ಕಲಬುರಗಿ: ಬಿಜೆಪಿ ಪಕ್ಷವು ಕಲ್ಯಾಣ ಕರ್ನಾಟಕ ಭಾಗವನ್ನೇ ಟಾರ್ಗೆಟ್ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಜಿಲ್ಲೆಯ ಚಿತ್ತಾಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗವನ್ನೇ ಬಿಜೆಪಿ ಟಾರ್ಗೆಟ್ ಮಾಡಿಕೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಖರ್ಗೆ ಅವರನ್ನು ಕಟ್ಟಿ ಹಾಕಿ ಬೇಡ ಅನ್ನುವುದಿಲ್ಲ. ಆದರೆ, ನಿಮ್ಮ ಕೈ ಸುಟ್ಟುಕೊಳ್ಳಬೇಡಿ ಎಂದು ಹೇಳಿದರು.
ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಚಿಂತೆ ಬೇಡ
ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೋಗಸ್ ಸರ್ವೇ ಮಾಡಿಸಿ ಚುನಾವಣೆಗೆ ನಿಲ್ಲದಂತೆ ಮಾಡಿದರು ಎಂಬ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಬಗ್ಗೆ ಯಾಕೆ ಚಿಂತೆ ಮಾಡುತ್ತಾರೆ. ಚಿಂತೆ ಮಾಡುವುದನ್ನು ಬಿಡಿ ಎಂದರು.
ಇದನ್ನೂ ಓದಿ: Karnataka Election 2023 : ನಾಳೆಯಿಂದ ಕಿಚ್ಚ ಸುದೀಪ್ ಪ್ರಚಾರ; ಈ ಬಾರಿ ಯಾವ ನಟ-ನಟಿಯರೆಲ್ಲಾ ಪ್ರಚಾರ ನಡೆಸಲಿದ್ದಾರೆ?
ಬಿಜೆಪಿಯವರು ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಸಿಎಂ ಕುರ್ಚಿಯಿಂದ ಕೆಳಗಿಳಿಸಿದ್ದರು. ಯಾಕೆ ಕಣ್ಣೀರು ಹಾಕಿ ಯಡಿಯೂರಪ್ಪ ಸಿಎಂ ಹುದ್ದೆ ಬಿಟ್ಟರು ಎಂದು ಬಹಿರಂಗವಾಗಿ ಮಾಡಲಿ ಸಾಕು ಎಂದು ಸವಾಲು ಹಾಕಿದರು.
ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ, ಅವರಿಗೆ ಉಜ್ವಲ ಭವಿಷ್ಯ ಇದೆ. ಆದರೆ ಒಂದು ಕಿವಿ ಮಾತು ಹೇಳುತ್ತೇನೆ. ನಿಮ್ಮ ತಂದೆಗೆ ಮಾಡಿದ ಹಾಗೇ ನಿಮಗೂ ಮಾಡಬಹುದು ಹುಷಾರ್ ಆಗಿರಿ ಎಂದು ಇದೇ ವೇಳೆ ತಿಳಿಸಿದರು.
ಪ್ರಧಾನಿ ಮೋದಿಗೆ ಪ್ರಶ್ನೆ
ಚಿತ್ತಾಪುರಕ್ಕೆ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಯಾವ ಕಾರಣಕ್ಕೆ ಚಿತ್ತಾಪುರಕ್ಕೆ ಬರುತ್ತಿದ್ದೀರ? ಏನು ಸಮರ್ಥನೆ ಮಾಡಿಕೊಳ್ಳಲು ಬರುತ್ತಿದ್ದೀರ? ಕೆಲಸ ಹಾಗೂ ಅಭಿವೃದ್ಧಿಯಾಗಿಲ್ಲ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Gold rate : ಬಂಗಾರದ ದರದಲ್ಲಿ 220 ರೂ. ಏರಿಕೆ, ಬೆಳ್ಳಿ 700 ರೂ. ತುಟ್ಟಿ
ನಿಮ್ಮ ಅಭ್ಯರ್ಥಿ ಬಗ್ಗೆ ಸಮರ್ಥನೆ ಮಾಡಿಕೊಳ್ಳಲು ಬರುತ್ತಿದ್ದೀರಾ ಎಂದು ಪ್ರಶ್ನಿಸಿದ ಪ್ರಿಯಾಂಕ ಖರ್ಗೆ ಅವರು, ಮಕ್ಕಳ ಹಾಲಿನ ಪೌಡರ್ ಕದಿಯುವವರಿಗೆ ಟಿಕೆಟ್ ನೀಡಿ ಸಮರ್ಥನೆ ಮಾಡಿಕೊಳ್ಳೋಕೆ ದಿಲ್ಲಿಯಿಂದ ಬರುತ್ತೀರ? ಎಂದು ಪ್ರಶ್ನೆ ಮಾಡಿದರು.