ಬೆಂಗಳೂರು: ಮದ್ಯಪಾನ ಮುಕ್ತ ಚುನಾವಣೆಗೆ ಆಗ್ರಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಆಂದೋಲನ ಆರಂಭಿಸಿದೆ. ಚುನಾವಣೆ ಸಮೀಪಿಸಿದಾಗ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಸೀರೆ, ಕುಕ್ಕರ್, ಟಿವಿ ಕೊಟ್ಟು, ಪುರುಷರಿಗೆ ಹಣ ಹೆಂಡ ಕೊಡುವ ಮೂಲಕ ಆಮಿಷವೊಡ್ಡುತ್ತಾರೆ. ಹೀಗಾಗಿ ಇಂತಹ ಕೆಲಸಕ್ಕೆ ಎಲ್ಲ ಇತಿಶ್ರೀ ಹಾಡಬೇಕೆಂದು ಧರ್ಮಸ್ಥಳ ಮೂಲದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪಣತೊಟ್ಟಿದೆ.
ಕಳೆದ ಹಲವಾರು ವರ್ಷಗಳಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜನರಲ್ಲಿ ಅರಿವು ಮೂಡಿಸುತ್ತಾ ಬಂದಿದೆ. ಹೆಂಡ ಹಂಚದೆ, ಆಮಿಷಗಳಿಲ್ಲದೆ ಚುನಾವಣೆಯೇ ಇಲ್ಲ ಎಂಬ ಪರಿಸ್ಥಿತಿ ಉಂಟಾಗಿರುವ ವಾತಾವರಣವನ್ನು ಸರಿಪಡಿಸಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಪಾನಮುಕ್ತರಾಗಿರುವ ವ್ಯಕ್ತಿಗಳಿಂದಲೇ ಮದ್ಯಪಾನ ಮುಕ್ತ ಚುನಾವಣೆಯ ಆಂದೋಲನ ಮಾಡಲಾಗುತ್ತದೆ.
ಚುನಾವಣೆಗಾಗಿ ಪಕ್ಷಗಳು ಪ್ರಣಾಳಿಕೆ ನೀಡುವುದು ಮಾತ್ರವಲ್ಲ ಬದಲಾಗಿ, ಮದ್ಯ ಹಂಚುವುದಿಲ್ಲ, ಆಮಿಷ ಒಡ್ಡುವುದಿಲ್ಲ ಎಂಬ ತೀರ್ಮಾನಕ್ಕೆ ಬರಬೇಕು ಎಂದು ವೇದಿಕೆ ಸದಸ್ಯರು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ, ಪ್ರಜ್ಞಾವಂತ ನಾಗರಿಕರು ಯಾವುದೇ ಆಮಿಷಕ್ಕೆ ಬಲಿಯಾಗಿ ಮತ ಮಾರಿಕೊಳ್ಳುವುದುದು ಬೇಡ ಎಂದು ಕೋರಿದ್ದಾರೆ.
ಇದನ್ನೂ ಓದಿ: KS Eshwarappa : ಈಶ್ವರಪ್ಪ ಮನೆ ಮುಂದೆ ಹೈ ಡ್ರಾಮಾ, ನಿವೃತ್ತಿ ನಿರ್ಧಾರ ಹಿಂಪಡೆಯುವಂತೆ ಬೆಂಬಲಿಗರ ಆಗ್ರಹ
ರಾಜ್ಯಾದ್ಯಂತ ಮದ್ಯಪಾನ ಮುಕ್ತ ಆಂದೋಲನಕ್ಕಾಗಿ ಈಗಾಗಲೆ ಜಾಗೃತಿ ಸಮಿತಿ ರಚನೆ ಮಾಡಲಾಗಿದೆ. ಚುನಾವಣೆಗೆ 20 ದಿನ ಬಾಕಿಯಿರುವಾಗ ರಾಜ್ಯಾದ್ಯಂತ ಆಂದೋಲನ ಶುರು ಮಾಡಲಾಗುತ್ತದೆ. ಕಾವಲು ಸಮಿತಿಯಿಂದ ಈ ಬಗ್ಗೆ ತಯಾರಿ ನಡೆಸಲಾಗುತ್ತಿದ್ದು, ಚುನಾವಣಾ ಮತಗಟ್ಟೆಗಳ ಬಳಿ ಬ್ಯಾನರ್ ಕರಪತ್ರ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.