ಕಾರವಾರ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದು ಉತ್ತರ ಕನ್ನಡದ ಜಿಲ್ಲಾ ಕೇಂದ್ರ ಕಾರವಾರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ನಡುವೆ ಚುನಾವಣಾ ಕಣದಿಂದ ದೂರ ಉಳಿದಿದ್ದ ಆನಂದ್ ಅಸ್ನೋಟಿಕರ್, ಕಾರ್ಯಕರ್ತರು ಒಂದೊಮ್ಮೆ ಒಪ್ಪಿಗೆ ನೀಡಿದರೆ ಜೆಡಿಎಸ್‌ನಿಂದಲೇ ಕಣಕ್ಕೆ ಇಳಿಯುವೆ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಕಾರವಾರ-ಅಂಕೋಲಾ ಕ್ಷೇತ್ರದ ಈ ಬಾರಿಯ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಕ್ಷೇತ್ರ ಎಂದೇ ಕರೆಸಿಕೊಂಡಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎನ್ನಲಾಗಿತ್ತು. ಆದರೆ, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರೆ ಎನ್ನಲಾಗಿದ್ದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಎದುರಾಗಲಿದೆ ಎನ್ನಲಾಗಿತ್ತು.
ಸದ್ಯ ಆನಂದ್ ಅಸ್ನೋಟಿಕರ್ ಅವರಿಗೆ ಚುನಾವಣೆಗೆ ನಿಲ್ಲುವಂತೆ ಹಲವರು ಕ್ಷೇತ್ರದಲ್ಲಿ ಒತ್ತಡ ಹೇರಲು ಮುಂದಾದ ಹಿನ್ನೆಲೆಯಲ್ಲಿ ಮತ್ತೆ ಕಣಕ್ಕೆ ಇಳಿಯಲು ಆನಂದ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಜೆಡಿಎಸ್ ಪಕ್ಷದಿಂದಲೇ ಕಣಕ್ಕೆ ಇಳಿಯಲು ಚಿಂತನೆ ನಡೆಸಿದ್ದು ಕಾರ್ಯಕರ್ತರು ಒಪ್ಪಿಗೆ ನೀಡಿದರೆ ಮಾತ್ರ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Rahul Gandhi: ನಾನು ಖರ್ಗೆಯವರನ್ನು ಮುಟ್ಟಿದರೆ, ಸಿಂಬಳ ಒರೆಸಿದೆ ಎನ್ನುತ್ತಾರೆ ಎಂದ ರಾಹುಲ್ ಗಾಂಧಿ; ಸಂಸತ್ತಿಗೆ ಭೇಟಿ
ಈ ಹಿಂದೆ ಪಕ್ಷೇತರವಾಗಿ ಆನಂದ್ ಅಸ್ನೋಟಿಕರ್ ಕಣಕ್ಕೆ ಇಳಿಯಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ, ಕೊರೋನಾ ನಂತರ ವ್ಯವಹಾರದಲ್ಲಿ ಏರಿಳಿತವಾಗಿದ್ದು ಪಕ್ಷೇತರವಾಗಿ ಕಣಕ್ಕೆ ಇಳಿದರೆ ಎಲ್ಲ ಚುನಾವಣಾ ಹೊರೆ ತಮ್ಮ ಮೇಲೆ ಬೀಳುವುದರಿಂದ ಕಷ್ಟವಾಗಲಿದೆ ಎಂದು ಅಖಾಡಕ್ಕೆ ಇಳಿಯಲು ಆನಂದ್ ಹಿಂದೇಟು ಹಾಕಿದ್ದರು. ಪಕ್ಷೇತರವಾಗಿ ಕಣಕ್ಕೆ ಇಳಿದರೆ ಸಂಘ ಪರಿವಾರದ ಬೆಂಬಲ ತಮಗೆ ಸಿಗಲಿದೆ ಎನ್ನುವ ಹೇಳಿಕೆಯನ್ನು ಸಹ ಆನಂದ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಯಾರಿ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದರು. ಇದರ ನಡುವೆ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಮತ್ತೆ ಹಿಂದೇಟು ಹಾಕಿದ್ದರು. ಹೀಗಾಗಿ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಆ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವ ನಿರ್ಧಾರಕ್ಕೆ ಬಂದಿದ್ದರು.
ಇದನ್ನೂ ಓದಿ: KSP Recruitment : ಐದು ಸಾವಿರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಜುಲೈನಲ್ಲಿ ಲಿಖಿತ ಪರೀಕ್ಷೆ?
ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅವರ ಬೆಂಬಲಿಗರು ಚುನಾವಣಾ ಕಣದಿಂದ ಹಿಂದೆ ಸರಿಯದಂತೆ ಒತ್ತಡ ಹಾಕಿದ್ದಾರೆನ್ನಲಾಗಿದೆ. ಪಕ್ಷಾತೀತವಾಗಿ ಕೆಲ ನಾಯಕರು ಸ್ಪರ್ಧೆ ಮಾಡುವಂತೆ ಆನಂದ್ ಬಳಿ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಕ್ಷೇತ್ರದಲ್ಲಿ ಅಸ್ನೋಟಿಕರ್ ಕುಟುಂಬದ ಮತ ಹಾಗೂ ಹಲವು ಸಮುದಾಯದ ಬೆಂಬಲಿಗರ ಮತಗಳನ್ನು ಪಡೆಯುವ ಮೂಲಕ ಗೆಲ್ಲುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಅಖಾಡಕ್ಕೆ ಇಳಿಯುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಇದರ ನಡುವೆ ಆನಂದ್ ತಾವು ಪಕ್ಷೇತರವಾಗಿ ಕಣಕ್ಕೆ ಇಳಿದರೆ ಆರ್ಥಿಕ ಹೊರೆ ಹೆಚ್ಚಾಗಲಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್‌ನಿಂದಲೇ ಕಣಕ್ಕೆ ಇಳಿಯುವಂತೆ ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ನಿಂತರೆ ಹಾಲಕ್ಕಿ ಗೌಡ ಸೇರಿದಂತೆ ಹಲವು ಮತಗಳು ಬರಲಿದ್ದು, ಜೆಡಿಎಸ್‌ನಿಂದ ಕಣಕ್ಕೆ ಇಳಿಯಲು ಕಾರ್ಯಕರ್ತರು ಸಮ್ಮತಿ ಸೂಚಿಸಿದರೆ ಮಾತ್ರ ಕಣಕ್ಕೆ ಇಳಿಯಲಾಗುವುದು ಎಂದು ನಿರ್ಧಾರವನ್ನು ಪ್ರಕಟಿಸಿದ್ದಾರೆ ಎನ್ನಲಾಗಿದೆ.
ಮೂರು ಪಕ್ಷಗಳಲ್ಲಿ ಸಂಚರಿಸಿರುವ ಮಾಜಿ ಸಚಿವ
ವಸಂತ್ ಅಸ್ನೋಟಿಕರ್ ಜೋಯಿಡಾ-ಕಾರವಾರ ಕ್ಷೇತ್ರದ ಶಾಸಕರಾಗಿದ್ದರು. ಬಳಿಕ ಅವರ ಪುತ್ರ ಆನಂದ್ ಅಸ್ನೋಟಿಕರ್ 2008ರಲ್ಲಿ ಕಾಂಗ್ರೆಸ್ ಸೇರಿ ಸ್ಪರ್ಧೆ ಮಾಡಿ ಜಯ ಸಾಧಿಸಿದ್ದರು. ಆದರೆ, ಗೆದ್ದ ಒಂದೇ ತಿಂಗಳಿನಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಆಗ ಬಿಜೆಪಿಯಿಂದ ಸೇರಿ ಗೆದ್ದ ಬಳಿಕ ಮೀನುಗಾರಿಕಾ ಸಚಿವರಾಗಿದ್ದರು. ಇದಾದ ಬಳಿಕ 2013ರಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ ಮಾಡಿ ಕಾಂಗ್ರೆಸ್‌ನ ಸತೀಶ್ ಸೈಲ್ ಅವರಿಂದ ಸೋಲು ಕಂಡಿದ್ದರು. ಅಲ್ಲಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಅವರು ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು. 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದರಾದರೂ ಬಿಜೆಪಿಯ ರೂಪಾಲಿ ನಾಯ್ಕ ಜಯ ಸಾಧಿಸಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆ ಜೆಡಿಎಸ್‌ನಿಂದಲೂ ದೂರವಾಗಿದ್ದ ಆನಂದ್ ಅಸ್ನೋಟಿಕರ್ ಕಾಂಗ್ರೆಸ್ ಟಿಕೆಟ್‌ನತ್ತ ಕಣ್ಣಿಟ್ಟಿದ್ದರು ಎನ್ನಲಾಗಿದೆ. ಆದರೆ, ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದರು ಎನ್ನಲಾಗಿದ್ದ ಮಾಜಿ ಶಾಸಕ ಸತೀಶ್ ಸೈಲ್ ಅವರಿಗೆ ಈ ಬಾರಿಯ ಕೈ ಟಿಕೆಟ್ ಖಾತ್ರಿಯಾಗುತ್ತದೆ ಎಂಬ ಮಾಹಿತಿ ದೊರೆತಿದ್ದರಿಂದ ಅವರು ಈಗಾಗಲೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದರಿಂದ ಅಸ್ನೋಟಿಕರ್ ಈಗ ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Urigowda Nanjegowda : ನಿರ್ಮಲಾನಂದನಾಥ ಶ್ರೀಗಳ ವಿರುದ್ಧ ಅಡ್ಡ ಮಾತು: ಕ್ಷಮೆ ಯಾಚಿಸಿದ ಅಡ್ಡಂಡ ಕಾರ್ಯಪ್ಪ