ಬೆಂಗಳೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆ ಅಭ್ಯರ್ಥಿಗಳ ಪ್ರಚಾರ (Election Campaign) ಕಾರ್ಯ ರಂಗೇರಿದೆ. ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ, ರ‍್ಯಾಲಿಗಳನ್ನು ಶುರು ಮಾಡಿಕೊಂಡಿದ್ದಾರೆ. ಇತ್ತ ಎಲೆಕ್ಷನ್ ಕಾವು ಹೆಚ್ಚಾಗುತ್ತಿದ್ದರೆ, ಅತ್ತ ಹೊಸ ಮನೆ ನಿರ್ಮಾಣ, ಕಟ್ಟಡಗಳನ್ನು ಕಟ್ಟಿಸುತ್ತಿರುವವರಿಗೆ (Construction work) ಸಂಕಷ್ಟ ಎದುರಾಗಿದೆ. ಏಕೆಂದರೆ ಕಾರ್ಮಿಕರು (Labourers) ಹಣದಾಸೆಗೆ ಕೆಲಸ ಕಾರ್ಯ ಬಿಟ್ಟು ಎಲೆಕ್ಷನ್ ಕ್ಯಾಂಪೆನ್‌ನಲ್ಲಿ ಸಕ್ರಿಯರಾಗಿದ್ದಾರೆ.
ಪ್ರತಿ ಕ್ಷೇತ್ರದಲ್ಲೂ ಅಭ್ಯರ್ಥಿಗಳ ಪರ ಕ್ಯಾಂಪೇನ್ಗಳು ಜೋರಾಗಿ ನಡೆಯುತ್ತಿದ್ದು, ಕೂಲಿ ಕಾರ್ಮಿಕರು ತಮ್ಮ ಪ್ರತಿನಿತ್ಯದ ಕಾಯಕ ಮರೆತು ಕ್ಯಾಂಪೇನ್ಗೆ ಹಾಜರಾಗುತ್ತಿದ್ದಾರೆ. ಅದರಲ್ಲೂ ಕಟ್ಟಡ ಕಾರ್ಮಿಕರು, ಗಾರೆ ಕೆಲಸದವರು ಕೆಲಸಕ್ಕೆ ಬಾರದೇ ಕ್ಯಾಂಪೇನ್ಗಳತ್ತ ಮುಖ ಮಾಡುತ್ತಿದ್ದಾರೆ.
ಬೆಂಗಳೂರಲ್ಲಿ ಗಾರೆ ಕೆಲಸಕ್ಕೆ ಕೂಲಿ ಕಾರ್ಮಿಕರು ಸಿಗುವುದೇ ಕಷ್ಟವಾಗಿದೆ. ದೂರದೂರುಗಳಿಂದ ಗಾರೆ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರೂ ಕೂಡ ಈಗ ರಾಜಕೀಯ ಪ್ರಚಾರಕ್ಕೆ ಇಳಿದು ಬಿಟ್ಟಿದ್ದಾರೆ. ಹೀಗಾಗಿ ಮನೆ ಕಟ್ಟಿಸುತ್ತಿರುವ ಮಾಲೀಕರಿಗೆ ತಲೆ ಬಿಸಿಯಾಗಿದೆ. ಮೇಸ್ತ್ರಿಗೆ ದುಡ್ಡು ಕೊಟ್ಟು ಕೆಲಸಕ್ಕೆ ಕಾರ್ಮಿಕರು ಬರುತ್ತಾರೆ ಎಂದು ಕಾಯುತ್ತಿದ್ದ ಮಾಲೀಕರು, ಈಗ ಕೂಲಿ ಕಾರ್ಮಿಕರು ಕೆಲಸಕ್ಕೆ ಬಾರದೆ ಇರುವುದು ಕಂಗಾಲಾಗಿದ್ದಾರೆ.
ಕಟ್ಟಡ ಕಾರ್ಮಿಕರಿಗೆ ತಮ್ಮ ಕೆಲಸದಲ್ಲಿ ಸಿಗುವ ಹಣಕ್ಕಿಂತ, ಕ್ಯಾಂಪೇನ್ನಲ್ಲಿ ಹೆಚ್ಚಿನ ಹಣ ಸಿಗುತ್ತದೆ. ಕಷ್ಟಪಟ್ಟು ಕೆಲಸ ಮಾಡಲು ಇಷ್ಟಪಡದ ಕೆಲ ಕಾರ್ಮಿಕರು, ಸುಲಭವಾಗಿ ಹಣ ಸಿಗುವ ಹಾದಿ ಇದು ಎಂದು ರಾಜಕೀಯ ಪ್ರಚಾರ, ರ‍್ಯಾಲಿಗಳತ್ತ ಮುಖ ಮಾಡುತ್ತಿದ್ದಾರೆ. ಎಲೆಕ್ಷನ್ ಮುಗಿಯುವರೆಗೂ ಅಲ್ಪ ಸ್ವಲ್ಪ ಹಣ ಮಾಡಿಕೊಳ್ಳುವ ಎಂದು ಸದ್ಯಕ್ಕೆ ವೃತ್ತಿ ಕೆಲಸಕ್ಕೆ ಬ್ರೇಕ್ ಹಾಕಿ ರಾಜಕೀಯ ಪ್ರಚಾರಕ್ಕೆ ತೆರಳುತ್ತಿದ್ದಾರೆ.