ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಇಂದು ತಾವು ವ್ಯಾಸಂಗ ಮಾಡಿದ, ರಾಜಾಜಿ ನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿ (DK Shivakumar Visit National Public School), ಶಾಲೆಯ ಮುಖ್ಯಸ್ಥರನ್ನು ಭೇಟಿಯಾದರು. ಅವರಿಗೆ ಹೂಗುಚ್ಛವನ್ನು ಕೊಟ್ಟು, ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಡಿಸಿಎಂ ಹುದ್ದೆ ಜತೆ, ಜಲಸಂಪನ್ಮೂಲ ಮತ್ತು ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ಫುಲ್ ಆ್ಯಕ್ಟಿವ್ ಆಗಿರುವ ಡಿ.ಕೆ.ಶಿವಕುಮಾರ್ ಇಂದು ತಾವು ಓದಿದ ಶಾಲೆಗೆ ಹೋಗುವಾಗ ಸೂಟು-ಬೂಟು ಧರಿಸಿ ಗಮನಸೆಳೆದರು. ಸದಾ ಒಂದು ಬಿಳಿ ಕುರ್ತಾ ಧರಿಸಿ, ಓವರ್ ಕೋಟ್ ಹಾಕುತ್ತಿದ್ದ ಡಿ.ಕೆ.ಶಿವುಕುಮಾರ್ ಇಂದು ಪ್ಯಾಂಟ್-ಶರ್ಟ್ ಧರಿಸಿ, ಮೇಲೊಂದು ಕಪ್ಪು ಕೋಟ್ ಹಾಕಿದ್ದರು.
ಶಾಲೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್ ‘ನಾವು ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಇವತ್ತು ಮುಖ್ಯಮಂತ್ರಿಯವರು ಈ ಬಗ್ಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಅಧಿಕಾರಿಗಳ ಜತೆ ಚರ್ಚೆಯನ್ನೂ ಮಾಡುತ್ತಾರೆ. ಸಂಪುಟ ಸಭೆಗೆ ಅಗತ್ಯವಾದ ಮಾಹಿತಿಗಳನ್ನು ಪಡೆಯಲಿದ್ದಾರೆ. ಸಿಎಂ ಬಳಿಯೇ ಹಣಕಾಸು ಇಲಾಖೆಯು ಇದೆ. ನಮಗೆ ಗೊತ್ತಿದೆ ಹೇಗೆ ಜಾರಿ ಮಾಡಬೇಕು ಎಂಬುದು. ನಾವು ಕೊಟ್ಟ ಮಾತನ್ನು ಖಂಡಿತ ಉಳಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಹಾಗೇ, ಈ ಶಾಲೆ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ‘ನಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದು ಇಲ್ಲೇ. ಭಾರತದ ಮೊದಲ ಅಟಾನಾಮಸ್ ಶಾಲೆ ಇದು. ನನ್ನ ಮಕ್ಕಳೂ ಇದೇ ಶಾಲೆಯಲ್ಲೇ ಓದಿದ್ದಾರೆ. ಈ ಶಾಲೆ ಬೆಲೆ ಏನು ಅಂತ ನನಗೆ ಗೊತ್ತಿದೆ. ಪಂಚಾಯತಿ ಮಟ್ಟದಲ್ಲಿ ನವೋದಯ ಶಾಲೆ ಮಾದರಿಯ ಶಾಲೆಗಳ ಸ್ಥಾಪನೆ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿದ್ದೇವೆ. ಈ ಯೋಜನೆಯನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ನಾನು ಮತ್ತು ಜಿ.ಪರಮೇಶ್ವರ್ ಅವರು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಶಿಕ್ಷಣಕ್ಕೋಸ್ಕರವೇ ವಲಸೆ ಬರುವ ಮಕ್ಕಳು ಅನೇಕರು ಇದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಉತ್ತಮ ಶಿಕ್ಷಣ ಕೊಡಿಸುವುದು ನಮ್ಮ ಧ್ಯೇಯ’ ಎಂದು ಹೇಳಿದರು. ಹಾಗೇ, ‘ಇಡೀ ಬೆಂಗಳೂರಿಗೆ ಹೊಸ ರೂಪ ಕೊಡುವ ಮಹತ್ವದ ಉದ್ದೇಶ ಹೊಂದಿದ್ದೇವೆ’ ಎಂದರು.
ಇದನ್ನೂ ಓದಿ: DK Shivakumar: ನೊಣವಿನಕೆರೆ, ಆದಿಚುಂಚನಗಿರಿ ಮಠಕ್ಕೆ ಡಿ.ಕೆ.ಶಿವಕುಮಾರ್ ಭೇಟಿ; ವಿಶೇಷ ಪೂಜೆ
ಡಿಕೆಶಿಯನ್ನು ಭೇಟಿ ಮಾಡಿದ ಆಂಧ್ರ ಸಿಎಂ ಸೋದರಿ
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸೋದರಿ, ಯುವಜನ ಶ್ರಮಿಕ ರೈತ ತೆಲಂಗಾಣ ಪಕ್ಷದ ಸಂಸ್ಥಾಪಕಿ, ಮುಖ್ಯಸ್ಥೆ ವೈ.ಎಸ್.ಶರ್ಮಿಳಾ ಅವರು ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಮನೆಗೆ ಶರ್ಮಿಳಾ ಆಗಮಿಸಿ ಮಾತುಕತೆ ನಡೆಸಿದ್ದಾರೆ. ಇದೊಂದು ಸೌಜನ್ಯದ ಭೇಟಿ ಎಂದು ಹೇಳಿದ್ದಾರೆ.
ಬಿಬಿಎಂಪಿಗೆ ತೆರಳಿದ ಡಿ.ಕೆ.ಶಿವಕುಮಾರ್
ಶಾಲೆಗೆ ಭೇಟಿ ಕೊಟ್ಟ ಬಳಿಕ ಡಿ.ಕೆ.ಶಿವಕುಮಾರ್ ಅವರು ಅಲ್ಲಿಂದ ಬಿಬಿಎಂಪಿಗೆ ತೆರಳಿದರು. ಬೆಂಗಳೂರು ನಗರ ಅಭಿವೃದ್ಧಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಬೆಂಗಳೂರು ಮಹಾನಗರ ಪಾಲಿಕೆಗೆ ಭೇಟಿ ಕೊಟ್ಟು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮತ್ತು ಇತರ ಅಧಿಕಾರಿಗಳ ಜತೆ ಸಭೆ ನಡೆಸಿದರು. ಇಂದಿರಾ ಕ್ಯಾಂಟೀನ್ ಹಾಗೂ ನಮ್ಮ ಕ್ಲಿನಿಕ್ ಬಗ್ಗೆ ಡಿ.ಕೆ.ಶಿವಕುಮಾರ್ ಹೆಚ್ಚಿನ ಮಾಹಿತಿ ಪಡೆದರು. ಅಷ್ಟೇ ಅಲ್ಲ, ಮಳೆ, ರಸ್ತೆಗುಂಡಿ, ಒತ್ತುವರಿ ತೆರವು, ಅಂಡರ್ಪಾಸ್ ನಿರ್ವಹಣೆ ಬಗ್ಗೆಯೂ ಮಾತನಾಡಿದರು. ಮಳೆಯಿಂದ ಹೆಚ್ಚಿನ ಹಾನಿಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟರು. ಅದರಲ್ಲೂ ಮಳೆಯಿಂದ ಯಾವಾಗಲೂ ಸಮಸ್ಯೆ ಆಗುವ ಸೂಕ್ಷ್ಮ ಪ್ರದೇಶಗಳ ಮೇಲೆ ಕಣ್ಣಿಡುವಂತೆ ತಿಳಿಸಿದರು.