ಬೆಂಗಳೂರು: ಐಟಿ-ಬಿಟಿ ಸಿಟಿ ಬೆಂಗಳೂರಲ್ಲಿ ವೀಕೆಂಡ್ ಬಂದರೆ ಸಾಕು ಟೆಕ್ಕಿಗಳು ಔಟಿಂಗ್ ಎಂದು ಹೊರಗೆ ಹೋಗಿ ಮಸ್ತ್ ಮಜಾ ಮಾಡುತ್ತಾರೆ. ಆದರೆ, ಬೆಂಗಳೂರಿನ ಕೆಲ ಐಟಿ-ಬಿಟಿ ಮಂದಿ ಭರವಸೆ ಎಂಬ ತಂಡವೊಂದನ್ನು (Bharavase team) ಕಟ್ಟಿಕೊಂಡು ವೀಕೆಂಡ್, ಹಾಲಿಡೇ ಸಮಯದಲ್ಲಿ ಜನರಲ್ಲಿ ಮತದಾನದ (Voting Awareness) ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ (Karnataka Election 2023) ಪ್ರಕ್ರಿಯೆ ವಿವಿಧ ರೀತಿಗಳಲ್ಲಿ ರಂಗೇರುತ್ತಿದೆ. ಆದರೆ ಇದೆಲ್ಲ ಸಫಲಗೊಳ್ಳುವುದು ನಾಗರಿಕರು ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿ ಪ್ರಜಾಪ್ರಭುತ್ವದ ಮೂಲ ಉದ್ದೇಶ ಕಾಪಾಡಿಕೊಳ್ಳುವುದರಲ್ಲಿದೆ. ಆದರೆ, ಬೆಂಗಳೂರಿನ ಪಾಲಿಗೆ ಶೇಕಡ ನೂರಕ್ಕೆ ಕೇವಲ ಶೇಕಡಾ 63ರಷ್ಟು ಮಂದಿ ಮಾತ್ರ ಮತದಾನ ಮಾಡುತ್ತಿರುವುದು ಆತಂಕಕಾರಿ ಆಗಿದೆ.
ಪ್ರಜಾಪ್ರಭುತ್ವದ ಹಬ್ಬವಾಗಬೇಕಿದ್ದ ಮತದಾನದಲ್ಲಿ ಮತದಾರರು ಭಾಗವಹಿಸದೆ ಇರುವುದು ಕಂಡು ಬರುತ್ತಿದೆ. ಜನತೆ ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡದೆ ಕೇವಲ ಕೆಲವರ ಮತಗಳಿಂದ ಗೆದ್ದ ಅಭ್ಯರ್ಥಿಗಳು ಅಧಿಕಾರ ಪಡೆಯುವ ಸ್ಥಿತಿ ರೂಪುಗೊಳ್ಳುತ್ತಿದೆ. ಪರಿಸ್ಥಿತಿ ಹೀಗಿರುವಾಗ ಭರವಸೆ ತಂಡದ ಸದಸ್ಯರು ಜನರಲ್ಲಿ ಮತದಾನದ ಜಾಗೃತಿ ಮೂಡಿಸುತ್ತಿದೆ.
ಕಳೆದ ಒಂದು ತಿಂಗಳಿಂದ ನಗರದ ಪ್ರಮುಖ ಸ್ಥಳಗಳಲ್ಲಿ, ಜನ ಸಮೂಹ ಸೇರುವ ಪಾರ್ಕ್, ಹೋಟೆಲ್, ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಮತದಾನದ ಕುರಿತು ಅರಿವು ಮೂಡಿಸಲಾಗುತ್ತಿದೆ. ಜತೆಗೆ ವಿದ್ಯಾರ್ಥಿ ಸಮೂಹದಲ್ಲಿ ಸಾರ್ವಜನಿಕವಾಗಿ ಮತದಾನ ಪ್ರಾಮುಖ್ಯತೆ ಸಾರುವ ಕಾರ್ಯವನ್ನು “ವೋಟ್ ಮಾಡಿ” ಎಂಬ ಬರಹದ ಮೂಲಕ ನಡೆಸಲಾಗುತ್ತಿದೆ. ಇದರೊಂದಿಗೆ ವೋಟರ್ ಐಡಿ ಇಲ್ಲದವರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಹಾಯ ಮಾಡಲಾಗುತ್ತಿದೆ.
ಭರವಸೆ ತಂಡದ ಸಾಮಾಜಿಕ ಕಳಕಳಿ
ಉದ್ಯಾನನಗರಿ ಬೆಂಗಳೂರಲ್ಲಿ ಶೇ. 100ರಷ್ಟು ಮತದಾನ ಸಾಧಿಸಲು ಬಿಬಿಎಂಪಿ ಭಾರಿ ಸರ್ಕಸ್ ಮಾಡುತ್ತಿದೆ. ಸಾಕ್ಷರತೆ ಹೊಂದಿರುವ ಬೆಂಗಳೂರು ನಗರದಲ್ಲಿ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕಡಿಮೆ ಪ್ರಮಾಣದಲ್ಲಿ ಮತದಾನವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಮತದಾರರು ಇಲ್ಲದೆ ಮತಗಟ್ಟೆಗಳು ಖಾಲಿ ಹೊಡೆಯುತ್ತಿದ್ದವು. ಚುನಾವಣೆಗೆ ನೀರಸ ಪ್ರತಿಕ್ರಿಯೆ ಬೆಂಗಳೂರಿನಲ್ಲಿ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮತದಾರರಿಗೆ ಅರಿವು ಮೂಡಿಸುವ ಕೆಲಸವನ್ನು ಬಿಬಿಎಂಪಿ ಹಾಗೂ ಚುನಾವಣಾ ಆಯೋಗ ಮಾಡುತ್ತಿದೆ.
ಇದನ್ನೂ ಓದಿ: Karnataka Election 2023: ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ಲವೇ: ಡಿ ಕೆ ಶಿವಕುಮಾರ್ ಪ್ರಶ್ನೆ
ಅತಿ ಕಡಿಮೆ ಮತದಾನ ಆಗುವ ನಗರವೆಂದು ಬೆಂಗಳೂರನ್ನು ಕರೆಯಲಾಗಿತ್ತು. ಹೀಗಾಗಿ ಈ ಹಣೆಪಟ್ಟಿಯನ್ನು ತೆಗೆದುಹಾಕಲು ನಗರದಲ್ಲಿ ಹೆಚ್ಚು ಮತದಾನ ಆಗುವ ರೀತಿಯಲ್ಲಿ ಬಿಬಿಎಂಪಿಯಿಂದ ಹೆಚ್ಚೆಚ್ಚು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದೀಗ ಐಟಿಬಿಟಿ ಮಂದಿ ಕೂಡ ಜನರಲ್ಲಿ ಮತದಾನದ ಅರಿವು ಮೂಡಿಸಲು ಮುಂದಾಗುತ್ತಿದ್ದಾರೆ. ವಾರಾಂತ್ಯದಲ್ಲಿ ಭರವಸೆ ತಂಡ ತಮ್ಮ ಸಮಯವನ್ನು ಸಾಮಾಜಿಕ ಕಳಕಳಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಆಗಿದೆ.