ಲಿಂಗಸುಗೂರು: ಕ್ಷೇತ್ರದಲ್ಲಿ ಉತ್ಸಾಹದಿಂದ ಸಂಘಟನೆ ಮಾಡುತ್ತಿದ್ದ ಆಮ್ ಆದ್ಮಿ ಪಕ್ಷದ (Aam Aadmi Party) ಅಭ್ಯರ್ಥಿ ಶಿವಪುತ್ರ ಗಾಣದಾಳ್ ನಾಮಪತ್ರ ವಾಪಸ್ (nomination withdrawal) ಪಡೆಯುವ ಮೂಲಕ ವಿಧಾನಸಭಾ ಚುನಾವಣಾ (Karnataka election 2023) ಕಣದಿಂದ ಹಿಂದೆ ಸರಿದಿದ್ದಾರೆ. ಇದರಿಂದ ಆಪ್ ಪಕ್ಷಕ್ಕೆ ಆರಂಭದಲ್ಲೇ ಹೊಡೆತ ಬಿದ್ದಂತಾಗಿದೆ.
ಚುನಾವಣಾ ಕಣದಲ್ಲಿ ಏಳು ಅಭ್ಯರ್ಥಿಗಳು
ನಾಮಪತ್ರ ವಾಪಸ್ (nomination withdrawal) ಪಡೆಯಲು ಸೋಮವಾರ ಕೊನೇ ದಿನವಾಗಿದ್ದರಿಂದ ಆಮ್ ಆದ್ಮಿ ಅಭ್ಯರ್ಥಿ ಶಿವಪುತ್ರ ಗಾಣದಾಳ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಚುನಾವಣಾ ಕಣದಲ್ಲಿ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್. ಹೂಲಗೇರಿ, ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್, ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ, ಬಿಎಸ್‌ಪಿ ಅಭ್ಯರ್ಥಿ ಅನಿಲ್ ಕುಮಾರ್, ಕೆಆರ್‌ಎಸ್ ಅಭ್ಯರ್ಥಿ ವಿಜಯಕುಮಾರ ಪೋಳ್, ಉತ್ತಮ ಪ್ರಜಾಕೀಯ ಅಭ್ಯರ್ಥಿ ನಾಗರಾಜ ಮೋತಿ, ಕೆಆರ್‌ಪಿಪಿ ಅಭ್ಯರ್ಥಿ ಆರ್.ರುದ್ರಯ್ಯ ಸೇರಿ ಒಟ್ಟು ಏಳು ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಇದನ್ನೂ ಓದಿ:Karnataka Election: ಕುಮಾರಸ್ವಾಮಿ ಸಿಎಂ ಆಗಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಮರು ಜಾರಿ ಮಾಡ್ತಾರೆ: ಸಿ.ಎಂ.ಇಬ್ರಾಹಿಂ
ಆಪ್ ಗೆ ಆರಂಭದಲ್ಲೇ ಹೊಡೆತ
ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾದ ನಂತರ ಎದುರಿಸುತ್ತಿರುವ ಮೊದಲ ಚುನಾವಣೆಯಾಗಿದೆ. ಯುವ ಹೋರಾಟಗಾರ ಶಿವಪುತ್ರ ಗಾಣದಾಳ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ಡರು. ಬಳಿಕ ಮಾರ್ಚ್ 20ರಂದು ಗಾಣದಾಳ್ ಅವರಿಗೆ ಟಿಕೆಟ್ ಘೋಷಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪ್ರತಿ ಹಳ್ಳಿಗಳಿಗೂ ತೆರಳಿ ಪ್ರಚಾರ ಮಾಡಿದ್ದರು. ಪಕ್ಷದ ಹಿರಿಯ ಮುಖಂಡರು ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದರು.
ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಉಂಟಾಗಿ ಗಾಣದಾಳ್ ಅವರಿಗೆ ಟಿಕೆಟ್ ತಪ್ಪಿಸುವ ಹುನ್ನಾರ ನಡೆದಿತ್ತು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದಂದು ಬಿ ಫಾರಂ ನೀಡಿದ್ದರು. ನಂತರ ನಾಮಪತ್ರ ಸಲ್ಲಿಸಿದರು. ಆದರೆ, ಸೋಮವಾರ ಏಕಾಏಕಿಯಾಗಿ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ. ಆ ಮೂಲಕ ಆಪ್‌ಗೆ ಆರಂಭದಲ್ಲಿಯೇ ಹೊಡೆತ ಬಿದ್ದಂತಾಗಿದೆ.