ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಕಣಕ್ಕೆ ಇಳಿದಿರುವ ಅಭ್ಯರ್ಥಿಗಳು ತಮ್ಮ ಮೇಲಿರುವ ಕೇಸ್ ಹಿಸ್ಟರಿಯನ್ನು (Police case revil) ರಿವೀಲ್ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಅನ್ವಯ ಅಭ್ಯರ್ಥಿಗಳು ತಮ್ಮ ಮೇಲಿನ ಪೊಲೀಸ್ ಪ್ರಕರಣಗಳನ್ನು ಪ್ರಕಟಿಸಬೇಕಿದ್ದು, ಅದೀಗ ಲಭ್ಯವಾಗಿದೆ.
ಖುದ್ದು ಸ್ವಯಂ ಘೋಷಣೆ ಮಾಡಿಕೊಂಡ ಅಭ್ಯರ್ಥಿಗಳ ಕೇಸ್‌ಗಳ ವಿವರ ಲಭ್ಯವಾಗಿದ್ದು, ಯಾವ ಯಾವ ಅಭ್ಯರ್ಥಿಗಳ ಮೇಲೆ ಏನೆಲ್ಲ ಪೊಲೀಸ್ ಪ್ರಕರಣಗಳು ದಾಖಲಾಗಿವೆ ಎಂಬುದುರ ಮಾಹಿತಿ ಇಲ್ಲಿದೆ. ಮಾಜಿ ಸಚಿವ, ಹಾಲಿ ಶಾಸಕ ರಾಮಲಿಂಗಾ ರೆಡ್ಡಿ ಮತ್ತು ಪುತ್ರಿ ಕಂ ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ 11 ಕೇಸ್‌ಗಳು ದಾಖಲಾಗಿದೆ. ಅಪ್ಪನಿಗಿಂತ ಮಗಳ ಮೇಲೆಯೇ ಹೆಚ್ಚು ಪೊಲೀಸ್ ಕೇಸ್‌ಗಳು ದಾಖಲಾಗಿದೆ.
ಸೌಮ್ಯ ರೆಡ್ಡಿ, ಜಯನಗರ ಕ್ಷೇತ್ರ (ಕಾಂಗ್ರೆಸ್)
2018ರಲ್ಲಿ1 ಪ್ರಕರಣ ದಾಖಲಾಗಿದ್ದು, 4ನೇ ಎಸಿಎಎಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿಯಿದೆ. 2022ರಲ್ಲಿ 3 ಪ್ರಕರಣಗಳು ದಾಖಲಾಗಿದೆ. ಪಿಎಸ್ಐ ಹಗರಣ ಸಂಬಂಧ ಪ್ರತಿಭಟನೆ ವೇಳೆ ದಾಖಲಾದ ಪ್ರಕರಣವೊಂದು, ಸರ್ಕಾರದ ವಿರುದ್ಧದ ನಡೆದ ಪ್ರತಿಭಟನೆ, ಮೇಕೆದಾಟು ಪ್ರತಿಭಟನೆ ವೇಳೆ ಪೊಲೀಸ್ ಕೇಸ್ ಆಗಿದೆ. 2023ರಲ್ಲಿ ಕ್ರಿಮಿನಲ್ ಮೊಕದ್ದಮೆ, ಪ್ರತಿಭಟನೆ ಹಿನ್ನೆಲೆ ಕೇಸ್ ದಾಖಲಾಗಿದೆ.
ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್ (ಕಾಂಗ್ರೆಸ್)
ಕಾಂಗ್ರೆಸ್‌ನ ಬಿಟಿಎಂ ಲೇಔಟ್ ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ, ಶಾಸಕ ರಾಮಲಿಂಗಾರೆಡ್ಡಿ ವಿರುದ್ಧ 5 ಪ್ರಕರಣಗಳು ದಾಖಲಾಗಿದೆ. 2022 ಒಟ್ಟು 4 ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮೇಕೆದಾಟು ಪ್ರತಿಭಟನೆ ಸಂಬಂಧ 2 ಕೇಸ್‌ಗಳು, ಬೆಂಗಳೂರಿನಲ್ಲಿ ಎನ್‌ಡಿಎಂಎ (NDMA) ಕಾಯ್ದೆ ಅಡಿ ಕೇಸ್, ಪಿಎಸ್ಐ ಸ್ಕ್ಯಾಮ್ ವಿರುದ್ಧ ನಡೆಸಿದ ಪ್ರತಿಭಟನೆ ವಿರುದ್ಧ ಕೇಸ್ ದಾಖಲಾಗಿದೆ.
ಬೈರತಿ ಬಸವರಾಜ್- ಕೆ.ಆರ್.ಪುರಂ ಕ್ಷೇತ್ರ (ಬಿಜೆಪಿ)
ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಮೇಲೆ ಲೋಕಾಯುಕ್ತದಲ್ಲಿ ಮೂರು ಪ್ರಕರಣಗಳು ತನಿಖಾ ಹಂತದಲ್ಲಿ ಇದೆ. ವಂಚನೆ ಪ್ರಕರಣ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ಬಾಕಿ ಇದ್ದು, ಡಿಕ್ಲರೇಷನ್ ಆಫ್ ಡ್ಯೂಟಿ ಸಂಬಂಧ 2 ಕೇಸ್ ದಾಖಲಾಗಿದೆ.
ಎಂ.ಟಿ.ಬಿ ನಾಗರಾಜು- ಹೊಸಕೋಟೆ ಕ್ಷೇತ್ರ (ಬಿಜೆಪಿ)
ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನಾಗರಾಜು (ಎಂ.ಟಿ.ಬಿ) ವಿರುದ್ಧ 2004ರಲ್ಲಿ ವಿಧಾನಸಭಾ ಚುನಾವಣೆ ವೇಳೆ ನಡೆದಿದ್ದ ಗಲಭೆ ಪ್ರಕರಣ ಇದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ಸಿ.ಕೆ.ರಾಮಮೂರ್ತಿ- ಜಯನಗರ ಕ್ಷೇತ್ರ (ಬಿಜೆಪಿ)
ಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಿ.ಕೆ.ರಾಮಮೂರ್ತಿ ಮೇಲೆ ಮೂರು ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಮಾನಹಾನಿ ಪ್ರಕರಣ ಹಾಗೂ 2023ರಲ್ಲಿ ಅತಿಕ್ರಮ ಪ್ರವೇಶ ಪ್ರಕರಣ ಸೇರಿ ಸುಳ್ಳು ದಾಖಲಾತಿ ಮತ್ತು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿರುವುದಕ್ಕೆ ದೂರು ದಾಖಲಾಗಿದೆ.
ಎಸ್.ಕೇಶವ ಮೂರ್ತಿ- ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ(ಕಾಂಗ್ರೆಸ್)
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಕೇಶವ ಮೂರ್ತಿ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.