Site icon Vistara News

Karnataka Election | ಮತದಾರರ ಸೆಳೆಯಲು ಅಭ್ಯರ್ಥಿಗಳ ಕಸರತ್ತು; ಭರಪೂರ ಉಡುಗೊರೆಗೆ ಈಗಿಂದಲೇ ಒತ್ತು!

karnataka election 2023

ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) 7 ತಿಂಗಳು ಬಾಕಿ ಇರುವಾಗಲೇ ಶಾಸಕರು, ಟಿಕೆಟ್‌ ಆಕಾಂಕ್ಷಿಗಳು ಅಖಾಡಕ್ಕೆ ಇಳಿದಿದ್ದಾರೆ. ಮತದಾರರನ್ನು ಸೆಳೆಯಲು ಬಗೆಬಗೆಯ ಉಡುಗೊರೆಯನ್ನು ಕೊಡುತ್ತಿದ್ದಾರೆ. ಸೀರೆ, ಟಿಫಿನ್‌ ಬಾಕ್ಸ್‌, ಕನ್ನಡಕ, ಗಾಡ್ರೇಜ್‌ ಹೀಗೆ ನಾನಾ ತರಹದ ಗಿಫ್ಟ್‌ಗಳನ್ನು ಮತದಾರರಿಗೆ ಹಂಚುತ್ತಿದ್ದಾರೆ. ಆ ಮೂಲಕ ಮತದಾರರನ್ನು ಓಲೈಸಿಕೊಳ್ಳುವ ಕಸರತ್ತಿನಲ್ಲಿ ತೊಡಗಿದ್ದಾರೆ. ಮತದಾರರೂ ಕೂಡ ಸಿಕ್ಕಿದ್ದೇ ಚಾನ್ಸ್‌ ಎಂದು ಬಂದಿದ್ದನ್ನೆಲ್ಲ ಬಾಚಿಕೊಳ್ಳುತ್ತಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸದಾ ಸದ್ದು ಮಾಡುತ್ತಾ, ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನೂ ಹೊಂದಿರುವ ಬೆಳಗಾವಿಯಲ್ಲಿ ಚುನಾವಣೆ ಚುರುಕುಕೊಂಡಿದೆ. ಚುನಾವಣೆಗೆ ಏಳು ತಿಂಗಳು ಬಾಕಿ ಇರುವಾಗಲೇ, ಎಲ್ಲ ಪಕ್ಷಗಳ ಹಾಲಿ ಶಾಸಕರು, ಟಿಕೆಟ್‌ ಆಕಾಂಕ್ಷಿಗಳು ಚುನಾವಣೆ ಅಖಾಡಕ್ಕೆ ಧುಮಕಿದ್ದಾರೆ.

ಮತದಾರರನ್ನು ಸೆಳೆಯಲು ಕಾಂಗ್ರೆಸ್‌-ಬಿಜೆಪಿಯ ನಾಯಕರು ಹಠಕ್ಕೆ ಬಿದ್ದಂತೆ ನಾನಾ ತರಹದ ಗಿಫ್ಟ್‌ಗಳನ್ನು ಹಂಚುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್‌, ಅಂಜಲಿ ನಿಂಬಾಳ್ಕರ್‌ ಚುನಾವಣೆ ಸಮಯದಲ್ಲಿ ಅರಿಶಿಣ-ಕುಂಕುಮ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಮಹಿಳೆಯರನ್ನು ಆಹ್ವಾನಿಸಿ ಅರಿಶಿಣ-ಕುಂಕುಮ ಜತೆಗೆ ಟಿಫಿನ್‌ ಬಾಕ್ಸ್‌ಗಳನ್ನು ಹಂಚುತ್ತಿದ್ದಾರೆ. ಆ ಮೂಲಕ ಮಹಿಳಾ ಮತದಾರರನ್ನು ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ.

ಇನ್ನು ಖಾನಾಪುರ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಡಾ.ಸೋನಾಲಿ ಸರನೋಬಾತ್‌, ಕನ್ನಡಕ ವಿತರಣೆ ಮಾಡುತ್ತಿದ್ದರೆ, ದಿಲೀಪ್‌ ಕುಮಾರ್‌ ಸೀರೆ, ಅರಿಶಿಣ-ಕುಂಕುಮ ಇರುವ ಕಿಟ್‌ಗಳನ್ನು ಮತದಾರರಿಗೆ ನೀಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಸದಸ್ಯೆ ಆಯಿಶಾ ಸನದಿ, ನಾವು ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ ಜನರಿಗೆ ಬೇಕಾದ ವಸ್ತುಗಳನ್ನು ಮೊದಲಿನಿಂದಲೂ ಕೊಡುತ್ತಿದ್ದೇವೆ. ಬಿಜೆಪಿಯವರ ರೀತಿ ಶೇ. ೪೦ರಷ್ಟು ಕಮಿಷನ್‌ ಹೊಡೆದು ಜನರಿಗೆ ಗಿಫ್ಟ್‌ ಕೊಡುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಸವದತ್ತಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ವಿಶ್ವಾಸ ವೈದ್ಯ ಕೂಡ ವಧುವಿಗೆ ಬೇಕಾದ ಗಾಡ್ರೇಜ್‌, ಬಾಂಡೆಗಳಿರುವ ಕಿಟ್‌ ಹಂಚುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ವಿಶ್ವಾಸ ವೈದ್ಯ, ಈ ಬಾರಿ ಶತಾಯಗತಾಯವಾಗಿ ಚುನಾವಣೆಯಲ್ಲಿ ಗೆಲ್ಲಲು ಕಸರತ್ತು ಆರಂಭಿಸಿದ್ದಾರೆ. ಬಿಜೆಪಿ ಶಾಸಕ ಅಭಯ್‌ ಪಾಟೀಲ ಹಾಗೂ ಅನಿಲ್‌ ಬೆನಕೆ ಕೂಡ ಯುವ ಸಮೂಹ, ಅವರ ಪೋಷಕರನ್ನು ಟಾರ್ಗೆಟ್‌ ಮಾಡಿದ್ದಾರೆ.

ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಅನುಕೂಲವಾಗುವ ಪುಸ್ತಕಗಳನ್ನು ಸಿದ್ಧಪಡಿಸಿ ನಗರದ ಎಲ್ಲ ಪಿಯು ವಿದ್ಯಾರ್ಥಿಗಳಿಗೆ ಹಂಚುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಸಂಜಯ್‌ ಪಾಟೀಲ, ಗ್ರಾಮೀಣ ಭಾಗದಲ್ಲಿ ಮತದಾರರ ಓಲೈಕೆಗೆ ಟಿಫಿನ್ ಬಾಕ್ಸ್ ಹಂಚುತ್ತಿರುವುದು ಗಮನಕ್ಕೆ ಬಂದಿದೆ. ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಆಗಬೇಕು. ಮತವನ್ನು ಯಾರೂ ಮಾರಾಟ ಮಾಡಬಾರದು” ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಶಾಸಕರ ಪುಸ್ತಕ ಹಂಚಿಕೆಯನ್ನು ಸಮರ್ಥಿಸಿಕೊಂಡಿರುವ ಸಂಜಯ್‌, ನಾವೇನು ಸಾರಾಯಿ ಹಂಚುತ್ತಿಲ್ಲವಲ್ಲ? ಜ್ಞಾನದ ವೃದ್ಧಿಗೆ ಪುಸ್ತಕ ಹಂಚಿಕೆ ಮಾಡುತ್ತಿದ್ದೇವೆ. ಅದು ಬಡವರ ಮಕ್ಕಳ ಕಲಿಕೆಗೆ ಪುಸ್ತಕ ಅನುಕೂಲ ಆಗಲಿದೆ” ಎಂದರು.

ಇದನ್ನೂ ಓದಿ | ಪರೇಶ್‌ ಮೇಸ್ತಾ ಕೊಲೆ ಪ್ರಧಾನ ಆರೋಪಿಗೆ ವಕ್ಫ್‌ ಬೋರ್ಡ್‌ ಉಪಾಧ್ಯಕ್ಷ ಸ್ಥಾನ: ಬಿಜೆಪಿ ಎಡವಟ್ಟಿಗೆ ಎಲ್ಲೆಡೆ ತರಾಟೆ

Exit mobile version