ಗದಗ: ಪಂಜಾಬ್ ವಿಧಾನಸಭೆ ಚುನಾವಣೆಯ ಗೆಲುವಿನ ಬಳಿಕ ಆಮ್ ಆದ್ಮಿ ಪಕ್ಷದ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ಹಾಗಾಗಿ, ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಆಪ್ ಭರ್ಜರಿ ಪ್ರಚಾರ ಕೈಗೊಳ್ಳುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಗದಗ ಜಿಲ್ಲೆ ರೋಣದಲ್ಲಿ ಆಪ್ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದೆ. ಹಾಗೆಯೇ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೂಡ ಭಾರಿ ರೋಡ್ ಶೋ ನಡೆಸಿದ್ದಾರೆ.
ರೋಣ ಆಪ್ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಅವರು ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ರೋಣದಲ್ಲಿ ಆಪ್ ಭರ್ಜರಿ ಶಕ್ತಿ ಪ್ರದರ್ಶನ ಮಾಡಿತು. ಪಟ್ಟಣದ ಶಿವಾನಂದ ಮಠದ ರಸ್ತೆಯಿಂದ ತಹಸೀಲ್ದಾರ್ ಕಚೇರಿವರೆಗೆ ಭಗವಂತ್ ಮಾನ್ ಹಾಗೂ ಅನೇಕಲ್ ದೊಡ್ಡಯ್ಯ ಅವರು ಬೃಹತ್ ರೋಡ್ ಶೋ ನಡೆಸಿದರು. ವಾದ್ಯ ಮೇಳದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇದಾದ ಬಳಿಕ ದೊಡ್ಡಯ್ಯ ಅವರು ನಾಮಪತ್ರ ಸಲ್ಲಿಸಿದರು.
ಹೀಗಿತ್ತು ಭರ್ಜರಿ ರೋಡ್ ಶೋ
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಭಗವಂತ್ ಮಾನ್, “ಜನರು ಆಮ್ ಆದ್ಮಿ ಪಕ್ಷವನ್ನು ಮೆಚ್ಚಿ, ಸ್ವಯಂ ಪ್ರೇರಿತರಾಗಿ ನಮ್ಮ ಕಡೆ ಬರುತ್ತಿದ್ದಾರೆ. ರೋಣ ಸೇರಿ ಈ ಭಾಗದಲ್ಲಿ ಶಿಕ್ಷಣ, ನೀರು, ರಸ್ತೆ ಸೇರಿ ಹಲವು ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಿಲ್ಲ. ಪಂಜಾಬ್ ಹಾಗೂ ದೆಹಲಿ ಮಾದರಿಯ ಆಡಳಿತ ನೀಡುವ ಗುರಿ ಇದೆ. ಹಾಗಾಗಿ, ಕರ್ನಾಟಕದಲ್ಲೂ ಆಪ್ ಖಾತೆ ತೆರೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ವ್ಯಕ್ತಿ ಹಾಗೂ ಸರ್ಕಾರವನ್ನು ಬದಲಾಯಿಸಿದರೆ ಮಾತ್ರ ಎಲ್ಲವೂ ಬದಲಾಗುತ್ತದೆ. ನಾವು ರಾಜ್ಯದಲ್ಲಿ ಈಗಾಗಲೇ ಜನರ ಮನಸ್ಸಿನಲ್ಲಿ ಖಾತೆ ತೆರೆದಿದ್ದೇವೆ. ಈ ಚುನಾವಣೆಯಲ್ಲಿ ಗೆಲುವಿನ ಖಾತೆಯನ್ನೂ ತೆರೆಯತ್ತೇವೆ. ಅಷ್ಟಕ್ಕೂ ಆಮ್ ಆದ್ಮಿ ಪಕ್ಷವು ಅತಿ ದೊಡ್ಡ ಮೂರ್ಖರ ಪಕ್ಷವಲ್ಲ. ಜನಸಾಮಾನ್ಯರನ್ನು ಒಳಗೊಂಡ ಪಕ್ಷ ಇದಾಗಿದೆ. ಸಾಮಾನ್ಯ ಶಾಸಕನಾಗಿದ್ದ ನನ್ನನ್ನು ಪಕ್ಷವು ಸಿಎಂ ಮಾಡಿದೆ. ಹಾಗಾಗಿಯೇ, ಜನ ನಮ್ಮನ್ನು ಬೆಂಬಲಿಸುತ್ತಿದ್ದಾರೆ” ಎಂದು ಹೇಳಿದರು.
ಕರ್ನಾಟಕದ ರಾಜಕಾರಣದ ಕುರಿತು ಮಾತನಾಡಿದ ಅವರು, “ಬಿಜೆಪಿಗೆ ಸ್ಪಷ್ಟ ಬಹುಮತ ಬರದಿದ್ದರೆ ಆಪರೇಷನ್ ಕಮಲ ಮಾಡುತ್ತಾರೆ. ಪಂಜಾಬ್ ಹಾಗೂ ದೆಹಲಿಯಲ್ಲಿ ಆಪರೇಷನ್ ಕಮಲಕ್ಕೆ ಯತ್ನಿಸಿದರು. ಆದರೆ, ಅದು ಆಗಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಬ್ಬರಿಗೊಬ್ಬರು ಶಾಮೀಲಾಗಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಎಲ್ಲಿಗೇ ಹೋದರು ಜಗಳ ಹಚ್ಚುವುದು, ದ್ವೇಷ ಹರಡುವಿಕೆ, ಕೀಳು ರಾಜಕಾರಣ ಮಾಡುತ್ತಾರೆ” ಎಂದು ಟೀಕಿಸಿದರು.
ಇದನ್ನೂ ಓದಿ: Karnataka Election: ಸೊರಬದಲ್ಲಿ ಪಕ್ಷೇತರರ ನಾಮಪತ್ರ ಸಲ್ಲಿಕೆ; ಎತ್ತಿನಗಾಡಿಯಲ್ಲಿ ಬಂದು ಗಮನ ಸೆಳೆದ ಜೆ.ಎಸ್. ಚಿದಾನಂದಗೌಡ