ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಯಶವಂತಪುರದ ಆರ್‌ಟಿಒ ಅಧಿಕಾರಿಗಳು ಶುಕ್ರವಾರ ಏಕಾಏಕಿ ಫೀಲ್ಡಿಗಿಳಿದು ವಾಹನಗಳ ತಪಾಸಣೆ ನಡೆಸಿದರು. ವಿಶೇಷ ಕಾರ್ಯಾಚರಣೆ ನಡೆಸಿದ ಆರ್‌ಟಿಒ ಅಧಿಕಾರಿಗಳು, ಯಶವಂತಪುರ ಸರ್ಕಲ್ ಹಾಗು ಗೊರಗುಂಟೆಪಾಳ್ಯದಲ್ಲಿ 50ಕ್ಕೂ ಹೆಚ್ಚು ವಾಹನಗಳ ತಪಾಸಣೆ ನಡೆಸಿದರು.
ಆಟೋ, ಕಾರು, ಕೆಎಸ್‌ಆರ್‌ಟಿಸಿ ಹಾಗು ಖಾಸಗಿ ಬಸ್‌ಗಳು ಮಾತ್ರವಲ್ಲದೇ ಪೊಲೀಸರ ವಾಹನಗಳನ್ನೂ ತಪಾಸಣೆ ನಡೆಸಿದ್ದರು. ಈ ವೇಳೆ ಅನೇಕ ವಾಹನಗಳಲ್ಲಿ ಸೂಕ್ತ ದಾಖಲಾತಿಗಳು ಇಲ್ಲದೇ ಇರುವುದು ಪತ್ತೆ ಆಗಿದೆ. ಮಾತ್ರವಲ್ಲದೆ ಚುನಾವಣಾ ಸಮಯವಾಗಿರುವುದರಿಂದ ರಾಜಕಾರಣಿಗಳು ಹಣ ಹಾಗು ಇತರೆ ವಸ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಾರೆ ಎಂಬ ಕಾರಣದಿಂದ ಅನುಮಾನಸ್ಪಾದ ವಾಹನಗಳ ಮೇಲೂ ಕಣ್ಣಿಡಲಾಗಿತ್ತು.
ನೋಟಿಸ್ ನೀಡಿ ವಾಹನಗಳ ಸೀಜ್
ರಾಜಕಾರಣಿಗಳ ಭಾವಚಿತ್ರ ಇರುವ, ಪೋಸ್ಟರ್‌ಗಳನ್ನು ಅಂಟಿಸಿಕೊಂಡಿರುವ ಆಟೋಗಳ ಮೇಲೆ ದಾಳಿ ನಡೆಸಲಾಯಿತು. 50ಕ್ಕೂ ಹೆಚ್ಚು ವಾಹನಗಳ ತಪಾಸಣೆ ಮಾಡಿ 20 ವಾಹನಗಳಿಗೆ ನೋಟಿಸ್ ನೀಡಿ, 7 ವಾಹನಗಳನ್ನು ಸೀಜ್ ಮಾಡಲಾಗಿದೆ. ಸೀಜ್ ಆದ ವಾಹನಗಳ ಪೈಕಿ ಬಹುತೇಕ ವಾಹನಗಳು ಎಲ್ಲೋ ಬೋರ್ಡ್ ಆಗಿದ್ದು, ಆರ್‌ಸಿ ಬುಕ್, ಇನ್‌ಶ್ಯೂರೆನ್ಸ್, ಎಫ್‌ಸಿ ದಾಖಲಾತಿಗಳು ಅನೇಕ ವರ್ಷಗಳ ಹಿಂದೆಯೇ ಲ್ಯಾಪ್ಸ್ ಆಗಿರುವುದು ಕಂಡು ಬಂದಿತ್ತು.
ಇದನ್ನೂ ಓದಿ: Weather Report: ವೀಕೆಂಡ್ ಮೋಜಿಗೆ ಮಳೆ ಅಡ್ಡಿ; ಕರಾವಳಿ, ಚಿಕ್ಕಮಗಳೂರು, ಹಾಸನದಲ್ಲಿ ಇನ್ನೆರಡು ದಿನ ಮಳೆ ಅಬ್ಬರ
ಪೊಲೀಸರು ಬಳಸುತ್ತಿದ್ದ ವಾಹನದಲ್ಲೇ ಇರಲಿಲ್ಲ ದಾಖಲಾತಿಗಳು!
ನೋಟಿಸ್ ಪಡೆದ 20 ವಾಹನಗಳ ಪೈಕಿ ಪೊಲೀಸರು ಬಳಸುತ್ತಿದ್ದ ಎಲ್ಲೋ ಬೋರ್ಡ್ ಇಂಡಿಕಾ ವಾಹನ ಕೂಡ ಇತ್ತು. ಕ್ರೈಂ ಪ್ರಕರಣವೊಂದರ ಸಂಬಂಧ ಈ ವಾಹನವನ್ನು ಬಳಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಲು ಬಂದಿದ್ದ ಓರ್ವ ಸಬ್ ಇನ್ಸ್‌ಪೆಕ್ಟರ್‌ಗೆ ಮೋಟರ್ ವೆಹಿಕಲ್ ಇನ್ಸ್‌ಪೆಕ್ಟರ್ ಬುದ್ಧಿವಾದ ಹೇಳಿದರು. ಪೊಲೀಸರು ಎಂಬ ಕಾರಣಕ್ಕೆ ಕಾನೂನು ಬದಲಾಯಿಸಲು ಆಗುವುದಿಲ್ಲ ಎಂದು ಸೂಚನೆ ನೀಡಿ ಅವರು ಬಳಸುತ್ತಿದ್ದ ವಾಹನಕ್ಕೂ ನೋಟಿಸ್ ನೀಡಲಾಯಿತು.