ಕಾರವಾರ: ಮುಂಬರುವ ವಿಧಾನಸಭೆ ಚುನಾವಣೆಗೆ (Karnataka Election 2023) ನೀತಿ ಸಂಹಿತೆ ಜಾರಿಯಾಗಲು ಕೆಲವೇ ದಿನಗಳು ಉಳಿದಿರುವುದರಿಂದ ಚುನಾವಣೆಗೆ ಸಂಬಂಧಿಸಿದ ಪೂರ್ವ ತಯಾರಿಯನ್ನು ಆದಷ್ಟು ಬೇಗ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.
ನಗರದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮೂರು ಹಂತದಲ್ಲಿ ತರಬೇತಿ ನೀಡಲಾಗುತ್ತದೆ. ತಾಲೂಕು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ನಡೆಯುತ್ತದೆ. ಉಳಿದ ಎರಡು ತರಬೇತಿಯು ಮತ ಕ್ಷೇತ್ರದ ಪ್ರಕಾರ ನಡೆಯುತ್ತದೆ ಎಂದರು.
ತರಬೇತಿಗೆ ಅಗತ್ಯವಿರುವ ಕೊಠಡಿಯನ್ನು ಪರಿಶೀಲಿಸಬೇಕು ಹಾಗೂ ತರಬೇತಿಯಲ್ಲಿ ಪಾಲ್ಗೊಳ್ಳುವ ತರಬೇತಿದಾರರಿಗೆ ಊಟೋಪಚಾರ, ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: Vijayanagar News: ಅಮೆರಿಕದ ಪುರಾತತ್ವಜ್ಞ ಜಾನ್ ಫ್ರಿಟ್ಜ್ ಅಸ್ಥಿ ಹಂಪಿಯಲ್ಲಿ ವಿಸರ್ಜನೆ; ನೆರವೇರಿತು ಕೊನೇ ಆಸೆ
ಮತಗಟ್ಟೆಗಳಿಗೆ ಬೇಕಾಗುವ ಪರಿಕರಗಳನ್ನು ಸಂಗ್ರಹಿಸಿಡುವ ಸುರಕ್ಷತೆ ನಿಟ್ಟಿನಲ್ಲಿ ಕ್ರಮ ಕೈಗೊಳುವಂತೆ ಹಾಗೂ ಚುನಾವಣೆ ಸಮಯದಲ್ಲಿ ಬೇಕಾಗುವ ವಾಹನಗಳನ್ನು ಮುಂಚಿತವಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಚುನಾವಣೆಗೆ ಸಂಬಂಧಿಸಿದ ಸಭೆ ಹಾಗೂ ಕಾರ್ಯಾಗಾರ ಮುಂತಾದವುಗಳ ಮಾಹಿತಿಯನ್ನು ಪ್ರಕಟಣೆಗೆ ನೀಡುವುದು ಮತ್ತು ಅವುಗಳನ್ನು ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ಮಾಡಿ, ಪ್ರಕಟಣೆಯಾದ ಸುದ್ದಿಗಳ ಪತ್ರಿಕಾ ತುಣುಕುಗಳನ್ನು ಸಂಗ್ರಹಿಸಿ ಇಡುವುದು. ಹಾಗೂ ವೆಬ್‌ಸೈಟ್ ಮತ್ತು ಅಂತರ್ಜಾಲದಲ್ಲಿ ಬರುವ ವಿಡಿಯೋ ತುಣುಕುಗಳನ್ನು ಸಂಗ್ರಹಿಸಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: PM Modi at Ahmedabad : ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನರೇಂದ್ರ ಮೋದಿ ಹವಾ, ತಪ್ಪಾಳೆ ತಟ್ಟಿ ಸಂಭ್ರಮಿಸಿದ ಅಭಿಮಾನಿಗಳು
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಲ್ಲಿ ಅಂಥವುಗಳನ್ನು ಪರಿಶೀಲನೆ ಮಾಡಿ ಅವುಗಳು ಯಾವ ಹಂತದಲ್ಲಿ ಇವೆ ಎಂಬುವುದನ್ನು ಗಮನಿಸಬೇಕು ಹಾಗೂ ಅಂತಹ ದೂರುಗಳಿಗೆ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆಗೆ ಸಂಬಂಧಿಸಿದ ಯಾವುದೇ ಗೊಂದಲವಿದ್ದಲ್ಲಿ ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಆ ಬಗ್ಗೆ ಕ್ರಮ ವಹಿಸಬೇಕು ಹಾಗೂ ಚುನಾವಣಾ ಆಯೋಗ ನೂತನ ಆದೇಶಗಳನ್ನು ಜಾರಿಗೆ ತರುತ್ತಿದ್ದು, ಅದನ್ನು ಅನುಸರಿಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.