ಬಳ್ಳಾರಿ: ಸಂವಿಧಾನ ಉಳಿವಿಗಾಗಿ ಪ್ರಸಕ್ತ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ (Karnataka election 2023) ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಕಾರ್ಯದರ್ಶಿ ಸಾಥಿ ಸುಂದರೇಶ್ ಹೇಳಿದರು.
ನಗರದ ಮರ್ಚೇಡ್ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರಕ್ಕೆ ಮಿತಿಯೇ ಇಲ್ಲದಂತಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ, ಸ್ವತಃ ಮುಖ್ಯಮಂತ್ರಿ ಗಳೇ ಕೋಮುವಾದಿಗಳಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Karnataka Election 2023 : ಬಿಜೆಪಿ ಪರವಾಗಿ ದರ್ಶನ್ ಪ್ರಚಾರ; ಪಕ್ಷ ಸೇರಿದರೇ ಡಿ ಬಾಸ್?
ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲದಿರುವಾಗಲೇ ಸರ್ಕಾರ ರಾಜ್ಯದಲ್ಲಿ ಅದನ್ನು ಅನುಷ್ಠಾನ ಮಾಡಿ ವಿದ್ಯಾರ್ಥಿಗಳ ನಡುವೆ ಗೊಂದಲವನ್ನು ಉಂಟುಮಾಡಿದೆ ಎಂದರು.
ಕಣ್ಮುಚ್ಚಿ ಕುಳಿತ ಬಿಜೆಪಿ ಸರ್ಕಾರ
ಮಹಿಳೆಯರ ಮತ್ತು ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದರೂ ಬಿಜೆಪಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ರಾಜ್ಯದ ನೆಲ, ಜಲವನ್ನು ಕಾರ್ಪೊರೇಟ್ ಕಂಪನಿಗಳಿಗೆ ದಾನ ಮಾಡಲು ಹೊರಟಿದೆ. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸದ, ಭ್ರಷ್ಚಾಚಾರದಿಂದ ಕೂಡಿದ ಮತೀಯವಾದಿ ಆರ್ ಎಸ್ಎಸ್ ಹಾಗೂ ಬಿಜೆಪಿ ತೊಲಗಬೇಕಿದೆ ಎಂದು ತಿಳಿಸಿದರು.
7 ಕ್ಷೇತ್ರಗಳಲ್ಲಿ ಸಿಪಿಐ ಸ್ಪರ್ಧೆ
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಏಳು ಕ್ಷೇತ್ರಗಳಲ್ಲಿ ಸಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ 215 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಐ ಬೆಂಬಲ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಎಚ್.ವಿ. ಆದಿಮೂರ್ತಿ, ಸಂತೋಷ, ಕೆ.ನಾಗಭೂಷಣ ರಾವ್, ಕಟ್ಟೆಬಸಪ್ಪ, ಬೊಯಪಾಟಿ ವಿಷ್ಣು ಹಾಗೂ ಇತರರಿದ್ದರು.