ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಿಂದ ನಡೆಸುವ 2024ನೇ ಸಾಲಿನ ಸಿಇಟಿ (KCET) ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಈ ಮೊದಲು ನಿಗದಿಯಾಗಿದ್ದ ದಿನಾಂಕಕ್ಕೂ ಎರಡು ದಿನ ಮೊದಲೇ ಪರೀಕ್ಷೆ ನಡೆಯಲಿದ್ದು, ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಏಪ್ರಿಲ್ 18 ಮತ್ತು 19ರಂದು ಸಿಇಟಿ ನಡೆಸುವುದಾಗಿ ಕೆಇಎ ತಿಳಿಸಿದೆ.
ಈ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು,2024ನೇ ಸಾಲಿನ ಸಿಇಟಿ ಪರೀಕ್ಷಾ ದಿನಾಂಕಗಳಂದೇ ಎನ್‌ಡಿಎ ಪರೀಕ್ಷೆ ನಿಗದಿಯಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ದಿನಾಂಕ ಬದಲಾವಣೆ ಮಾಡುವಂತೆ ಕೋರಿದ್ದರು. ಹೀಗಾಗಿ ಪರೀಕ್ಷೆ ದಿನಾಂಕವನ್ನು ಬದಲಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಕೆಇಎಯಿಂದ ಈ ಮುಂಚೆ ಏಪ್ರಿಲ್ 20 ಮತ್ತು 21ರಂದು ಸಿಇಟಿ ನಡೆಸುವುದಾಗಿ ಘೋಷಿಸಲಾಗಿತ್ತು. ಆದರೆ ಎನ್‌ಡಿಎ ಪರೀಕ್ಷೆ 21ರಂದು ಇರುವ ಕಾರಣ ಸಿಇಟಿ 2024 ಅನ್ನು ಏಪ್ರಿಲ್ 18, 19ರಂದು ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024ನೇ ಸಾಲಿನ ವಿವಿಧ ವೃತ್ತಿ ಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳ ದಿನಾಂಕವನ್ನು ನಾಲ್ಕು ತಿಂಗಳು ಮೊದಲೇ ಪ್ರಕಟಿಸಿತ್ತು. ಜನವರಿ 10ರಿಂದ ಸಿಇಟಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ.
ಇದನ್ನೂ ಓದಿ | NEET PG 2024: ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ; ಹೊಸ ದಿನಾಂಕ ಘೋಷಣೆ
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ (CET Exam) 2024-25ರಲ್ಲಿ ಪ್ರವೇಶಾತಿ ಬಯಸುವವರಿಗಾಗಿ ಸಿಇಟಿ ನಡೆಸಲಾಗುತ್ತಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಸರಿಯಾದ ಆರ್.ಡಿ. ಸಂಖ್ಯೆ, ಜಾತಿ/ಆದಾಯ ಪ್ರಮಾಣಪತ್ರ ಮತ್ತು ಕಲ್ಯಾಣ ಕರ್ನಾಟಕ (371ಜೆ) ಪ್ರಮಾಣಪತ್ರಕ್ಕೆ ಸಂಬಂಧಿಸಿದ ಅಗತ್ಯ ವಿವರಗಳನ್ನು ದಾಖಲಿಸಬೇಕು. ತಪ್ಪಿದಲ್ಲಿ, ಇಂಥವರು ಅರ್ಜಿ ಸಲ್ಲಿಕೆ ಪೂರ್ಣಗೊಳಿಸಲು ಸಾಧ್ಯವಿರುವುದಿಲ್ಲ.