರಣೆ ಮಾಡಲಾಗುವುದು.

ಉತ್ತರ ಕನ್ನಡ ಜಿಲ್ಲೆಯ ದಶಕಗಳ ಬೇಡಿಕೆಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಅಲ್ಲದೆ, ಕಾರವಾರದಲ್ಲಿ ಪ್ರಗತಿಯಲ್ಲಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳ ನಿರ್ಮಾಣವನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಮೀನು ಕೃಷಿ ಉತ್ತೇಜನಕ್ಕೆ ಹಾವೇರಿಯಲ್ಲಿ ಮೀನುಮರಿ ಉತ್ಪಾದನೆ ಮತ್ತು ಪಾಲನಾ ಕೇಂದ್ರ ಸ್ಥಾಪನೆ, ವಸತಿ ರಹಿತ ಮೀನುಗಾರರಿಗೆ ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯನ್ನು 10,000 ವಸತಿರಹಿತ ಮೀನುಗಾರರಿಗೆ ವಿಸ್ತರಿಸಲಾಗುತ್ತಿದೆ. ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸೀಗಡಿ ಕೃಷಿ ಕ್ಲಸ್ಟರ್ ಗಳನ್ನು ಸ್ಥಾಪನೆಗೆ ಮುಂದಾಗಲಾಗಿದೆ.

ರಾಜ್ಯದಲ್ಲಿ ಪುಷ್ಪಗಳ ರಸ್ತೆಗೆ ವಿಫುಲ ಅವಕಾಶ ಇರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ, ಬೆಂಗಳೂರು ಮತ್ತು ಹಾವೇರಿಯಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಹೂವಿನ ಚಿಲ್ಲರೆ ಮಾರುಕಟ್ಟೆಯನ್ನು ನಿರ್ಮಾಣದ ಬಗ್ಗೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Karnataka budget 2023 : ಉತ್ತರಕನ್ನಡದ ಬಹುದಿನಗಳ ಬೇಡಿಕೆ ಈಡೇರಿಕೆ, ಕುಮಟಾದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ

ರಾಜ್ಯದಲ್ಲಿ ಈಗಾಗಲೇ 19 ಲಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಸಾರ್ವಜನಿಕ ಬಸ್ಸುಗಳ ಸೇವೆಯನ್ನು ಅವಲಂಬಿಸಿರುತ್ತಾರೆ. ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷದಲ್ಲಿ ಸಾರಿಗೆ ನಿಗಮಗಳ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ 1,000 ಹೊಸ ಕಾರ್ಯಾಚರಣೆಗಳನ್ನು ಮಾಡಲು “ಮಕ್ಕಳ ಬಸ್ಸು’ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು. ಇದರಿಂದ ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ಆವಿಷ್ಕಾರಾತ್ಮಕ ಮನೋಭಾವ ಬೆಳೆಸಲು 73 ಕರ್ನಾಟಕ ಪಬ್ಲಿಕ್ ಶಾಲೆಗಳು ಮತ್ತು 50 ಆದರ್ಶ ವಿದ್ಯಾಲಯಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ‘ಸೃಷ್ಟಿ’ ಟಿಂಕರಿಂಗ್ ಪ್ರಯೋಗಾಲಯಗಳ ಸ್ಥಾಪನೆ. ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೊಂದಿಲ್ಲದ 23 ತಾಲ್ಲೂಕುಗಳಲ್ಲಿ ಹೊಸದಾಗಿ ಶಾಲೆಗಳನ್ನು ನಿರ್ಮಿಸಲು ಮತ್ತು ಕಾರ್ಯನಿರ್ವಹಿಸುತ್ತಿರುವ 46 ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಒದಗಿಸುವುದಾಗಿ ಘೋಷಣೆ ಮಾಡಲಾಗಿದೆ.

‘ಮನೆ ಮನೆಗೆ ಆರೋಗ್ಯ’ ಎಂಬ ಕಾರ್ಯಕ್ರಮದಡಿಯಲ್ಲಿ ರಾಜ್ಯದ ಗ್ರಾಮೀಣ ಜನತೆಗೆ 2023-24ನೇ ಸಾಲಿನಲ್ಲಿ ಎರಡು ಬಾರಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆಯೋಜಿಸಲಾಗುವುದು. ಇದರಿಂದ ತೀವ್ರವಾದ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ಜನರ ಆರೋಗ್ಯ ಕಾಪಾಡುವ ಗುರಿ ಹೊಂದಲಾಗಿದೆ. ಇದರೊಂದಿಗೆ ಈ ಯೋಜನೆಯಡಿ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸಲು ಸಹ ಕ್ರಮವಹಿಸಲಾಗುವುದು. ಅಲ್ಲದೆ, 65 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 137 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸುವುದಾಗಿ ಘೋಷಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ IIT, IIM, IISc, NIT ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಗಳ ಪ್ರೋತ್ಸಾಹಧನ ನೀಡುತ್ತಿದ್ದು, ಸದರಿ ಪ್ರೋತ್ಸಾಹಧನದ ಮೊತ್ತವನ್ನು 4 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು.

ಕಲಬುರಗಿಯ ಚಿತ್ತಾಪುರ, ತುಮಕೂರಿನ ಬೈರಗೊಂಡನಹಳ್ಳಿಚಿಕ್ಕನಾಯಕನಹಳ್ಳಿ, ಬೀದರ್‌ನ ಹುಮನಾಬಾದ್, ರಾಯಚೂರು ಗ್ರಾಮಾಂತರ, ವಿಜಯಪುರದ ಹೂವಿನ ಹಿಪ್ಪರಗಿ ಮತ್ತು ಚಿತ್ರದುರ್ಗದ ಮೊಳಕಾಲ್ಕೂರು ಹೀಗೆ 9 ಸ್ಥಳಗಳಲ್ಲಿ ಹೊಸದಾಗಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಲಾಗುವುದು.

ಇದನ್ನೂ ಓದಿ: Karnataka Budget 2023 : ನೇಕಾರರಿಗೆ ಭರ್ಜರಿ ಕೊಡುಗೆ; ನೇಕಾರ ಸಮ್ಮಾನ್‌ 3ರಿಂದ 5 ಸಾವಿರಕ್ಕೆ ಏರಿಕೆ, ಉಚಿತ ವಿದ್ಯುತ್‌

ಪ್ರಸಕ್ತ ವರ್ಷದಲ್ಲಿ ರಾಯಚೂರು, ಕಲಬುರಗಿ, ವಿಜಯಪುರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನೂತನ ಮೆಗಾ ಜವಳಿ ಪಾರ್ಕ್ ಮತ್ತು ರಾಜ್ಯದ 25 ಸ್ಥಳಗಳಲ್ಲಿ ಮಿನಿ ಜವಳಿ ಪಾರ್ಕ್ ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಇದರಿಂದಾಗಿ ಸುಮಾರು 25,000 ಜನರಿಗೆ ಉದ್ಯೋಗ ಸೃಜನೆಯಾಗಲಿದೆ.

ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ಟರ್ಮಿನಲ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಅದರ ಸುತ್ತಮುತ್ತಲಿನ ಸಂಪರ್ಕ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಮತ್ತು ಸಂಚಾರ ದಟ್ಟಣೆ ಪ್ರಮಾಣವನ್ನು ಕಡಿಮೆ ಮಾಡಲು 300 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ಅಧಿಕೃತವಾಗಿ ನೋಂದಣಿಯಾಗಿರುವ ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಲಕ್ಷ ರೂ. ಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುವುದು. ಬಾಸ್ಕೆಟ್ ಬಾಲ್ ಮತ್ತು ವಾಲಿ ಬಾಲ್ ಕ್ರೀಡೆಗಳನ್ನು ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಪರಿಚಯಿಸಲು ಹೊಸ ಅಂಕಣಗಳನ್ನು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ.

ಇದನ್ನೂ ಓದಿ: Karnataka Budget 2023: ಮಠ ಮಾನ್ಯಗಳಿಗೆ ಭರ್ಜರಿ ಕೊಡುಗೆ, ಅರ್ಚಕರ: ಸಮಗ್ರ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಘೋಷಣೆ

2022-23ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 3,526 ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿಕೊಳ್ಳಲು ಕ್ರಮ ವಹಿಸಲಾಗಿರುತ್ತದೆ. 2023-24ನೇ ಸಾಲಿನಲ್ಲಿ 1,200 ಹೊಸ ಬಸ್ಸುಗಳನ್ನು ಸಂಸ್ಥೆಗಳಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರದಿಂದ 500 ಕೋಟಿ ರೂ. ಗಳ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು. ಪ್ರಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸಾರಿಗೆ ಸಂಸ್ಥೆಗಳಿಗೆ ಹೊಸ ಬಸ್ ಖರೀದಿಗಾಗಿ ಸರ್ಕಾರದಿಂದ ನೆರವು ನೀಡಲಾಗುತ್ತಿದೆ.

Exit mobile version