Site icon Vistara News

Karnataka Election 2023: ಎಲೆಕ್ಷನ್‌ನಲ್ಲಿ ಹೂವಿನ ಹಾರಗಳ ಕಲೆಕ್ಷನ್‌; ಹತ್ತಾರು ಅಡಿಯ ಹೂವಿನ ಹಾರಕ್ಕೆ ಡಿಮ್ಯಾಂಡ್

kr market

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು 9 ದಿನಗಳು ಮಾತ್ರ ಬಾಕಿಯಿದೆ. ಅಭ್ಯರ್ಥಿಗಳು ಜನರ ಮನ ಗೆಲ್ಲುವ ಸಲುವಾಗಿ ನಾನಾ ಕಸರತ್ತು ಮಾಡುತ್ತಿದ್ದಾರೆ. ರ‍್ಯಾಲಿ, ಸಮಾವೇಶ ನಡೆಸಿ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಈ ನಡುವೆ ಬೃಹತ್‌ ಗಾತ್ರದ ವಿಶೇಷ ಹೂವಿನ ಹಾರಗಳಿಗೆ (Customized floral necklace) ಬೇಡಿಕೆ ಹೆಚ್ಚಿದೆ.

ಕೊರೊನಾ ಬಳಿಕ‌ ತಕ್ಕಮಟ್ಟಿಗೆ ಚೇತರಿಕೆ ಕಂಡಿದ್ದ ಹೂ ವ್ಯಾಪಾರ ಇದೀಗ ಚುನಾವಣೆ ಹಿನ್ನೆಲೆಯಲ್ಲಿ ದುಪ್ಪಟ್ಟಾಗಿದೆ. ಮಾರುಕಟ್ಟೆಯಲ್ಲಿ ಹೂವಿನ ಹಾರಗಳಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಚುನಾವಣೆ ನೆಪದಲ್ಲಿ ಹೂವಿನ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ.

ಬೆಂಗಳೂರಿನ ಸಿಟಿ ಮಾರ್ಕೆಟ್‌ನ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಹಾರಕ್ಕೆ ಬೇಡಿಕೆ ಬಂದಿದೆ. ಬಹಿರಂಗ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಕ್ಕ ಬೆನ್ನಲ್ಲೇ ಹಾರಕ್ಕೆ ಪ್ರತಿ ದಿನ ಬೇಡಿಕೆ ಬರುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಬಗೆ ಬಗೆಯ ಹಾರಗಳಿಗೆ ಆರ್ಡರ್ ಕೊಡುತ್ತಿದ್ದಾರೆ.

10, 15, 20 ಅಡಿ ಎತ್ತರದ ಕಸ್ಟಮೈಸ್ಡ್ ಹಾರಗಳಿಗೆ (Customized floral necklace) ಆರ್ಡರ್ ನೀಡಲಾಗುತ್ತಿದೆ. 15 ಅಡಿ ಎತ್ತರದ ಹೂವಿನ ಹಾರವನ್ನು 15 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ 170 ರಿಂದ 200 ಹೂವಿನ ಹಾರಗಳು ಕೆ.ಆರ್‌. ಮಾರ್ಕೆಟ್‌ನಲ್ಲಿ ವ್ಯಾಪಾರವಾಗುತ್ತಿದೆ. ಉಳಿದಂತೆ ಗುಲಾಬಿ ಹಾರ, ಚೆಂಡು ಹೂವಿನ ಹಾರ, ಮಲ್ಲಿಗೆ ಹಾರ ಹೀಗೆ ಬಗೆಬಗೆಯ ಹಾರಗಳು ಮಾರುಕಟ್ಟೆಯಲ್ಲಿದೆ. ಇಂತಹ ಹೂವಿನ ಹಾರಗಳಿಗೆ 3 ಸಾವಿರದಿಂದ‌ 15 ಸಾವಿರ ರೂಪಾಯಿವರೆಗೂ ದರ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: Karnataka Election 2023: ಕಾಂಗ್ರೆಸ್, ಜೆಡಿಎಸ್‌ಗೆ ಕರ್ನಾಟಕ ಎಟಿಎಂ; ಬಿಜೆಪಿಗೆ ಅಭಿವೃದ್ಧಿ ಮುಖ್ಯ ಎಂದ ಪ್ರಧಾನಿ ಮೋದಿ

ಒಂದೆಡೆ ವ್ಯಾಪಾರಿಗಳಿಗೆ ಸಂತಸ ತಂದಿದ್ದರೆ, ಮತ್ತೊಂದೆಡೆ ಪೂಜೆ, ಮನೆಯ ಸಮಾರಂಭಗಳಿಗೆ ಹೂವಿನ ಹಾರ ಖರೀದಿಗೆ ಬರುವ ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಚುನಾವಣೆ ನೆಪದಲ್ಲಾದರೂ ವ್ಯಾಪಾರ ಕೊಂಚ ಚೇತರಿಕೆ ಕಂಡಿರುವುದು ಹೂವಿನ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಗಿದೆ.

Exit mobile version