ಬೆಂಗಳೂರು: ಮತದಾರರಿಗೆ ಚುನಾವಣೆಯ ಕುರಿತು ದೂರು ನೀಡಲು ಸಹಾಯಕವಾಗಬೇಕಿದ್ದ ಆ್ಯಪ್ ವಿರುದ್ಧವೇ ಇದೀಗ ದೂರುಗಳು ಕೇಳಿಬಂದಿದೆ. ರಾಜ್ಯದಲ್ಲಿ ಈಗಾಗಲೇ ವಿಧಾನಸಭಾ ಚುನಾವಣಾ (Karnataka Election 2023) ಅಬ್ಬರ ಜೋರಾಗಿದೆ. ಮತದಾರರಿಗೆ ಸಹಕಾರಿಯಾಗಲಿ ಎಂದು ಬಿಡುಗಡೆ ಮಾಡಿದ್ದ ಸಿ-ವಿಜಿಲ್ (c VIGIL) ಆ್ಯಪ್ ವಿರುದ್ಧ ಅಸಮಾಧಾನದ ಕೂಗು ಕೇಳಿ ಬರುತ್ತಿದೆ.
2023ರ ಚುನಾವಣೆ ವೇಳೆ ಚುನಾವಣಾ ಸಂಬಂಧಿತ ದೂರುಗಳನ್ನು ನೀಡಲೆಂದು ಚುನಾವಣಾ ಆಯೋಗ ಸಿ-ವಿಜಿಲ್ ಎಂಬ ಆ್ಯಪ್ ಪರಿಚಯಿಸಿತ್ತು. ಎಲ್ಲೇ ಚುನಾವಣಾ ಅಕ್ರಮಗಳು ನಡೆದರೂ ಸಾರ್ವಜನಿಕರು ದೂರು ನೀಡಲು ಈ ಆ್ಯಪ್ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈ ಆ್ಯಪ್ನಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳ ಆಯ್ಕೆ ಇದೆ, ಆದರೆ ಕನ್ನಡ ಭಾಷೆ ನೀಡದೇ ಇರುವುದು ಕಂಡು ಬಂದಿದೆ.
ಆ್ಯಪ್ನಲ್ಲಿ ದೂರು ನೀಡಲು ಎಲ್ಲ ಭಾಷೆಯಲ್ಲಿಯೂ ಅವಕಾಶ ಕೊಡಲಾಗಿದೆ. ಆದರೆ ಕನ್ನಡ ಭಾಷೆ ಆಯ್ಕೆಯನ್ನು ನೀಡದೆ ಇರುವುದು ಯಾವ ನ್ಯಾಯ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಚುನಾವಣಾ ಆಯೋಗ ಆದಷ್ಟು ಬೇಗ ಕನ್ನಡ ಭಾಷೆಯನ್ನೂ ಸೇರಿಸುವಂತೆ ಮನವಿಗಳು ಬಂದಿವೆ.
ಎಲ್ಲೆಡೆ ಚುನಾವಣಾ ಕಾವು ಹೆಚ್ಚಾಗಿರುವ ಬೆನ್ನಲ್ಲೆ, ಸಿ-ವಿಜಿಲ್ ಆ್ಯಪ್ನಲ್ಲೂ ಕನ್ನಡ ಇರಲಿ ಎಂಬ ಕೂಗು ಕೇಳಿ ಬರುತ್ತಿದೆ. ಹಿಂದಿ, ಇಂಗ್ಲಿಷ್, ತೆಲುಗು, ತಮಿಳು ಹೀಗೆ ಎಲ್ಲ ಭಾಷೆ ಇದ್ದರೂ, ಕನ್ನಡ ಇಲ್ಲದಿರುವುದು ಕನ್ನಡಿಗರಿಗೆ ಬೇಸರ ತಂದಿದೆ. ಸದ್ಯ ಚುನಾವಣಾ ಆಯೋಗಕ್ಕೆ ಕನ್ನಡಪರ ಸಂಘಟನೆಗಳು ಮನವಿ ಸಲ್ಲಿಸಿದೆ.