ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಹಾಕುತ್ತಿದ್ದಾರೆ. ಆದರೆ, ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಎಲ್ಲ ಪೋಸ್ಟರ್‌ಗಳನ್ನು ತೆರವು ಮಾಡಲಾಗುತ್ತಿದೆ. ಹೀಗೆ ತೆರವು ಮಾಡಲು ಬಂದ ಬಿಬಿಎಂಪಿ ಸಿಬ್ಬಂದಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ. ಇಲ್ಲಿನ ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಆಕಾಂಕ್ಷಿ ಉಮಾಪತಿ ಶ್ರೀನಿವಾಸ ಗೌಡ ಅಭ್ಯರ್ಥಿ ಪೋಸ್ಟರ್ (Poster War) ಅನ್ನು ಕಿತ್ತು ಹಾಕಿದ್ದಕ್ಕೆ ಕೈ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಬಿಬಿಎಂಪಿ ಸಿಬ್ಬಂದಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಉಮಾಪತಿ ಶ್ರೀನಿವಾಸ ಗೌಡರಿಗೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಹಲವು ಕಡೆಗಳಲ್ಲಿ ಗೋಡೆ ಮೇಲೆ ಅಂಟಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಸೂಚನೆಯಂತೆ ಪೋಸ್ಟರ್ ತೆರವು ಮಾಡಲು ಮುಂದಾಗಿದ್ದರು. ಆದರೆ, ಬಿಬಿಎಂಪಿ ಸಿಬ್ಬಂದಿ ತಡರಾತ್ರಿ ಬಿಜೆಪಿ ಪೋಸ್ಟರ್ ಬಿಟ್ಟು ಕೇವಲ ಕಾಂಗ್ರೆಸ್ ಪೋಸ್ಟ್ ಅನ್ನು ಮಾತ್ರ ಕಿತ್ತು ಹಾಕಿದ್ದಾರೆ.
ಹೀಗಾಗಿ ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ಬಿಬಿಎಂಪಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಪಕ್ಷದ ಪೋಸ್ಟರ್ ತೆರವು ಮಾಡದೆ ಕೇವಲ ಕಾಂಗ್ರೆಸ್ ಪಕ್ಷದ ಪೋಸ್ಟರ್ ಅನ್ನು ಮಾತ್ರ ತೆರವು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯ ಪೋಸ್ಟರ್ ಪಕ್ಕದಲ್ಲಿ ಸತೀಶ್ ರೆಡ್ಡಿ ಅವರ ಪೋಸ್ಟರ್‌ಗಳಿದ್ದರೂ ತೆಗೆದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದ ಲಕ್ಷ್ಮಿ ಲೇಔಟ್, ಎಚ್ಎಸ್ಆರ್ ಬಡಾವಣೆ, ಅಗರ ಗ್ರಾಮ, ಬನ್ನೇರುಘಟ್ಟ ರಸ್ತೆಗಳಲ್ಲಿ ಹಾಕಿದ್ದ ಪೋಸ್ಟರ್‌ಗಳನ್ನು ತೆರವು ಮಾಡಲಾಗಿದೆ. ತೆರವು ಮಾಡುವುದಾದರೆ ಎರಡು ಪಕ್ಷದ ಬ್ಯಾನರ್ ಹಾಗೂ ಪೋಸ್ಟರ್ ತೆಗೆಯಬೇಕು. ಆದರೆ ಇಲ್ಲಿ ಬಿಬಿಎಂಪಿ ಸಿಬ್ಬಂದಿ ಹಣದಾಸೆಗೆ ಬಿದ್ದು ಕೇವಲ ಕಾಂಗ್ರೆಸ್ ಪೋಸ್ಟರ್ ಮಾತ್ರ ತೆರವು ಮಾಡಿದ್ದಕ್ಕೆ ಸಿಟ್ಟಿ ಆಗಿದ್ದಾರೆ.
ಇದನ್ನೂ ಓದಿ: Viral Video: ತರಗತಿಯಲ್ಲೇ ವಿದ್ಯಾರ್ಥಿಗಳ ಹೊಡಿಬಡಿ; ನಗರ ಪೊಲೀಸರಿಗೆ ಟ್ಯಾಗ್ ಮಾಡಿದ ವಿಡಿಯೊ ವೈರಲ್
ಅವಾಚ್ಯ ಪದಗಳಿಂದ ನಿಂದನೆ
ಎಚ್ಎಸ್ಆರ್ ಲೇಔಟ್‌ನಲ್ಲಿ ಬಿಬಿಎಂಪಿ ಸಿಬ್ಬಂದಿ ತಮ್ಮ ಕುಟುಂಬ ಸದಸ್ಯರನ್ನು ಕರೆತಂದು ಹೀಗೆ ಕಾಂಗ್ರೆಸ್ ಪೋಸ್ಟರ್ ಮಾತ್ರ ತೆರವು ಮಾಡಿದ ಬಗ್ಗೆ ಎಇಇ ರಾಮೇಗೌಡರನ್ನು ಪ್ರಶ್ನಿಸಿದಾಗ ಕಾರ್ಯಕರ್ತರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕೈ ಕಾರ್ಯಕರ್ತರು ಪಾಲಿಕೆಯ ಎಇಇ ರಾಮೇಗೌಡರಿಗೆ ತರಾಟೆ ತೆಗೆದುಕೊಂಡಿದ್ದಾರೆ.