ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಮತದಾನಕ್ಕೆ (polling day) ಇನ್ನು ಎರಡು ದಿನವಷ್ಟೇ ಬಾಕಿ ಇದೆ. ಚುನಾವಣಾ ಕಾರ್ಯಗಳಿಗೆ ಸರ್ಕಾರಿ ಹಾಗೂ ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಮೇ 9-10ರಂದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಓಲಾ, ಉಬರ್ ಕ್ಯಾಬ್‌ಗಳ (Ola, Uber Cab) ಸೇವೆಯಲ್ಲೂ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರಲ್ಲಿ ಈ ಬಾರಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚು ಮಾಡಲು ಬಿಬಿಎಂಪಿ ಹಾಗೂ ಚುನಾವಣಾ ಆಯೋಗ ಭರ್ಜರಿಯಾಗಿ ಸಿದ್ಧತೆ ಮಾಡಿಕೊಂಡಿದೆ. ವಯೋವೃದ್ಧ ಹಾಗೂ ವಿಶೇಷ ಚೇತನ ಮತದಾರರು ಚುನಾವಣೆ ದಿನ ಮತಗಟ್ಟೆ ಕೇಂದ್ರಕ್ಕೆ ತಲುಪಲು ಕ್ಯಾಬ್ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದೆ.
ಈಗಾಗಲೇ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಕರ್ತವ್ಯಕ್ಕೆ ಒಂದಷ್ಟು ಕ್ಯಾಬ್‌ಗಳು ಬುಕ್ ಆಗಿವೆ. ಚುನಾವಣೆ ಕೆಲಸಗಳಿಗೆ ಕ್ಯಾಬ್ ಬಳಕೆ ಮಾಡಿಕೊಳ್ಳುತ್ತಿರುವುದರಿಂದ, ಜನಸಾಮಾನ್ಯರಿಗೆ ಕ್ಯಾಬ್ ಅಭಾವ ಉಂಟಾಗುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ ಕೋವಿಡ್ ಬಳಿಕ ಕ್ಯಾಬ್‌ಗಳ ಲಭ್ಯತೆ ಕಡಿಮೆ ಇರುವುದರಿಂದ ಚುನಾವಣೆ ವೇಳೆ ಸಿಟಿ ಜನರಿಗೆ ಓಲಾ, ಉಬರ್ ಕ್ಯಾಬ್ ಸಿಗುವುದು ಅನುಮಾನವಾಗಿದೆ. ಎಲೆಕ್ಷನ್ ದಿನ ಸಾರಿಗೆ ಬಸ್‌ಗಳು ಸೇರಿದಂತೆ ಕ್ಯಾಬ್‌ಗಳು ಚುನಾವಣಾ ಕರ್ತವ್ಯದಲ್ಲಿ ಕಾರ್ಯನಿರ್ವಹಿಸುವುದರಿಂದ ಜನರಿಗೆ ಕೊಂಚ ಮಟ್ಟಿಗೆ ಮಂಡೆ ಬಿಸಿ ಆಗಲಿದೆ.
ಮೇ 9-10ರಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವ್ಯತ್ಯಯ; ಇದು ಎಲೆಕ್ಷನ್ ಎಫೆಕ್ಟ್
ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ (Karnataka Election 2023) ಮೇ 10 ರಂದು ಮತದಾನ (polling day) ನಡೆಯಲಿದೆ. ಚುನಾವಣೆ ಸಲುವಾಗಿ ಹೆಚ್ಚಿನ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿ ಮೇ 9 ಮತ್ತು 10ರಂದು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರು ಸಹಕರಿಸಲು ಮತ್ತು ಅದಕ್ಕನುಗುಣವಾಗಿ ಜನರು ಪ್ರಯಾಣವನ್ನು ಯೋಜಿಸಲು ಮನವಿ ಮಾಡಿದೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ನಿಗಮ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ನಿಗಮದಲ್ಲಿ ಒಟ್ಟು 8,100 ಕೆಎಸ್‌ಆರ್‌ಟಿಸಿ ಬಸ್ಗಳಿದ್ದು, ಈ ಪೈಕಿ 3,700 ಬಸ್‌ಗಳು ಚುನಾವಣಾ ಕೆಲಸಕ್ಕೆ ಮೀಸಲಿವೆ.
ಇದನ್ನೂ ಓದಿ: Karnataka Election 2023 : ಪುಷ್ಪಗಳ ಹಾಸಿನ ಮೇಲೆ ಮೋದಿ ರೋಡ್ ಶೋ ; ಅರಳಿತೇ ಕಮಲ?
ಮೇ 9 ಮತ್ತು 10 ರಂದು 4,400 ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಸಂಚಾರ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆ ಎರಡು ದಿನಗಳ ಕಾಲ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.