ಬೆಂಗಳೂರು: ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕು (Karnataka Election) ಎಂಬ ಪ್ರಯತ್ನದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದ ಜತೆಗೇ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ವಿಚಾರದಲ್ಲೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸುತ್ತಿದೆ. ಅಳೆದು ತೂಗಿ ನಡೆಸುತ್ತಿರುವ ಈ ಪ್ರಕ್ರಿಯೆಯಲ್ಲಿ ಹಾಲಿ ಶಾಸಕರ ಪೈಕಿ ೮ರಿಂದ ೧೦ ಮಂದಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಕಂಡುಬಂದಿದೆ.
ಈ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಕಳೆದ ಹಲವು ತಿಂಗಳುಗಳಿಂದಲೇ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಿನ ಪ್ರಕಾರ, ೮ರಿಂದ ೧೦ ಶಾಸಕರಿಗೆ ಟಿಕೆಟ್ ಡೌಟ್ ಇದೆ ಎಂದು ಕಾಂಗ್ರೆಸ್ ಚುನಾವಣಾ ಸಮಿತಿ ಸದಸ್ಯರಾಗಿರುವ ಜಿ.ಸಿ ಚಂದ್ರಶೇಖರ್ ವಿಸ್ತಾರ ನ್ಯೂಸ್‌ಗೆ ಹೇಳಿದ್ದಾರೆ.
ಹಾಲಿ ಶಾಸಕರಿಗೆ ಸೋಲಿನ ಭೀತಿ
ಪ್ರತಿಯೊಬ್ಬ ಶಾಸಕರಿಗೂ ಆಡಳಿತ ವಿರೋಧಿ ಅಲೆಯ ಭೀತಿ ಇರುತ್ತದೆ. ಕೆಲವರಿಗೆ ಅದನ್ನು ಮೀರಿ ಗೆಲ್ಲುವ ಶಕ್ತಿ ಇರುತ್ತದೆ. ಆದರೆ, ಕೆಲವರಿಗೆ ಅದನ್ನು ಎದುರಿಸುವ ಶಕ್ತಿ ಇರುತ್ತದೆ. ಯಾರಿಗೆ ಶಕ್ತಿ ಇದೆ, ಯಾರಿಗಿಲ್ಲ ಎನ್ನುವ ಬಗ್ಗೆ ಕೆಲವು ತಿಂಗಳ ಹಿಂದೆಯೇ ಕಾಂಗ್ರೆಸ್ ಸಮೀಕ್ಷೆ ನಡೆಸಿತ್ತು. ಯಾರ ವಿರುದ್ಧ ಅಲೆ ಇದೆ ಎನ್ನುವುದನ್ನು ಗುರುತಿಸಿತ್ತು. ಸುಮಾರು ೨೦-೨೨ ಶಾಸಕರಿಗೆ ಆಡಳಿತ ವಿರೋಧ ಅಲೆ ಇರುವುದನ್ನು ಗಮನಿಸಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತು.
ʻʻನೀವು ನಿಮ್ಮ ಸಂಪರ್ಕವನ್ನು ಹೆಚ್ಚಿಸಬೇಕು. ನಿರಾಸಕ್ತಿಯನ್ನು ಬಿಟ್ಟು ಜನರ ವಿಶ್ವಾಸ ಗೆಲ್ಲಲು ಪ್ರಯತ್ನಿಸಬೇಕು. ಮೊದಲು ಪಕ್ಷದಲ್ಲಿರುವ ನಾಯಕರ ವಿಶ್ವಾಸ ಗಳಿಸಬೇಕು. ಜನರಲ್ಲಿ ನಂಬಿಕೆ ಮೂಡಿಸಬೇಕು. ಒಂದು ತಿಂಗಳ ಒಳಗೆ ನಿಮ್ಮ ನಿಮ್ಮ ಕ್ಷೇತ್ರವನ್ನು ಸರಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಟಿಕೆಟ್ ಸಿಗುವುದು ಡೌಟ್ʼʼ ಎಂದು ಸುಮಾರು ೨೨ಕ್ಕೂ ಹೆಚ್ಚು ಹಾಲಿ ಕಾಂಗ್ರೆಸ್ ಶಾಸಕರಿಗೆ ಎಚ್ಚರಿಕೆ ನೀಡಲಾಗಿತ್ತು.
ಒಂದು ತಿಂಗಳ ಒಳಗೆ ಕ್ಷೇತ್ರವನ್ನು ಸರಿ ಮಾಡಿಕೊಳ್ಳಬೇಕು. ಇಲ್ಲವಾದರೆ ಟಿಕೆಟ್ ಕೊಡಲಾಗುವುದಿಲ್ಲ ಎಂದು ಆಂತರಿಕ ಸಮೀಕ್ಷೆಯನ್ನು ಆಧರಿಸಿ ಎಚ್ಚರಿಕೆ ನೀಡಿದ ಬಳಿಕ ಸುಮಾರು ೧೨ ಶಾಸಕರು ತಮ್ಮ ತಮ್ಮ ಕ್ಷೇತ್ರದ ಅಲರ್ಟ್ ಆಗಿದ್ದಾರೆ. ತಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಗೆಲ್ಲುವ ಸಾಧ್ಯತೆಗಳನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.
೮-೧೦ ಮಂದಿಗೆ ಕಷ್ಟ
ಆದರೆ, ಇನ್ನೂ ೮ರಿಂದ ೧೦ ಮಂದಿಯ ಸುಧಾರಣೆ ಹೈಕಮಾಂಡ್‌ಗೆ ಅಷ್ಟೇನೂ ಹಿತಕಾರಿ ಅನಿಸಿಲ್ಲ. ಹೀಗಾಗಿ ಈ ಶಾಸಕರಿಗೆ ಇನ್ನೂ ಒಂದು ತಿಂಗಳ ಡೆಡ್‌ಲೈನ್ ನೀಡಲಾಗಿದೆ ಎನ್ನಲಾಗಿದೆ ಗೆಲುವಿನ ವಾತಾವರಣ ಸೃಷ್ಟಿ ಆಗಿಲ್ಲ ಎಂದರೆ ಟಿಕೆಟ್ ಇಲ್ಲ ಎಂದು ಖಡಕ್ ಎಚ್ಚರಿಕೆ ಕೊಡಲಾಗಿದೆ. ಮುಖ್ಯವಾಗಿ ಅಫಜಲಪುರ, ಪಾವಗಡ, ಕುಂದಗೋಳ ಶಾಸಕರಿಗೆ ಟಿಕೆಟ್ ಅನುಮಾನ ಎಂದು ಹೇಳಲಾಗುತ್ತಿದೆ.
ಗುರುವಾರವೂ ಚರ್ಚೆ ಎಂದ ಕಾಂಗ್ರೆಸ್ ಚುನಾವಣಾ ಸಮಿತಿ ಸದಸ್ಯರಾಗಿರುವ ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ್, ಬಹುತೇಕ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಲಾಗಿದೆ. ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿರುವುದು ಕಂಡುಬಂದಿದೆ. ಆದರೆ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತುಂಬಾ ಗಂಭೀರವಾಗಿರಬೇಕು ಎಂದು ಅಭಿಪ್ರಾಯಪಡಲಾಗಿದೆ. ಎಂದರು.
ಈಗಿನ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ೮೦ರಿಂದ ೯೦ ಸೀಟು ಅನಾಯಾಸವಾಗಿ ಗೆಲ್ಲಬಹುದು. ಆದರೆ, ಇನ್ನೂ ೩೦ರಿಂದ ೪೦ ಸ್ಥಾನಗಳು ಬೇಕಾಗಿವೆ. ಅವುಗಳನ್ನು ಗೆಲ್ಲಬೇಕು ಎಂದರೆ ಮಾಡಬೇಕಾಗಿರುವ ತಂತ್ರಗಳೇನು ಎನ್ನುವ ಚರ್ಚೆ ನಡೆಯುತ್ತಿದೆ. ಬಿಜೆಪಿ ಕೆಲವೊಂದು ನಾಯಕರನ್ನು ಆಪರೇಷನ್ ಕಮಲ ಮಾಡುವ ಅಪಾಯವಿದೆ. ಇಂಥ ಆಪರೇಷನ್ ಆಮಿಷಗಳಿಗೆ ಒಳಗಾಗದ ನಾಯಕರಿಗೇ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಇದೆ ಎಂದು ಜಿ.ಸಿ. ಚಂದ್ರಶೇಖರ್ ಹೇಳಿದರು. ಅಂತಿಮವಾಗಿ ಮೂರರಿಂದ ನಾಲ್ಕು ಮಂದಿಗೆ ಟಿಕೆಟ್ ಮಿಸ್ ಆಗೋ ಸಾಧ್ಯತೆ ಇದೆ ಎಂದು ಜೆ.ಸಿ. ಚಂದ್ರಶೇಖರ್ ಹೇಳಿದರು.
ಇದನ್ನೂ ಓದಿ | Congress Politics : ಕಾಂಗ್ರೆಸ್‌ನ 120 ಅಭ್ಯರ್ಥಿಗಳು ಫೈನಲ್: ಚುನಾವಣೆ ಸಮಿತಿ ಸಭೆಯಲ್ಲಿ ಅಸಮಾಧಾನದ ಹೊಗೆ