ಬೆಂಗಳೂರು: ಕಾಶಿಯಾತ್ರೆ ಕೈಗೊಳ್ಳುವ ಕರ್ನಾಟಕದ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿ ಎಂದು ಬೆಂಗಳೂರಿನಿಂದ ಉತ್ತರ ಪ್ರದೇಶದ ವಾರಾಣಸಿಗೆ ಸಂಚರಿಸುವ ಭಾರತ ಗೌರವ ಕಾಶಿ ದರ್ಶನ ವಿಶೇಷ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿಶೇಷ ರೈಲುಗಳ ಓಡಾಟಕ್ಕೆ ಚುನಾವಣೆ ಆಯೋಗವು ಅನುಮತಿ ನೀಡಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.
ಏಪ್ರಿಲ್ 14ರಿಂದ 28ರ ಅವಧಿಯಲ್ಲಿ ಬೆಂಗಳೂರಿನಿಂದ ವಾರಾಣಸಿ, ಪ್ರಯಾಗ್‌ರಾಜ್‌ಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಮಾರ್ಚ್ 25ರಿಂದಲೇ ಬುಕ್ಕಿಂಗ್ ಆರಂಭಿಸಿತು. ಆದರೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಚುನಾವಣೆ ಆಯೋಗವು ರೈಲು ಸಂಚಾರಕ್ಕೆ ಕರ್ನಾಟಕ ಸರ್ಕಾರ ಮಾಡಿದ ಮನವಿಯನ್ನು ತಿರಸ್ಕರಿಸಿದೆ. ಇದರಿಂದಾಗಿ, ರಾಜ್ಯ ಸರ್ಕಾರವು ವಿಶೇಷ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.
ಮಾರ್ಚ್ 25ರಂದೇ ಬುಕ್ಕಿಂಗ್ ಆರಂಭವಾಗಿ, ಇದಕ್ಕೂ ಮೊದಲೇ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಚುನಾವಣೆ ಆಯೋಗವು ಮಾರ್ಚ್ 29ರಿಂದ ನೀತಿ ಸಂಹಿತೆ ಜಾರಿಗೊಳಿಸಿದೆ. ಹೀಗಿದ್ದರೂ, ರೈಲುಗಳ ಓಡಾಟದ ಕುರಿತು ಗೊಂದಲ ಉಂಟಾಗಿತ್ತು. ಕೊನೆಗೆ ರಾಜ್ಯ ಸರ್ಕಾರವು ಗೊಂದಲ ನಿವಾರಿಸಲು ರೈಲುಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಚುನಾವಣೆ ವೇಳೆ ರೈಲುಗಳ ವ್ಯವಸ್ಥೆ ಮಾಡಿರುವುದು ಮತದಾರರ ಮೇಲೆ ಪರಿಣಾಮ ಬೀರುವ ಕಾರಣದಿಂದಾಗಿ ಆಯೋಗವು ಮನವಿಯನ್ನು ತಿರಸ್ಕರಿಸಿದೆ.
“ಚುನಾವಣೆ ಆಯೋಗದ ನಿರ್ದೇಶನದಂತೆ ವಾರಾಣಸಿ, ಪ್ರಯಾಗ್‌ರಾಜ್‌ಗೆ ತೆರಳುವ ವಿಶೇಷ ರೈಲುಗಳ ಬುಕ್ಕಿಂಗ್ ರದ್ದುಗೊಳಿಸಲಾಗಿದೆ. ಏಪ್ರಿಲ್‌ನಲ್ಲಿ ಮಾಡಿದ ಎಲ್ಲ ಟಿಕೆಟ್‌ಗಳ ಬುಕ್ಕಿಂಗ್ ರದ್ದಾಗಿದ್ದು, ರೈಲುಗಳ ಸಂಚಾರವನ್ನೂ ಮೊಟಕುಗೊಳಿಸಲಾಗಿದೆ” ಎಂದು ರಾಜ್ಯ ಸರ್ಕಾರ ಪ್ರಕಟಣೆ ತಿಳಿಸಿದೆ. ರಾಜ್ಯದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: Karnataka Elections : ಚುನಾವಣೆ ನಡುವೆ ಡ್ರಗ್ಸ್ ಸದ್ದು; 1 ಕೋಟಿ ಮೌಲ್ಯದ ಗಾಂಜಾ ವಶ; ಟಾಟಾ ಸುಮೋ, ಬಸ್‌ನಲ್ಲಿ ಸಾಗಾಟ!