Site icon Vistara News

Karnataka Election 2023: ಮನೆಯಿಂದಲೇ ಮತದಾನ ಮಾಡಿದ್ದ ವೃದ್ಧ; ಫಲಿತಾಂಶಕ್ಕೂ ಮುನ್ನವೇ ಮೃತ್ಯು

voter ಗುರುರಾಜ್ ಭಟ್

ಗುರುರಾಜ್ ಭಟ್

ಉಡುಪಿ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election) ದಿನಗಣನೆ ಆರಂಭವಾಗಿದೆ. ಈಗಾಗಲೇ 80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರಿಗೆಂದು ಮತದಾನ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಹೀಗೆ ಮನೆಯಿಂದಲೇ ಮತದಾನ ಮಾಡಿದ್ದ ವೃದ್ಧರೊಬ್ಬರು ಫಲಿತಾಂಶಕ್ಕೂ ಮೊದಲೇ ಮೃತಪಟ್ಟಿದ್ದಾರೆ.

ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ನಿವಾಸಿ ಗುರುರಾಜ್ ಭಟ್ (94) ಮೃತ ದುರ್ದೈವಿ. ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ಬರಲಿದ್ದು, ಎರಡು ದಿನಗಳ ಹಿಂದೆಯಷ್ಟೆ ವಿಧಾನಸಭಾ ಚುನಾವಣೆಗಾಗಿ ನಿವೃತ್ತ ಶಿಕ್ಷಕರಾಗಿದ್ದ ಗುರುರಾಜ್‌ ಭಟ್‌ ಮನೆಯಿಂದಲೇ ಮತ ಚಲಾಯಿಸಿದ್ದರು.

ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಲು ಗುರುರಾಜ್ ಭಟ್ ಅವರಿಗೆ ಅಸಾಧ್ಯವಾಗಿತ್ತು. ಹೀಗಾಗಿ ಮನೆಯಲ್ಲಿಯೇ ಮತದಾನ ಮಾಡಲು ಜಿಲ್ಲಾ ಚುನಾವಣಾ ಆಯೋಗ ಅವಕಾಶ ಮಾಡಿತ್ತು. ಮತ ಚಲಾಯಿಸಿದ ಎರಡು ದಿನಗಳ ಬಳಿಕ ಗುರುರಾಜ್ ಭಟ್ ವಯೋಸಹಜದಿಂದ ಮೃತಪಟ್ಟಿದ್ದಾರೆ.

ಮೇ 6ರವರೆಗೆ ಮನೆಯಿಂದಲೇ ವೋಟಿಂಗ್‌ಗೆ ಅವಕಾಶ

ರಾಜ್ಯದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ದಾಟಿದ ಹಿರಿಯ ಮತದಾರರು ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣೆ (Karnataka Election 2023) ಆಯೋಗ ಅವಕಾಶ ಮಾಡಿಕೊಟ್ಟಿದೆ. ಏಪ್ರಿಲ್‌ 29ರಿಂದ ಮೇ 6ರವರೆಗೆ ಮನೆಯಿಂದಲೇ ಮತದಾನ ಮಾಡಬಹುದಾಗಿದೆ.

ಚುನಾವಣೆ ಅಧಿಕಾರಿಗಳು ಮತದಾರರ ಮನೆಗೆ ಹೋಗಿ ಬ್ಯಾಲೆಟ್ ಪೇಪರ್‌ನಲ್ಲಿ ಮತ ಹಾಕಿಸಿಕೊಳ್ಳುತ್ತಿದ್ದಾರೆ. ಮೂರೂ ಪಕ್ಷಗಳ ಏಜೆಂಟ್‌ಗಳೊಂದಿಗೆ ಚುನಾವಣೆ ಅಧಿಕಾರಿಗಳು ಮತದಾರರ ಮನೆಗೆ ತೆರಳಿ, ಅವರ ಸಮ್ಮುಖದಲ್ಲಿಯೇ ಮತ ಹಾಕಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Karnataka Election : ಕಿಚ್ಚ ಸುದೀಪ್‌ ಫ್ಯಾನ್ಸ್‌ ಮೇಲೆ ಹಿಗ್ಗಾಮುಗ್ಗಾ ಲಾಠಿಪ್ರಹಾರ

ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 80 ವರ್ಷ ದಾಟಿದ 12,15,920 ಮತದಾರರಿದ್ದಾರೆ. ಇವರಲ್ಲಿ ಪುರುಷರು 5,46,487 ಇದ್ದರೆ, ಮಹಿಳೆಯರ ಸಂಖ್ಯೆ 6,69,417 ಇದೆ. ಆದರೆ, 80 ಸಾವಿರಕ್ಕೂ ಅಧಿಕ ಜನ ಮಾತ್ರ ಮನೆಯಿಂದಲೇ ಮತದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೇ 6ರ ಸಂಜೆ 6 ಗಂಟೆವರೆಗೆ ಹಿರಿಯ ಮತದಾರರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಬಹುದಾಗಿದೆ.

Exit mobile version