Site icon Vistara News

Karnataka Election 2023 : ನೀರು ಕೊಟ್ಟ ಎಂ.ಬಿ.ಪಾಟೀಲರಿಗೆ ನಾಮಪತ್ರ ಸಲ್ಲಿಸಲು 50 ಸಾವಿರ ರೂ. ಕೊಡಲು ಮುಂದಾದ ಮಹಿಳೆ

#image_title

ವಿಜಯಪುರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ದಿನಗಣನೆ ಆರಂಭವಾಗಿದೆ. 10ನೇ ತಾರೀಕಿನಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆ ಕಾಂಗ್ರೆಸ್‌ ನಾಯಕ ಎಂ.ಬಿ.ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸುವುದಕ್ಕೆ ಸಹಾಯವಾಗಲಿ ಎಂದು ಹಣ ನೀಡುವುದಕ್ಕೆ ವೃದ್ಧೆಯೊಬ್ಬರು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: ನಾನು ಲಿಂಗಾಯತ ಪ್ರಚಾರ ಸಮಿತಿ ಅಧ್ಯಕ್ಷನಲ್ಲ ಎಂದ ಎಂ.ಬಿ.ಪಾಟೀಲ್

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿಯ ಎಲ್‌.ಟಿ.2ರ ವೃದ್ಧೆ ಪುತಲಿಬಾಯಿ ರಾಮು ರಾಠೋಡ(65) ಅವರು ಎಂ.ಬಿ.ಪಾಟೀಲ್‌ ಅವರಿಗೆ 50 ಸಾವಿರ ರೂ. ನೀಡುವುದಕ್ಕೆ ಮುಂದಾಗಿದ್ದಾರೆ. ಪಾಟೀಲ ಅವರು ನೀರಾವರಿ ಸೌಲಭ್ಯ ಒದಗಿಸಿ, ಜನ ಗುಳೆ ಹೋಗುವುದನ್ನು ತಪ್ಪಿಸಿದ್ದಾರೆ ಎನ್ನುವ ಕಾರಣದಿಂದಾಗಿ ವೃದ್ಧೆ ಅಭಿಮಾನದಿಂದ ಈ ಹಣವನ್ನು ನೀಡುತ್ತಿರುವುದಾಗಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುತಲಿಬಾಯಿ ರಾಮು ರಾಠೋಡ, “ನಾನು ಮದುವೆಯಾಗಿ ಗಂಡನ ಮನೆಗೆ ಬಂದಾಗಿನಿಂದಲೂ ಸ್ವಂತ ಹೊಲವಿದ್ದರೂ ನೀರು ಇರದ ಕಾರಣ ದೇಶಾಂತರ(ಗುಳೆ) ಹೋಗುತ್ತಿದ್ದೆವು. ನಾಲ್ಕು ಎಕರೆ ಜಮೀನಿತ್ತಾದರೂ, ಕೇವಲ ಒಣ ಬೇಸಾಯದಿಂದಾಗಿ ಬೆಳೆ ಬಾರದೇ ಸಂಕಷ್ಟ ಎದುರಿಸುತ್ತಿದ್ದೆವು. ಇದರಿಂದಾಗಿ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗುತ್ತಿತ್ತಯ. ಕೂಲಿ ಹುಡುಕಿಕೊಂಡು ಕುಟುಂಬಸ್ಥರೆಲ್ಲರೂ ಮಹಾರಾಷ್ಟ್ರ ಮತ್ತಿತರ ಕಡೆ ದುಡಿಯಲು ಹೋಗುತ್ತಿದ್ದೆವು. ಆದರೆ, ಎಂ.ಬಿ.ಪಾಟೀಲ ಸಾಹೇಬರು ನಮಗೆ ನೀರಾವರಿ ಮಾಡಿ ಕೊಟ್ಟಿದ್ದರಿಂದ ಈಗ ಹೊಲಗಳಿಗೆ ನೀರು ಪೂರೈಕೆಯಾಗುತ್ತಿದೆ. ನಮ್ಮ ಪಾಲಿಗೆ ಈಗ ಉಳಿದಿರುವ ಒಂದು ಎಕರೆ ಜಮೀನಿನಲ್ಲಿ ಕಾಯಿಪಲ್ಲೆ, ಜೋಳ ಬೆಳೆಯುತ್ತಿದ್ದೇವೆ. ಈಗ ನಾವೆಲ್ಲರೂ ತಾಂಡಾದಲ್ಲಿಯೇ ಬಂಧುಗಳೊಂದಿಗೆ ಇದ್ದುಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮ್ಮ ಸಂಸಾರ ಸುಧಾರಿಸಲು ಎಂ.ಬಿ.ಪಾಟೀಲರೇ ಕಾರಣ” ಎಂದು ತಿಳಿಸಿದರು.


“ನನ್ನ ಹಿರಿಯ ಮಗ ರಾಜು ರಾಮು ರಾಠೋಡ, ಎರಡನೇ ಮಗ ಪಿಂಟು ರಾಮು ರಾಠೋಡ ಮತ್ತು ನಾಲ್ಕನೆ ಮಗ ಲಿಂಗಪ್ಪ ರಾಮು ರಾಠೋಡ ಹೊಲದಲ್ಲಿ ಕೃಷಿ ಮಾಡುತ್ತಿದ್ದಾರೆ. ಮೂರನೇ ಮಗ ಕಟೀಲ ರಾಠೋಡ ಕುರಿಗಾಯಿಯಾಗಿದ್ದಾನೆ. ತಾಂಡಾ ಬಿಟ್ಟು ದೇಶಾಂತರ ಹೋಗುತ್ತಿದ್ದ ನಮಗೆ ಈಗ ನಮ್ಮ ತಾಂಡಾದಲ್ಲಿಯೇ ಎಲ್ಲರೊಂದಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸಲು ಎಂ.ಬಿ.ಪಾಟೀಲರ ನೀರಾವರಿ ಯೋಜನೆಗಳು ಶಾಶ್ವತ ಪರಿಹಾರ ಒದಗಿಸಿವೆ. ನಮಗೆ ಉಪಕಾರ ಮಾಡಿದ ನಾಯಕನಿಗೆ ಚುನಾವಣೆ ಸಂದರ್ಭದಲ್ಲಿ ನಮ್ಮದೂ ಅಳಿಲು ಸೇವೆ ಇರಲಿ ಎಂದು ನಿರ್ಧರಿಸಿ ನಾಮಪತ್ರ ಸಲ್ಲಿಕೆ ಮತ್ತು ಚುನಾವಣೆ ಖರ್ಚಿಗಾಗಿ ರೂ. 50 ಸಾವಿರ ಹಣ ನೀಡಲು ನಿರ್ಧರಿಸಿದ್ದೇನೆ. ಇದು ನಾನು ದುಡಿದು ಗಳಿಸಿದ ಹಣ. ಮಕ್ಕಳಿಂದಲೂ ಹಣ ಪಡೆದಿಲ್ಲ. ನನ್ನ ತೀರ್ಮಾನಕ್ಕೆ ಮಕ್ಕಳು ಸಹಮತ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಿ ಹಣವನ್ನು ನೀಡುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಮನೆಯಲ್ಲಿ ಕೋಟಿ ರೂ. ಮೌಲ್ಯದ ವಸ್ತುಗಳ ಕದ್ದಿದ್ದವ ಅರೆಸ್ಟ್
ತಾಯಿಯ ನಿರ್ಧಾರದ ಕುರಿತು ಸಂತಸ ವ್ಯಕ್ತಪಡಿಸಿರುವ ಪುತ್ರ ಲಿಂಗಪ್ಪ ರಾಮು ರಾಠೋಡ, “ಭೂಮಿ ತಾಯಿಗೆ ನೀರು ಸಿಕ್ಕಿದೆ. ಇದರಿಂದ ನನ್ನ ತಾಯಿ ಖುಷಿಯಾಗಿದ್ದಾರೆ. ಭೂಮಿ ತಾಯಿ ಮತ್ತು ನನ್ನ ತಾಯಿ ಸಂಸತದಿಂದ ಇರಲು ಕಾರಣರಾದ ಎಂ.ಬಿ.ಪಾಟೀಲರಿಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ. ಹೀಗಾಗಿ ತಾಯಿಯೊಂದಿಗೆ ಎಂ.ಬಿ.ಪಾಟೀಲರನ್ನು ಶೀಘ್ರದಲ್ಲಿ ಭೇಟಿಯಾಗಿ ಹಣ ನೀಡಲಿದ್ದೇವೆ” ಎಂದು ತಿಳಿಸಿದರು.

Exit mobile version