ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ವಿಧಾನಸಭಾ ಚುನಾವಣಾ (Karnataka Election 2023) ಅಖಾಡ ರಂಗೇರುತ್ತಿದೆ. ರಾಜಕೀಯ ಪಕ್ಷಗಳ ನಾಯಕರು ಮತದಾರರ ಮತಬೇಟೆಗೆ ಮುಂದಾಗಿದ್ದಾರೆ. ಮತದಾರರಿಗೆ ಕುಕ್ಕರ್, ಸೀರೆ, ನಗದು ಹೀಗೆ ನಾನಾ ಆಮಿಷ ಒಡ್ಡುತ್ತಿದ್ದಾರೆ. ರಾಜಕೀಯ ನಾಯಕರಿಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ (Badal Nanjundaswamy) ತಮ್ಮ ಕಲೆಯ ಮೂಲಕವೇ ನೀತಿ ಪಾಠ ಹೇಳಿದ್ದಾರೆ.
ಈ ಹಿಂದೆ ಕೊರೊನಾ ಕಾಲದಲ್ಲಿ ಚಿತ್ರಗಳ ಮೂಲಕ ಅರಿವಿನ ಸಂದೇಶ ಸಾರಿದ್ದ ಕಲಾವಿದ ಬಾದಲ್ ನಂಜುಂಡಸ್ವಾಮಿ, ಬಳಿಕ ರಸ್ತೆಗುಂಡಿಗಳ ಕರಾಳ ಮುಖವನ್ನು ಚಿತ್ರಗಳ ಮೂಲಕವೇ ಎತ್ತಿತೋರಿಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಇದೀಗ ಚುನಾವಣೆ ಅಬ್ಬರದಲ್ಲಿ ಮತದಾರರು ಮತ ಹಾಕಲು ಯಾವುದೇ ಆಮೀಷಕ್ಕೆ ಒಳಗಾಗದಂತೆ ಚಿತ್ರದ ಮೂಲಕವೇ ಅರಿವು ಮೂಡಿಸಲು ಮುಂದಾಗಿದ್ದಾರೆ.
ಯಲಹಂಕದ ಬಳಿ ಗೋಡೆಗಳ ಮೇಲೆ ಮತದಾನದ ಸಂದೇಶ ಸಾರುವ ಚಿತ್ರ ಬಿಡಿಸಿರುವ ಬಾದಲ್ ನಂಜುಂಡಸ್ವಾಮಿ, ಕುಕ್ಕರ್ ಪಡೆದು ಮತ ಹಾಕಬೇಡಿ ಎಂದು ಸಂದೇಶ ನೀಡುತ್ತಿದ್ದಾರೆ. ಅಲ್ಲದೆ, ಗೋಡೆ ಮೇಲೆ ಕುಕ್ಕರ್ ಚಿತ್ರ ಬಿಡಿಸಿ ಅದರ ಮೇಲೆ ವೋಟ್ ಸೆನ್ಸಿಬಲಿ (VOTE SENSIBLY) ಎಂಬ ಅಡಿವಾಕ್ಯ ಬರೆಯುವ ಮೂಲಕ ಆಮಿಷಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: Theft Case: ಜೋಡಿ ಕೊಲೆ ಮಾಡಿದಾತ ಈಗ ಕುಖ್ಯಾತ ಕಳ್ಳ; ಮಗುವನ್ನು ಹೆಗಲಲ್ಲಿಟ್ಟಿಕೊಂಡು ಮನೆಗಳ್ಳತನ ಮಾಡುತ್ತಿದ್ದವಳ ಸೆರೆ
ಸದ್ಯ ಚುನಾವಣಾ ಆಯೋಗ ಕೂಡ ಮತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಇದರ ಮಧ್ಯೆ ಕಲಾವಿದರು, ಕೆಲ ಸಾರ್ವಜನಿಕರು ಕೂಡ ಈ ರೀತಿಯ ಕೆಲಸಗಳ ಮೂಲಕ ಮತದಾನದ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.